ಸಾರಾಂಶ
ಹದಿ ಹರೆಯದ ಮಕ್ಕಳಲ್ಲಾಗುವ ದೈಹಿಕ ಬದಲಾವಣೆ ಮತ್ತು ಮಾನಸಿಕ ಭಾವನೆಗಳ ಬದಲಾವಣೆಯೂ ವಯೋಸಹಜ ಎನ್ನುವುದನ್ನು ಅರ್ಥೈಸಿ, ಸಮಾಜಕ್ಕೆ ಸಂಪನ್ಮೂಲ ವ್ಯಕ್ತಿಗಳನ್ನಾಗಿ ರೂಪಿಸಿಸುವುದೇ ಈ ಕಾರ್ಯಕ್ರಮದ ಉದ್ದೇಶವೆಂದು ಆರ್.ಬಿ.ಎಸ್.ಕೆ ಮತ್ತು ಆರ್.ಕೆ.ಎಸ್.ಕೆ ಉಪ ನಿರ್ದೇಶಕಿ ಡಾ. ವೀಣಾ ಹೇಳಿದರು.
ಗದಗ: ಹದಿ ಹರೆಯದ ಮಕ್ಕಳಲ್ಲಾಗುವ ದೈಹಿಕ ಬದಲಾವಣೆ ಮತ್ತು ಮಾನಸಿಕ ಭಾವನೆಗಳ ಬದಲಾವಣೆಯೂ ವಯೋಸಹಜ ಎನ್ನುವುದನ್ನು ಅರ್ಥೈಸಿ, ಸಮಾಜಕ್ಕೆ ಸಂಪನ್ಮೂಲ ವ್ಯಕ್ತಿಗಳನ್ನಾಗಿ ರೂಪಿಸಿಸುವುದೇ ಈ ಕಾರ್ಯಕ್ರಮದ ಉದ್ದೇಶವೆಂದು ಆರ್.ಬಿ.ಎಸ್.ಕೆ ಮತ್ತು ಆರ್.ಕೆ.ಎಸ್.ಕೆ ಉಪ ನಿರ್ದೇಶಕಿ ಡಾ. ವೀಣಾ ಹೇಳಿದರು.
ನಗರದ ಪ. ಭೀಮಸೇನ ಜೋಶಿ ಜಿಲ್ಲಾ ರಂಗಮಂದಿರದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಪಂ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮದ ಸಂಯುಕ್ತಾಶ್ರಯದಲ್ಲಿ ಸಮಾಲೋಚನಾ ಸಂಗಮ-2ರ ರಾಜ್ಯ ಮಟ್ಟದ ಆಪ್ತ ಸಮಾಲೋಚಕರ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮೊಟ್ಟ ಮೊದಲು 8 ಜಿಲ್ಲೆಗಳಲ್ಲಿ ಪ್ರಾರಂಭವಾದ ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮವು ಇವತ್ತಿಗೆ 25 ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಜರಗುತ್ತಿವೆ. ಎಲ್ಲಾ ಜಿಲ್ಲೆಯ ಆರ್.ಸಿ.ಎಚ್ ಅಧಿಕಾರಿಗಳು, ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು, ಆರೋಗ್ಯ ಅಧಿಕಾರಿಗಳು ಮತ್ತು ಆಶಾ ಕಾರ್ಯಕರ್ತೆಯರ ಪಾತ್ರ ಹಿರಿದಾಗಿದೆ ಎಂದು ಅಭಿನಂದಿಸಿದರು.ಅಧ್ಯಕ್ಷತೆಯನ್ನು ವಹಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ. ಎಸ್.ಎಸ್. ನೀಲಗುಂದ ಮಾತನಾಡಿ, ಮಕ್ಕಳು ತಮ್ಮ ಕಿಶೋರ ವ್ಯವಸ್ಥೆಯಲ್ಲಿ ಎಲ್ಲದರ ಬಗ್ಗೆಯೂ ಕುತೂಹಲದಿಂದಿರುತ್ತಾರೆ. ತಮ್ಮಲ್ಲಾಗುವ ದೈಹಿಕ ಮತ್ತು ಮಾನಸಿಕ ಬದಲಾವಣೆಗೆ ವಿಚಲಿತಗೊಳ್ಳದೆ ಮತ್ತು ಧೂಮಪಾನ ಮತ್ತು ಮದ್ಯಪಾನದಂತಹ ವ್ಯಸನಗಳಿಗೆ ಬಲಿಯಾಗದೇ ಉತ್ತಮ ಶಿಕ್ಷಣವನ್ನು ಪಡೆದು ಸಫಲತೆಯನ್ನು ಹೊಂದಿದಾಗ ಇಂತಹ ಕಾರ್ಯಗಾರ ಸಾರ್ಥಕತೆ ಹೊಂದುತ್ತದೆ ಎಂದರು.ಡಾ. ಅರುಂಧತಿ.ಕೆ.ಮಾತನಾಡಿ, ಸಮಾಲೋಚನಾ ಸಂಗಮ-2, ರಾಜ್ಯ ಮಟ್ಟದ ಆಪ್ತಸಮಾಲೋಚನಾ ಕಾರ್ಯಗಾರವನ್ನು ನಡೆಸುತ್ತಿರುವುದು ಹೆಮ್ಮೆಯ ಸಂಗತಿ, ವಿವಿಧ ಭಾಗಗಳಿಂದ ಬಂದ ವಿದ್ಯಾರ್ಥಿಗಳು ಈ ಕಾರ್ಯಗಾರದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಸೂಚಿಸಿದರು.ಈ ವೇಳೆ ಜಿಲ್ಲೆಯ ಆರ್.ಸಿ.ಎಚ್ ಅಧಿಕಾರಿಗಳು, ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು, ಆರೋಗ್ಯ ಅಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಎ. ರಡ್ಡೇರ, ಶಾಲಾ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.