ಸಾರಾಂಶ
ಪುಟ್ಟ ಮಕ್ಕಳು ಪೋಷಕರು ಹಾಗೂ ಶಾಲಾ ಶಿಕ್ಷಕರ ಸಲಹೆಗಳನ್ನು ತಪ್ಪದೆ ಪಾಲಿಸಬೇಕು ಎಂದು ಅತಿಶಯ ಕ್ಷೇತ್ರ ಸಿಂಹನಗದ್ದೆ ಬಸ್ತಿಮಠದ ಶ್ರೀ ಲಕ್ಷ್ಮಿಸೇನ ಭಟ್ಟಾರಕ ಸ್ವಾಮೀಜಿಗಳು ಕರೆ ನೀಡಿದರು.
- ಮಹಾ ವೀರಭವನದಲ್ಲಿ ಶ್ರೀ ಜ್ವಾಲಾಮಾಲಿನಿ ದೇವಿ ಆಂಗ್ಲ ಮಾದ್ಯಮಶಾಲೆಯ ಮಕ್ಕಳ ಗ್ರ್ಯಾಜ್ಯುಯೇಷನ್ ಡೇ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಪುಟ್ಟ ಮಕ್ಕಳು ಪೋಷಕರು ಹಾಗೂ ಶಾಲಾ ಶಿಕ್ಷಕರ ಸಲಹೆಗಳನ್ನು ತಪ್ಪದೆ ಪಾಲಿಸಬೇಕು ಎಂದು ಅತಿಶಯ ಕ್ಷೇತ್ರ ಸಿಂಹನಗದ್ದೆ ಬಸ್ತಿಮಠದ ಶ್ರೀ ಲಕ್ಷ್ಮಿಸೇನ ಭಟ್ಟಾರಕ ಸ್ವಾಮೀಜಿಗಳು ಕರೆ ನೀಡಿದರು.
ಶನಿವಾರ ಮಹಾವೀರಭವನದಲ್ಲಿ ಶ್ರೀ ಜ್ವಾಲಾಮಾಲಿನಿ ದೇವಿ ಆಂಗ್ಲ ಮಾದ್ಯಮ ಶಾಲೆ 2023-24 ನೇ ಸಾಲಿನ ಯು.ಕೆ.ಜಿ ಮಕ್ಕಳ ಗ್ಯ್ರಾಜ್ಯುಯೇಷನ್ ಡೇ ಕಾರ್ಯಕ್ರಮದ ದಿವ್ಯ ಸಾನ್ನಿದ್ಯ ವಹಿಸಿ ಮಾತನಾಡಿದರು. ಶಾಲೆಗಳಲ್ಲಿ ಮುಗ್ದ ಮಕ್ಕಳ ಮನಸ್ಸಿಗೆ ಮುದ ನೀಡುವ ವಾತಾವರಣ ನಿರ್ಮಾಣವಾಗಬೇಕು. ಪೋಷಕರು ಪ್ರೀತಿಯಿಂದ ತಮ್ಮ ಪುಟ್ಟ ಮಕ್ಕಳಿಗೆ ಕೇಳಿದ ಎಲ್ಲಾ ವಸ್ತುಗಳು ನೀಡಬಾರದು. ಇದರಿಂದ ಮಕ್ಕಳು ಬೆಳೆದಂತೆಲ್ಲಾ ಹಠ ಮಾರಿತನವೂ ಬೆಳೆಯುತ್ತದೆ. ಈ ವರ್ಷ ಬಿಸಿಲಿನ ಝಳ ಜಾಸ್ತಿಯಾಗಿರುವುದರಿಂದ ರಜಾ ಅವದಿಯಲ್ಲಿ ಮಕ್ಕಳನ್ನು ಜಾಗ್ರತೆಯಿಂದ ನೋಡಿ ಕೊಂಡು ಹೊರಗಡೆ ಆಹಾರಕ್ಕಿಂತ ಮನೆಯಲ್ಲೇ ತಯಾರಿಸಿದ ಆಹಾರ ನೀಡುವುದು ಸೂಕ್ತ ಎಂದು ಕಿವಿ ಮಾತು ಹೇಳಿದರು.ಮುಖ್ಯ ಅತಿಥಿಯಾಗಿದ್ದ ಜ್ವಾಲಾಮಾಲಿನಿ ಬಾಲಿಕಾ ಪ್ರೌಢ ಶಾಲೆ ಶಿಕ್ಷಕ ಗುಣಪಾಲ್ ಜೈನ್ ಉದ್ಘಾಟಿಸಿ ಮಾತನಾಡಿ, ಈ ಮಕ್ಕಳು ಪೂರ್ವ ಪ್ರಾಥಮಿಕ ಹಂತ ಕಳೆದು ಪ್ರಾಥಮಿಕ ಹಂತಕ್ಕೆ ಕಾಲಿಡುತ್ತಿದ್ದಾರೆ. ಕಳೆದ 2 ವರ್ಷದಿಂದ ಈ ಶಾಲೆಯಲ್ಲಿ ವಿನೂತನವಾದ ಗ್ರ್ಯಾಜ್ಯುಯೇಷನ್ ಡೇ ಕಾರ್ಯಕ್ರಮ ಆಚರಿಸಲಾಗುತ್ತಿದೆ. ಪೋಷಕರು ಇಂದಿನ ಗೋಜಲು ಗೂಡಾಗಿರುವ ಶಿಕ್ಷಣ ಪದ್ದತಿ ಕುರಿತು ಅವಲೋಕನ ಮಾಡಬೇಕಾಗುತ್ತದೆ. ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ಶಾಲೆಯಲ್ಲಿ ಹಾಗೂ ಮನೆಯಲ್ಲೂ ನೀಡಬೇಕು ಎಂದು ಪೋಷಕರಿಗೆ ಕರೆ ನೀಡಿದರು.
ಶ್ರೀ ಜ್ವಾಲಾಮಾಲಿನಿ ದೇವಿ ಆಂಗ್ಲ ಮಾದ್ಯಮ ಶಾಲೆ ಮುಖ್ಯೋಪಾಧ್ಯಾಯಿನಿ ಎಚ್.ಎನ್.ಅವನಿ, ಪಾಲಕ ಪೋಷಕ ಸಮಿತಿಯ ಅಧ್ಯಕ್ಷೆ ಸುಚಿತ್ರ ಹಾಗೂ ಇತರ ಬೋಧಕರು ಉಪಸ್ಥಿತರಿದ್ದರು. ನಂತರ ಯುಕೆಜಿ ಮಕ್ಕಳಿಗೆ ಪ್ರಶಸ್ತಿ ಪತ್ರ ಪ್ರಧಾನ ಮಾಡಲಾಯಿತು. ವಿನಯ ಸ್ವಾಗತಿಸಿದರು. ಪ್ರಿನ್ಸಿ ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದ ಅಂಗವಾಗಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.