ಸಾರಾಂಶ
- ಕಸಾಪದಿಂದ ಎಸ್‌ಎಸ್‌ಎಲ್‌ಸಿಯಲ್ಲಿ ಕನ್ನಡದಲ್ಲಿ ಪೂರ್ಣಾಂಕ ಪಡೆದ ಮಕ್ಕಳಿಗೆ ಪುರಸ್ಕಾರ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಮಕ್ಕಳು ಶಾಲಾ ಹಂತದಲ್ಲೇ ಪರಿಸರ ಪ್ರೇಮ ಬೆಳೆಸಿಕೊಳ್ಳಬೇಕು ಎಂದು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯ ನಂಜುಂಡಸ್ವಾಮಿ ಕರೆ ನೀಡಿದರು.
ಸೋಮವಾರ ಅಳಲಗೆರೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತಾಲೂಕು ಕಸಾಪ ಏರ್ಪಡಿಸಿದ್ದ ಎಸ್ಎಸ್ ಎಲ್ ಸಿಯಲ್ಲಿ ಕನ್ನಡದಲ್ಲಿ 125 ಅಂಕ ಪಡೆದ ಮಕ್ಕಳಿಗೆ ಪುರಸ್ಕಾರ ಕಾರ್ಯಕ್ರಮದಲ್ಲಿ ಪರಿಸರ ಉಳಿಸಿ, ನಾಡು ಬೆಳೆಸಿ ಎಂಬ ವಿಷಯದ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿದರು. ಪ್ರಸ್ತುತ ನಗರ ಪ್ರದೇಶದಲ್ಲಿ ಪರಿಸರ ಸಂಪೂರ್ಣ ಹಾಳಾಗಿದೆ. ಗ್ರಾಮೀಣ ಭಾಗದಲ್ಲಿ ಈಗಲೂ ಒಳ್ಳೆಯ ಗಾಳಿ ಸಿಗುತ್ತಿದೆ. ನಾವು ಭೂಮಿ ತಾಯಿ ರಕ್ಷಣೆ ಮಾಡಬೇಕಾಗಿದೆ.ಕಾಡು ನಾಶವಾಗುತ್ತಿರುವುದರಿಂದ ಮಳೆ ಕಡಿಮೆಯಾಗುತ್ತಿದೆ.ಒಂದೊಂದು ಹನಿ ನೀರು ಅಮೂಲ್ಯಎಂದರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪೂರ್ಣೇಶ್ ಮಾತನಾಡಿ,ಎಸ್ಎಸ್ ಎಲ್ ಸಿಯಲ್ಲಿ 125 ಅಂಕ ಪಡೆದ ಮಕ್ಕಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲಾ ಶಾಲೆಗಳಲ್ಲೂ ಉತ್ತಮ ಅಂಕ ಪಡೆದ ಮಕ್ಕಳನ್ನು ಗುರುತಿಸಿ ಅಭಿನಂದಿಸುವ ಕಾರ್ಯಕ್ರಮ ಮಾಡುತ್ತೇವೆ. ಅಲ್ಲದೆ ಜಾನಪದ ಹಾಡು, ನೃತ್ಯ ಸೇರಿದಂತೆ ವಿವಿಧ ಸ್ಪರ್ಧೆ ಹಮ್ಮಿಕೊಳ್ಳುತ್ತೇವೆ. ಈಗಾಗಲೇ ತಾ.ಕಸಾಪದಿಂದ ಮಕ್ಕಳಿಗೆ ಕನ್ನಡದಲ್ಲಿ ಸುಂದರ ಕೈ ಬರಹ ಸ್ಪರ್ಧೆ ಹಾಗೂ ಶಿಕ್ಷಕರಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು.ಇದರಲ್ಲಿ ವಿಜೇತರಾದವರಿಗೆ ಮುಂದೆ ನಡೆಯುವ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಹುಮಾನ ನೀಡಲಾಗುವುದು ಎಂದರು.
ಅತಿಥಿಯಾಗಿದ್ದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲರಾದ ಪೂರ್ಣಿಮ ಮಾತನಾಡಿ, ಜಿಲ್ಲೆಯಲ್ಲಿರುವ 34 ವಸತಿ ಶಾಲೆಗಳ ಪೈಕಿ ನಮ್ಮ ಮೊರಾರ್ಜಿ ದೇಸಾಯಿ ವಸತಿ ಶಾಲೆ ಎಸ್ಎಸ್ ಎಲ್ ಸಿ ಯಲ್ಲಿ ದ್ವಿತೀಯ ಸ್ಥಾನ ಪಡೆದಿದೆ. ಎಸ್ಎಸ್ ಎಲ್ ಸಿಯಲ್ಲಿ ಶೇ.100 ರಷ್ಟು ಫಲಿತಾಂಶ ಪಡೆದಿದ್ದು ಇದಕ್ಕೆ ನಮ್ಮ ಶಾಲೆ ಸಹ ಶಿಕ್ಷಕರು, ಸಿಬ್ಬಂದಿ ಸಹಕಾರ ಕಾರಣ. ಪ್ರಸ್ತುತ ಮೊರಾರ್ಜಿ ದೇಸಾಯಿ ವಸತಿ ಶಾಲೆ ಉತ್ತಮ ಹೆಸರು ಪಡೆದಿದೆ ಎಂದರು.ಮೆಣಸೂರು ಗ್ರಾಪಂ ಅಧ್ಯಕ್ಷೆ ಬಿಂದು ಸತೀಶ್ ಉದ್ಘಾಟಿಸಿದರು. ಸದಸ್ಯ ಶ್ರೀನಾಥ್,ಅತಿಥಿಗಳಾಗಿ ಕಿತ್ತೂರು ರಾಣಿ ವಸತಿ ಶಾಲೆ ಪ್ರಾಂಶುಪಾಲ ಅಜ್ಜಪ್ಪ, ಕಸಾಪ ಮಹಿಳಾ ಘಟಕದ ಕಾರ್ಯದರ್ಶಿ ಶಶಿಕಲಾ, ವಸಂತಿ, ಜೇಸಿ ವಲಯ ಅಧಿಕಾರಿ ಚರಣರಾಜ್ ಇದ್ದರು.
ಇದೇ ಸಂದರ್ಭದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲೆ ಪೂರ್ಣಿಮ ಅವರಿಗೆ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಯಿತು. ಶಾಲೆಯಲ್ಲಿ ಎಸ್ಎಸ್ ಎಲ್ ಸಿಯಲ್ಲಿ ಕನ್ನಡದಲ್ಲಿ ಪೂರ್ಣಾಂಕ ಪಡೆದ ಪಿ.ಮಾನ್ಯ, ಅಕ್ಕಮಹಾದೇವಿ, ಶೋಭಾ ಅವರಿಗೆ ಸಾಧಕ ಪುರಸ್ಕಾರ ನೀಡಿ ಗೌರವಿಸಲಾಯಿತು. ಸತತ 10 ವರ್ಷದಿಂದ ಉತ್ತಮ ಅಡುಗೆ ಮಾಡುತ್ತಿರುವ ಸುಜಾತ, ಮಂಜುಳ, ಗೋಪಾಲಕೃಷ್ಣ ಅವರಿಗೆ ಸೇವಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಜೇಸಿ ವಲಯ ಅಧಿಕಾರಿ ಚರಣರಾಜ್ ಅವರು ಎಸ್ಎಸ್ ಎಲ್ ಸಿ ಯಲ್ಲಿ ಕನ್ನಡದಲ್ಲಿ ಪೂರ್ಣಾಂಕ ಪಡೆದ ಪಿ.ಮಾನ್ಯ, ಅಕ್ಕಮಹಾದೇವಿ, ಶೋಭಾ ಅವರಿಗೆ ನಗದು ಹಾಗೂ ಶಾಲು ಹೊದಿಸಿ ಸನ್ಮಾನಿಸಿದರು.