ಮಕ್ಕಳು ಅಭ್ಯಾಸದ ಜತೆ ಆತ್ಮಸ್ಥೈರ್ಯ ಹೊಂದಬೇಕು: ತಹಸೀಲ್ದಾರ್ ಮಮತಾ ಎಂ.

| Published : Jun 16 2024, 01:46 AM IST

ಮಕ್ಕಳು ಅಭ್ಯಾಸದ ಜತೆ ಆತ್ಮಸ್ಥೈರ್ಯ ಹೊಂದಬೇಕು: ತಹಸೀಲ್ದಾರ್ ಮಮತಾ ಎಂ.
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳು ತಮ್ಮ ಮುಂದಿನ ಬದುಕಿನ ಗುರಿಯನ್ನು ತಲುಪಲು ಅಭ್ಯಾಸದ ಜತೆಗೆ ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು ಎಂದು ಬೇಲೂರು ತಹಸೀಲ್ದಾರ್ ಮಮತಾ ಎಂ. ಹೇಳಿದರು. ಬೇಲೂರಿನಲ್ಲಿ ಆಯೋಜಿಸಿದ್ದ ಮಹಿಳಾ ಪರ ಹೋರಾಟಗಾರ್ತಿ ಡಾ.ವಿಜಯಾದಬ್ಬೆ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾಹಿತಿ ಡಾ.ವಿಜಯದಬ್ಬೆ ಜನ್ಮದಿನ । ಪ್ರತಿಭಾ ಪುರಸ್ಕಾರ

ಕನ್ನಡಪ್ರಭ ವಾರ್ತೆ ಬೇಲೂರು

ವಿದ್ಯಾರ್ಥಿಗಳು ತಮ್ಮ ಮುಂದಿನ ಬದುಕಿನ ಗುರಿಯನ್ನು ತಲುಪಲು ಅಭ್ಯಾಸದ ಜತೆಗೆ ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು ಎಂದು ಬೇಲೂರು ತಹಸೀಲ್ದಾರ್ ಮಮತಾ ಎಂ. ಹೇಳಿದರು.

ಪಟ್ಟಣದ ಬಸ್ ನಿಲ್ದಾಣ ಮುಂಭಾಗದಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡ ಸಾಹಿತಿ ಹಾಗೂ ಮಹಿಳಾ ಪರ ಹೋರಾಟಗಾರ್ತಿ ಡಾ.ವಿಜಯಾದಬ್ಬೆ ಅವರ ಜನ್ಮದಿನ ಹಾಗೂ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಕನ್ನಡ ಭಾಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟನೆ ನಡೆಸಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಜತೆ ಶಾಲಾ ಕಾಲೇಜುಗಳಲ್ಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಅವಕಾಶಗಳನ್ನು ಸದ್ಬಳಿಕೆ ಮಾಡಿಕೊಳ್ಳಬೇಕು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸ್ವಾಗತಾರ್ಹ ಎಂದು ಹೇಳಿದರು.

ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಬಿ.ಬಿ.ಶಿವರಾಜ್ ಮಾತನಾಡಿ, ಕಳೆದ ನಾಲ್ಕು ದಶಕಗಳಿಂದ ಬೇಲೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕಲೆ, ನೃತ್ಯ, ಸಂಗೀತ, ಸಾಹಿತ್ಯ, ಜಾನಪದ ಸೇರಿದಂತೆ ಹತ್ತಾರು ಕ್ಷೇತ್ರದಲ್ಲಿ ಅದ್ವಿತೀಯ ಕೆಲಸದೊಂದಿಗೆ ಎಲೆಮರೆಯಲ್ಲಿನ ಪ್ರತಿಭೆಗಳಿಗೆ ಉತ್ತಮ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸುತ್ತ ಬಂದಿದೆ. ಪ್ರತಿ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಕನ್ನಡ ಭಾಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪುರಸ್ಕಾರ ನಡೆಸುತ್ತ ಬಂದಿದೆ. ಪ್ರಸಕ್ತ ವರ್ಷದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುತ್ತ ಬಂದಿರುವ ಸಾಹಿತ್ಯ ಪರಿಷತ್ತಿಗೆ ಶಾಶ್ವತವಾದ ನಿವೇಶನ ಮತ್ತು ಕಟ್ಟಡ ಇಲ್ಲವಾದ ಹಿನ್ನೆಲೆಯಲ್ಲಿ ಸಂಬಂಧಪಟ್ಟವರು ಗಮನ ಹರಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಬಿ.ಎಲ್.ರಾಜೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ್, ಪ್ರಾಂಶುಪಾಲ ಹರೀಶ್, ಕಾಫಿ ಬೆಳೆಗಾರ ನಾಗರಾಜ್, ಸಾಹಿತಿ ಎಚ್.ಕೆ.ಮಹೇಶ್ ಭರದ್ವಾಜ್, ಸಾಹಿತಿ ಇಂದಿರಮ್ಮ, ಕಸಾಪ ಮಾಜಿ ಅಧ್ಯಕ್ಷ ಮ.ಶಿವಮೂರ್ತಿ, ಆರ್.ಎಸ್.ಮಹೇಶ್, ಮಾ.ನ.ಮಂಜೇಗೌಡ, ಬೊಮ್ಮಡಿಹಳ್ಳಿ ಕುಮಾರಸ್ವಾಮಿ, ಹೋಬಳಿ ಅಧ್ಯಕ್ಷರಾದ ಕಮಲಚನ್ನಪ್ಪ, ಚನ್ನೇಗೌಡ, ಹಾಸನ ಕಸಾಪ ಗೌರವಾಧ್ಯಕ್ಷ ಜಾವಗಲ್ ಪ್ರಸನ್ನ ಹಾಜರಿದ್ದರು.ಫೋಟೋ: ಬೇಲೂರಿನ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಎಸ್‌ಎಸ್‌ಎಲ್‌ಸಿ, ಪಿಯುಸಿ ಕನ್ನಡ ಭಾಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವ, ಲೇಖಕಿ ವಿಜಯಾದಬ್ಬೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.