ಹಾವೇರಿ: ಶಿಕ್ಷಣದಿಂದ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಹೀಗಾಗಿ ಶಿಕ್ಷಣ, ಶಾಂತಿ, ನೆಮ್ಮದಿ, ಸಹಬಾಳ್ವೆ ಹಾಗೂ ಮಾನವೀಯತೆ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸಬೇಕು ಎಂಬ ಸಂದೇಶವನ್ನು ಪಾಲಕರಿಗೆ ಮೌಲಾನಾಗಳು ನೀಡಬೇಕು ಎಂದು ವಿಧಾನ ಪರಿಷತ್‌ನ ಸರ್ಕಾರಿ ಮುಖ್ಯಸಚೇತಕ ಸಲೀಂ ಅಹ್ಮದ್ ಹೇಳಿದರು.ಇಲ್ಲಿನ ರಜನಿ ಕನ್ವೆನ್ಷನ್ ಹಾಲ್‌ನಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ಮೌಲಾನಾಗಳ ಧಾರ್ಮಿಕ ಮತ್ತು ಸಾಮಾಜಿಕ ಸೇವೆಗಳ ಕುರಿತ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮೊದಲ ಬಾರಿಗೆ ಹಾವೇರಿಯಲ್ಲಿ ಉಲಮಾ ಅವರನ್ನು ಕರೆದು ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ. ಉಲಮಾದವರ ಸಮಸ್ಯೆಗಳು ಹಾಗೂ ಬೇಡಿಕೆಗಳ ಪಟ್ಟಿ ಕೊಟ್ಟಿದ್ದೀರಿ. ಅವುಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನಮ್ಮ ಸರ್ಕಾರ ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ವರ್ಗದ ಹಿತ ಕಾಯುವ ಕೆಲಸ ಮಾಡುತ್ತಿದೆ. ನಮ್ಮ ಸಮುದಾಯಕ್ಕೆ ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸಿದೆ ಎಂದರು.ಉಲಮಾಗಳ ಮೇಲೆ ದೊಡ್ಡ ಜವಾಬ್ದಾರಿ ಇದೆ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿ ಎಂಬ ಸಂದೇಶವನ್ನು ಪ್ರತಿಯೊಬ್ಬ ಪಾಲಕರಿಗೂ ತಲುಪಿಸಬೇಕು. ನಾವೆಲ್ಲ ಒಂದು, ಎಲ್ಲರೂ ಕೂಡಿ ಬಾಳಬೇಕು ಎಂಬ ಸಂದೇಶವನ್ನು ನೀಡಬೇಕು. ರಾಜ್ಯದಲ್ಲಿ ಮತದಾನದ ಪರಿಷ್ಕರಣೆ ಶುರುವಾಗಿದೆ. ಪ್ರತಿಯೊಬ್ಬ ಮತದಾರರು ಸೂಕ್ತ ದಾಖಲೆಗಳನ್ನು ಸಲ್ಲಿಸಿ ಮತದಾರರ ಪಟ್ಟಿಯಲ್ಲಿ ಹೆಸರು ಉಳಿಸಿಕೊಳ್ಳಬೇಕು ಎಂದರು.ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ಉಲಮಾಗಳು ಕೌಟುಂಬಿಕ ಸಂತೋಷವನ್ನು ಬದಿಗಿಟ್ಟು ಸಮಾಜ ಕಟ್ಟುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಮಾನವರಾಗಿ ಎಲ್ಲರೊಂದಿಗೆ ಪ್ರೀತಿ, ವಿಶ್ವಾಸದಿಂದ ಬದುಕಬೇಕು ಎಂಬುದು ಎಲ್ಲಾ ಪವಿತ್ರ ಧರ್ಮಗಳ ಸಾರ. ಅದನ್ನು ಯುವ ಪೀಳಿಗೆಗೆ ತಲುಪಿಸಬೇಕು. ಸಣ್ಣಪುಟ್ಟ ಘಟನೆಯಲ್ಲಿ ಮನಸ್ಸು ಒಡೆಯುತ್ತೆ. ಸಮಸ್ಯೆಯ ಮೂಲ ಪತ್ತೆ ಹಚ್ಚಿ ಅಲ್ಲೇ ಮದ್ದು ಕೊಡುವ ಕೆಲಸ ಮಾಡಬೇಕು. ದುಷ್ಟಶಕ್ತಿಗಳ ಶಕ್ತಿನಾಶ ಮಾಡಬೇಕು ಎಂದರು.ಹೆಸ್ಕಾಂ ಅಧ್ಯಕ್ಷ ಅಜ್ಜಂಫೀರ್ ಖಾದ್ರಿ ಮಾತನಾಡಿ, ನಮ್ಮ ಸಮುದಾಯವನ್ನು ಒಗ್ಗೂಡಿಸಿ ಅಭಿವೃದ್ಧಿಗೆ ಶ್ರಮಿಸಬೇಕು. ಸದ್ಯ ದೇಶದ ಪರಿಸ್ಥಿತಿ ಹದಗೆಟ್ಟಿದೆ. ನಮ್ಮನ್ನು ಟಾರ್ಗೆಟ್ ಮಾಡಲಾಗುತ್ತಿದ್ದು, ಅದಕ್ಕೆ ನಾವು ತಕ್ಕ ಉತ್ತರ ನೀಡಬೇಕಿದೆ. ಮಾಜಿ ಸಚಿವರಾದ ಜಮೀರ್ ಅಹ್ಮದ್ ಅವರು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ 4780 ಕೋಟಿ ರು. ಅನುದಾನ ಕೊಟ್ಟಿದ್ದಾರೆ. ಉತ್ತರ ಕರ್ನಾಟಕ ಭಾಗದ ಸಲೀಂ ಅಹ್ಮದ್ ಅವರು 40ವರ್ಷಕ್ಕೂ ಹೆಚ್ಚು ಕಾಲ ಕಾಂಗ್ರೆಸ್ ಪಕ್ಷದಲ್ಲಿ ದುಡಿದಿದ್ದಾರೆ. ಈ ಸಾರಿ ಅವರಿಗೆ ಮಂತ್ರಿ ಸ್ಥಾನ ನೀಡಬೇಕು ಎಂದು ಮನವಿ ಮಾಡಿದರು.ಶಾಸಕ ಯಾಸೀರ್‌ಖಾನ್ ಪಠಾಣ ಮಾತನಾಡಿ, ಸಮಾಜದಲ್ಲಿ ಏನಾದರೂ ಸಣ್ಣ-ಪುಟ್ಟ ಮನಸ್ತಾಪ, ವ್ಯತ್ಯಾಸಗಳು ಕಂಡು ಬಂದರೆ ಅದರಲ್ಲಿ ರಾಜಕೀಯ ಮಾಡದೇ ಕುಳಿತು ಮಾತಾಡಿ ಬಗೆಹರಿಸಿಕೊಳ್ಳಬೇಕು. ಹಾವೇರಿಯಲ್ಲಿ ಉಲಮಾ ಸೊಸೈಟಿಗೆ ಸಿಎ ಸೈಟ್ ಕೊಟ್ಟರೆ ವಕ್ಫ ಮಂಡಳಿಯಿಂದ ಅನುದಾನ ತಂದು ಕಚೇರಿ ಮಾಡಿದರೆ ಅನುಕೂಲ ಆಗಲಿದೆ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷ, ಕಲುಬುರಗಿಯ ಹಜರತ್ ಖ್ವಾಜಾ ಬಂದೇನವಾಜಾ ದರ್ಗಾದ ಉಲಮಾ ಸೈಯದ್ ಮೊಹಮ್ಮದಅಲಿ ಅಲ್‌ಹುಸೇನಿ ಮಾತನಾಡಿ, ಸಮಾಜದಲ್ಲಿನ ಶಾಂತಿ, ಸೌಹಾರ್ದತೆ ಮತ್ತು ಮಾನವೀಯ ಮೌಲ್ಯಗಳ ಬಗ್ಗೆ ಜಾಗೃತಿ ಮೂಡಿಸಿದರು. ಶಿಕ್ಷಣ, ನೈತಿಕತೆ, ಯುವ ಜನರ ಸಬಲೀಕರಣ ಹಾಗೂ ಶಾಂತಿ, ಸಹೋದರತೆ, ಸರ್ವಧರ್ಮದ ಸಮಭಾವಗಳ ಸಂದೇಶ ಸಾರಿದರು. ರಾಜ್ಯ ಉಲಮಾ ಸೊಸೈಟಿ ಅಧ್ಯಕ್ಷರಾದ ಮೌಲಾನಾ ಸೈಯದ್ ಮೊಯಿನುದ್ದೀನ ಅಧ್ಯಕ್ಷತೆ ವಹಿಸಿದ್ದರು. ಸಮಾವೇಶದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಮೌಲಾನಾ ಫಾಝಿಲ್, ಸೈಯದ್‌ಷಾ ಹೈದರ್‌ವಲಿವುಲ್ಲಾ ನಬೀರಾ ಖಾದ್ರಿ, ಮಾಜಿ ಶಾಸಕ ವಿ.ಎಸ್. ಪಾಟೀಲ, ಹಜರತ್‌ಅಲಿ ಸುಳ್ಳ, ಹಜರತ್ ಸೈಯದ್ ಮೈನುದ್ದೀನ್ ಸರಖಾಜಿ, ಮೌಲಾನಾ ಅಬ್ದುಲ್ ಅಲೀಮ್‌ಸಾಬ್, ಸೈಯದ್ ದಾದಾಪೀರ್, ಮೌಲಾನಾ ಇಬ್ರಾಹಿಂಸಾಬ್, ಹಾಫೀಜ್ ಸಾಕಮುಲ್ಲಾ, ಜಾಫರ್‌ರಜಾ, ಮಹ್ಮದ್ ರಿಜ್ವಾನ್, ಗುಲಾಮ್ ಮುಸ್ತಫಾ, ಇನಾಯತ್‌ಉಲ್ಲಾ, ರಹಮತ್‌ರಜಾ, ಜಹಿಮುದ್ದೀನ, ಅಂಜುಮನ್ ಕಮೀಟಿ ಸದಸ್ಯ ಜಮೀರ್ ಅಹ್ಮದ್ ಜಿಗರಿ ಸೇರಿದಂತೆ ಇತರರು ಇದ್ದರು.
ಶಿಕ್ಷಣ, ಸಹಬಾಳ್ವೆ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು-ಸಲೀಂ ಅಹ್ಮದ್
ಶಿಕ್ಷಣದಿಂದ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಹೀಗಾಗಿ ಶಿಕ್ಷಣ, ಶಾಂತಿ, ನೆಮ್ಮದಿ, ಸಹಬಾಳ್ವೆ ಹಾಗೂ ಮಾನವೀಯತೆ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸಬೇಕು ಎಂಬ ಸಂದೇಶವನ್ನು ಪಾಲಕರಿಗೆ ಮೌಲಾನಾಗಳು ನೀಡಬೇಕು ಎಂದು ವಿಧಾನ ಪರಿಷತ್‌ನ ಸರ್ಕಾರಿ ಮುಖ್ಯಸಚೇತಕ ಸಲೀಂ ಅಹ್ಮದ್ ಹೇಳಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.