ಇಂದಿನ ಮಕ್ಕಳೆ ನಾಳಿನ ಭವ್ಯ ಭಾರತದ ಪ್ರಜೆಗಳು, ಮಕ್ಕಳೆಂದರೆ ಮುಗ್ಧತೆಯ ಪ್ರತಿರೂಪ. ಮಕ್ಕಳು ಭವಿಷ್ಯದಲ್ಲಿ ಉತ್ತಮ ನಾಗರಿಕಾಗಿ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಬಿ.ರಾಜೇಶ್ವರಿ ತಿಳಿಸಿದರು.
ಹಾನಗಲ್ಲ: ಇಂದಿನ ಮಕ್ಕಳೆ ನಾಳಿನ ಭವ್ಯ ಭಾರತದ ಪ್ರಜೆಗಳು, ಮಕ್ಕಳೆಂದರೆ ಮುಗ್ಧತೆಯ ಪ್ರತಿರೂಪ. ಮಕ್ಕಳು ಭವಿಷ್ಯದಲ್ಲಿ ಉತ್ತಮ ನಾಗರಿಕಾಗಿ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಬಿ.ರಾಜೇಶ್ವರಿ ತಿಳಿಸಿದರು. ಪಟ್ಟಣದ ರೋಶನಿ ಶಾಲೆಯಲ್ಲಿ, ರೋಶನಿ ಸಮಾಜ ಸೇವಾ ಸಂಸ್ಥೆ ಮಕ್ಕಳ ದಿನಾಚರಣೆ ಪ್ರಯುಕ್ತ ಆಯೋಜಿಸಿದ ವಿವಿಧ ಸ್ಪರ್ಧೆ ಹಾಗೂ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಮಕ್ಕಳು ದೇಶಾಭಿಮಾನ ಬೆಳೆಸಿಕೊಂಡು, ಸಕಾರಾತ್ಮಕ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಪ್ರಜೆಯಾಗಿ ಹೊರಹೊಮ್ಮಬೇಕು ಎಂದರು. ರೋಶನಿ ಸಮಾಜ ಸೇವಾ ಸಂಸ್ಥೆಯ ನಿರ್ದೇಶಕಿ ಅನಿತಾ ಡಿಸೋಜಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳು ಮೊಬೈಲ್‌ನಿಂದ ದೂರವಿದ್ದು ಪುಸ್ತಕ ಪ್ರೇಮಿಯಾದಾಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ. ಮಕ್ಕಳ ಸಾಧನೆಗೆ ಮುಂದೆ ಗುರಿ ಹಿಂದೆ ಗುರು ಇರಬೇಕು. ಗುರುವಾಗಿ ರೋಶನಿ ಸಮಾಜ ಸೇವಾ ಸಂಸ್ಥೆ ಯಾವಾಗಲೂ ನಿಮ್ಮೊಂದಿಗಿದೆ. ಇದರ ಸದುಪಯೋಗ ಪಡೆದುಕೊಳ್ಳಿ ಎಂದರು. ಭಾವಗೀತೆ ಸ್ಪರ್ಧೆಯಲ್ಲಿ ರಾಜ್ಯ ಪ್ರಶಸ್ತಿ ಪಡೆದ ವಿದ್ಯಾರ್ಥಿನಿ ಅನಘಾ ಹಿರೇಮಠ ಮಾತನಾಡಿ, ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣು ಎಂಬ ನಾಡ್ನುಡಿಯಂತೆ, ನಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಪಾಲಕರು ಶಿಕ್ಷಕರು ಪ್ರೋತ್ಸಾಹಿಸಿದಾಗ ಮಾತ್ರ ಸಾಧನೆ ಮಾಡಲು ಸಾಧ್ಯ. ಜೊತೆಗೆ ಜ್ಞಾನ ಭಂಡಾರವನ್ನು ಅರಿತು ಭವಿಷ್ಯದ ಉತ್ತಮ ಪ್ರಜೆಯಾಗಲು ಸಾಧ್ಯ ಎಂದರು. ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣಪ್ಪ ಹರಿಜನ, ಶಿಕ್ಷಣಪ್ರೇಮಿ ರಾಮಚಂದ್ರ ಕಲ್ಲೇರ ಮಾತನಾಡಿ, ಜೀವನದಲ್ಲಿ ಪ್ರಯತ್ನ ಹಾಗೂ ತಾಳ್ಮೆ ಬಹು ಮುಖ್ಯ. ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ, ಪಾಲಕರಾದ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕಾಗಿದೆ. ರೋಶನಿ ಸಂಸ್ಥೆಯು ಮಕ್ಕಳ ಪ್ರತಿಬೆಯನ್ನು ಗುರುತಿಸಿ ಅವರಿಗೆ ವೇದಿಕೆ ಕಲ್ಪಿಸಿಕೊಟ್ಟಿದೆ, ಸಂಸ್ಥೆಯ ಕಾರ್ಯ ಅನುಕರಣಿಯ ಎಂದರು. ವಿವಿಧ ಸ್ಪರ್ದೆಗಳ ನಿರ್ಣಾಯಕರಾಗಿ ಸಂಜನಾ ಬಸವಂತಕರ, ಸುನೀತಾ ಕೊಳಲ್ ಕಾರ್ಯ ನಿರ್ವಹಿಸಿದರು. ಹುಣಸಿಕಟ್ಟಿ ಮಕ್ಕಳ ಪಂಚಾಯಿತಿ ಪ್ರತಿನಿಧಿಗಳು ಪ್ರಥಮ ದ್ಯಾಮನಕೊಪ್ಪ ಮಕ್ಕಳ ಪಂಚಾಯಿತಿ ಪ್ರತಿನಿಧಿಗಳು ದ್ವಿತೀಯ, ಗುಂಡೂರು ಮಕ್ಕಳ ಪಂಚಾಯಿತಿ ಪ್ರತಿನಿಧಿಗಳು ತೃತೀಯ ಬಹುಮಾನ ಪಡೆದುಕೊಂಡರು.ಕಾರ್ಯಕ್ರಮದಲ್ಲಿ ಇರ್ಪಾನ ನಾಗರೊಳ್ಳಿ, ಕಲಿಂ ಮಾಸನಕಟ್ಟಿ, ಮಕ್ಕಳ ಪಾಲಕರು, ರೋಶನಿ ಸಂಸ್ಥೆಯ ಸಿಬ್ಬಂದಿ ವರ್ಗ ಮತ್ತು ಆಲದಕಟ್ಟಿ, ದ್ಯಾಮನಕೊಪ್ಪ, ಗುಂಡೂರು, ರತ್ನಾಪುರ, ಕಲ್ಲಾಪುರ, ಯತ್ನಳ್ಳಿ, ಶ್ಯಾಡಗುಪ್ಪಿ, ಹುಣಸಿಕಟ್ಟಿ, ಸಾಂವಸಗಿ ಬಾಳಂಬೀಡ ಗ್ರಾಮದ 250ಕ್ಕೂ ಹೆಚ್ಚು ಮಕ್ಕಳ ಪಂಚಾಯತಿ ಪ್ರತಿನಿಧಿಗಳು ಭಾಗವಹಿಸಿದ್ದರು. ಮಕ್ಕಳ ಪಂಚಾಯಿತಿ ಪ್ರತಿನಿಧಿ ನೀಲಮ್ಮ ಸ್ವಾಗತಿಸಿದರು. ಪ್ರಿಯಾ ಕುಲಕರ್ಣಿ ನಿರೂಪಿಸಿದರು. ರೇಣುಕಾ ವಂದಿಸಿದರು.