ಸಾರಾಂಶ
ಉಪನ್ಯಾಸ । ವಾಸ್ತುಶಿಲ್ಪ ಕುರಿತು ಮಾಹಿತಿ ಮಾಲಿಕೆ । ಸಂವಾದ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಶೃಂಗೇರಿನಮ್ಮ ಸುತ್ತಮುತ್ತಲ ಪ್ರದೇಶಗಳಲ್ಲಿ ಇತಿಹಾಸಕ್ಕೆ ಸಂಬಂದಿಸಿದಂತೆ ಅನೇಕ ದಾಖಲೆ, ಅವಶೇಷಗಳು, ಶಾಸನಗಳಿದ್ದರೂ ಅವುಗಳ ಬಗ್ಗೆ ಗಮನ ಹರಿಸುತ್ತಿಲ್ಲ. ವಿದ್ಯಾರ್ಥಿಗಳು ಸ್ಥಳೀಯ ಇತಿಹಾಸದ ಬಗ್ಗೆ ಆಸಕ್ತಿ ಮೂಡಿಸಿಕೊಳ್ಳಬೇಕು ಎಂದು ಶೃಂಗೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಭಾರತೀ ಹೇಳಿದರು.
ಇಲ್ಲಿನ ಶೃಂಗೇರಿ ಮೆಣಸೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಇತಿಹಾಸ ವೇದಿಕೆ ಹಾಗೂ ಐಕ್ಯೂಎಸಿ ಸಹಯೋಗದೊಂದಿಗೆ ಆಯೋಜಿಸಿದ್ದ ಭಾರತೀಯ ವಾಸ್ತುಶಿಲ್ಪ ಕುರಿತ ಉಪನ್ಯಾಸ ಮಾಲಿಕೆ ಹಾಗೂ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ನಾವು ಕೇವಲ ಬೇರೆ ಬೇರೆ ದೇಶಗಳ ಇತಿಹಾಸ ತಿಳಿದುಕೊಂಡರೆ ಮಾತ್ರ ಸಾಲದು. ನಮ್ಮ ಸ್ಥಳೀಯ ಇತಿಹಾಸ, ಪರಂಪರೆ, ಸಂಸ್ಕ್ರತಿಗಳ ಕುರಿತು ತಿಳಿದುಕೊಳ್ಳಬೇಕು. ಅವುಗಳ ಅಧ್ಯಯನಕ್ಕೆ ಮಹತ್ವ ನೀಡಬೇಕು. ನಮ್ಮ ಸುತ್ತಮುತ್ತಲ ಪ್ರದೇಶಗಳಲ್ಲಿ ಅಡಗಿರುವ ಇತಿಹಾಸಕ್ಕೆ ಸಂಬಂಧಪಟ್ಟ ಸಂಗತಿಗಳು ಬೆಳಕಿಗೆ ಬರಬೇಕು. ಆ ನಿಟ್ಟಿನಲ್ಲಿ ಸ್ಥಳೀಯ ಇತಿಹಾಸದ ಅಧ್ಯಯನಕ್ಕೆ ಮಹತ್ವ ನೀಡಬೇಕಿದೆ ಎಂದರು.
ಇತಿಹಾಸ ಹಾಗೂ ಪುರಾತತ್ವ ಸಂಶೋಧಕ ಸುರೇಶ್ ಕಲ್ಕೆರೆ ಭಾರತೀಯ ವಾಸ್ತುಶಿಲ್ಪ ಕುರಿತು ವಿಶೇಷ ಉಪನ್ಯಾಸ ನೀಡಿ, ಭಾರತೀಯರು ವಾಸ್ತುಶಿಲ್ಪದ ಮೂಲಕ ಜನಜೀವನ, ಐತಿಹಾಸಿಕ ಪ್ರಜ್ಞೆ ಮೂಡಿಸಿಕೊಂಡಿದ್ದರು. ಜಗತ್ತಿನ ಇತಿಹಾಸಕ್ಕೆ ಭಾರತೀಯರ ಕೊಡುಗೆ ಅಪಾರವಾಗಿದೆ. ಭಾರತೀಯ ವಾಸ್ತುಶಿಲ್ಪದಲ್ಲಿ ಗಣಿತ, ವಿಜ್ಞಾನ, ಸಮಾಜ, ತಂತ್ರಜ್ಞಾನ ಸೇರಿದಂತೆ ಎಲ್ಲಾ ವಿಷಯಗಳನ್ನೊಂಡಿದೆ. ಸಾಮಾಜಿಕ,ಜನಜೀವನ ಅಂಶಗಳು ಕಾಣಬಹುದಾಗಿದೆ ಎಂದು ಹೇಳಿದರು.ದೇವಾಲಯಗಳಲ್ಲಿ, ಸಾರ್ವಜನಿಕ ಕಟ್ಟಡಗಳಲ್ಲಿ, ಧಾರ್ಮಿಕ ಕಟ್ಟಡಗಳಲ್ಲಿ ಕಲೆ, ವಾಸ್ತುಶಿಲ್ಪಗಳ ಮೂಲಕ ಜನಜೀವನ, ಸಾಮಾಜಿಕ ಪ್ರಜ್ಞೆಗಳನ್ನು ಮೂಡಿಸಿದ್ದಾರೆ. ಭಾರತವನ್ನಾಳಿದ ಗುಪ್ತರು, ಮೌರ್ಯರು, ಶಾತವಾಹನರು, ಚೋಳರು, ಪಲ್ಲವರು, ಚಾಲುಕ್ಯರು ಸೇರಿದಂತೆ ಎಲ್ಲಾ ರಾಜಮನೆತನಗಳು ಭಾರತೀಯ ಕಲೆ, ವಾಸ್ತುಶಿಲ್ಪಕ್ಕೆ ಮಹತ್ತರ ಕೊಡುಗೆ ನೀಡಿವೆ ಎಂದರು.
ಭೂಮಾಪನ ಪದ್ಧತಿ ಮೊದಲ ಬಾರಿಗೆ ಆರಂಭಿಸಿದವರು ಚೋಳರು. ಆಸ್ಪತ್ರೆಯನ್ನು ಮೊದಲು ಸ್ಫಾಪಿಸಿದವರು ಚೋಳರು, ಗುಪ್ತರ ಕಾಲದಲ್ಲಿ ಕಲೆ ವಾಸ್ತುಶಿಲ್ಪದ ಸುವರ್ಣ ಯುಗವಾಗಿತ್ತು. ಚೋಳರು, ಚಾಲುಕ್ಯರು, ಪಲ್ಲವರು ಭಾರತೀಯ ವಾಸ್ತುಶಿಲ್ಪವನ್ನು ಪೋಷಿಸಿ ಬೆಳೆಸಿದರು. ಆ ಕಾಲದಲ್ಲಿಯೇ ವಿಜ್ಞಾನ, ತಂತ್ರಜ್ಞಾನ, ಗಣಿತ ಮೊದಲಾದ ವಿಷಯಗಳಲ್ಲಿ ಪರಿಣಿತಿ ಹೊಂದಿದ್ದರು. ಅವರ ರಚನೆಗಳು ಅದ್ಭುತವಾಗಿವೆ ಎಂದು ತಿಳಿಸಿದರು.ವಿದ್ಯಾರ್ಥಿಗಳು ವಾಸ್ತುಶಿಲ್ಪದ ಅಧ್ಯನಯಕ್ಕೆ ವಿಶೇಷವಾದ ಮಹತ್ವ ನೀಡಬೇಕಿದೆ. ಇತಿಹಾಸವೂ ವಿಜ್ಞಾನ, ಸಮಾಜ ಶಾಸ್ತ್ರ, ರಾಜ್ಯಶಾಸ್ತ್ರ, ಭೂಗೋಳ, ಪರಿಸರ ಮೊದಲಾದ ವಿಷಯಗಳೊಂದಿಗೆ ನಿಕಟವಾದ ಸಂಬಂಧ ಹೊಂದಿದೆ. ಇತಿಹಾಸವು ಎಲ್ಲದಕ್ಕೂ ಆಧಾರವಾಗಿದೆ. ನಮ್ಮ ಸುತ್ತಮುತ್ತಲಿರುವ ಇತಿಹಾಸಕ್ಕೆ ಸಂಬಂದಿಸಿದ ದಾಖಲೆ, ಪುರಾವೆಗಳು, ಶಾಸನಗಳು, ಮಾಸ್ತಿಗಲ್ಲು, ವೀರಗಲ್ಲುಗಳನ್ನು ಸಂರಕ್ಷಿಸಬೇಕಿದೆ. ಅವುಗಳ ಸಂರಕ್ಶಣೆ ನಮ್ಮೆಲ್ಲರ ಹೊಣೆ ಎಂದರು.
ಇತಿಹಾಸ ಕುರಿತು ವಿದ್ಯಾರ್ಥಿಗಳೊಂದಿಗೆ ಪ್ರಶ್ನೋತ್ತರ ಸಂವಾದ ಕಾರ್ಯಕ್ರಮ ನಡೆಯಿತು. ಐಕ್ಯೂಎಸಿ ಸಂಚಾಲಕರಾದ ಡಾ.ಆಶಾ ಬಿ.ಜೆ.ಇತಿಹಾಸ ವಿಭಾಗದ ಎನ್.ಯು.ಅಬೂಬಕರ್, ಸಚಿನ್ ಕುಮಾರ್ ಮತ್ತಿತರರು ಹಾಜರಿದ್ದರು.