ಮಕ್ಕಳು ಭವಿಷ್ಯದಲ್ಲಿ ಉತ್ತಮ ಸಂಸ್ಕಾರವಂತರಾಗಿ ಬೆಳೆಯಬೇಕು ಮತ್ತು ಸಮಾಜಕ್ಕೆ ಮಾರಕವಾಗಿರುವ ಬಾಲ್ಯ ವಿವಾಹವನ್ನು ತಡೆಗಟ್ಟಬೇಕು ಎಂದು ಗ್ರಾಪಂ ಉಪಾಧ್ಯಕ್ಷ ಎಂ.ಬಿ. ರೇಣುಕಾಪ್ರಸಾದ್ ಹೇಳಿದರು.
ಸೊರಬ: ಮಕ್ಕಳು ಭವಿಷ್ಯದಲ್ಲಿ ಉತ್ತಮ ಸಂಸ್ಕಾರವಂತರಾಗಿ ಬೆಳೆಯಬೇಕು ಮತ್ತು ಸಮಾಜಕ್ಕೆ ಮಾರಕವಾಗಿರುವ ಬಾಲ್ಯ ವಿವಾಹವನ್ನು ತಡೆಗಟ್ಟಬೇಕು ಎಂದು ಗ್ರಾಪಂ ಉಪಾಧ್ಯಕ್ಷ ಎಂ.ಬಿ. ರೇಣುಕಾಪ್ರಸಾದ್ ಹೇಳಿದರು.
ತಾಲೂಕಿನ ಚಂದ್ರಗುತ್ತಿ ಗ್ರಾಮದ ಗ್ರಾಮ ಪಂಚಾಯಿತಿಯಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಗ್ರಾಮ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.ಇತ್ತೀಚಿನ ದಿನಗಳಲ್ಲಿ ತಿಳುವಳಿಕೆ ಇಲ್ಲದೇ ಮತ್ತು ಪೋಷಕರ ಅರಿವನ್ನು ಮೀರಿ ಬಾಲ್ಯದಲ್ಲಿಯೇ ಮಕ್ಕಳು ಪ್ರೇಮ ಪಾಶಕ್ಕೆ ಸಿಲುಕುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂತಹ ಘಟನೆಗಳು ಅವರ ಭವಿಷ್ಯವನ್ನೇ ಹಾಳು ಮಾಡುತ್ತವೆ. ಆದ್ದರಿಂದ ಮಕ್ಕಳಿಗೆ ನೈತಿಕ ಶಿಕ್ಷಣದ ಅರಿವು ಮೂಡಿಸಬೇಕು ಎಂದರು.
ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಚಂದ್ರಗುತ್ತಿ ಗ್ರಾಪಂ ಸದಾ ಸಿದ್ಧವಿದ್ದು, ಶೌಚಾಲಯ ಹಾಗೂ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡಲಾಗುವುದು. ಜೊತೆಗೆ ಶ್ರೀ ರೇಣುಕಾಂಬ ಪ್ರೌಢ ಶಾಲೆಯಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು ಬಗೆಹರಿಸಿಕೊಡಲಾಗುವುದು ಎಂದರು.ಗ್ರಾಪಂ ಪಿಡಿಒ ನಾರಾಯಣ ಮೂರ್ತಿ ಮಾತನಾಡಿ, ಗ್ರಾಪಂ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಅಪಾರ ಐಡಿ ಇಲ್ಲದವರಿಗೆ ಪಂಚಾಯಿತಿ ವತಿಯಿಂದ ಒಂದೇ ಸೂರಿನಡಿ ವಿಶೇಷ ಶಿಬಿರದ ಮೂಲಕ ದಾಖಲೆಗಳನ್ನು ಮಾಡಿಕೊಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಹಾಗೂ ನಾಟಕ ಪ್ರದರ್ಶಿಸಿದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.ಉದ್ಘಾಟನೆಯನ್ನು ಗ್ರಾಪಂ ಅಧ್ಯಕ್ಷೆ ಸರಿತಾ ಕೃಷ್ಣಪ್ಪ ನೆರವೇರಿಸಿದರು. ಅಧ್ಯಕ್ಷತೆ ವಿದ್ಯಾರ್ಥಿನಿ ಸಿಂಚನಾ ವಹಿಸಿದ್ದರು. ಗ್ರಾಪಂ ಸದಸ್ಯರಾದ ಲಕ್ಷ್ಮೀ ಚಂದ್ರಪ್ಪ, ಶ್ರೀಮತಿ ಚಂದ್ರಕಾಂತ್, ಲಕ್ಷ್ಮೀ ರವಿ, ಪಿ.ಡಿ.ಓ ನಾರಾಯಣ ಮೂರ್ತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಚಂದ್ರಗುತ್ತಿ ವಲಯದ ಮೇಲ್ವಿಚಾರಕಿ ಕಾವೇರಿ ಎಸ್, ಗ್ರಾಪಂ ಕಾರ್ಯದರ್ಶಿ ರೇಖಾ, ನೌಕರರಾದ ಸಂತೋಷ್, ಮಂಜುನಾಥ್, ರವಿಕಿರಣ್, ಸೇರಿದಂತೆ ಗ್ರಾಪಂ ವ್ಯಾಪ್ತಿಯ ಶಾಲಾ ಶಿಕ್ಷಕರು, ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರು ಇದ್ದರು.