ಮಕ್ಕಳು ವಿದ್ಯಾಭ್ಯಾಸದ ಜತೆಯಾಗಿ ತಮ್ಮ ಕೌಶಲ್ಯಗಳನ್ನು ನಿರಂತರವಾಗಿ ಕಲಿಯಬೇಕು ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದ್ದಾರೆ.
- ಎನ್ಎಂಕೆ ಪ್ರೌಢಶಾಲೆಯಲ್ಲಿ ತಾಲೂಕುಮಟ್ಟದ ಪ್ರತಿಭಾ ಕಾರಂಜಿ- ಕಲೋತ್ಸವ
- - -ಕನ್ನಡಪ್ರಭ ವಾರ್ತೆ ಜಗಳೂರು
ಮಕ್ಕಳು ವಿದ್ಯಾಭ್ಯಾಸದ ಜತೆಯಾಗಿ ತಮ್ಮ ಕೌಶಲ್ಯಗಳನ್ನು ನಿರಂತರವಾಗಿ ಕಲಿಯಬೇಕು ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.ಪಟ್ಟಣದ ಎನ್ಎಂಕೆ ಪ್ರೌಢಶಾಲೆಯಲ್ಲಿ ಶುಕ್ರವಾರ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ, ಕ್ಷೇತ್ರ ಸಂಪನ್ಮೂಲ ಕೇಂದ್ರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ಪ್ರಾಥಮಿಕ- ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ಬಚ್ಚಿಟ್ಟಿ ಪ್ರತಿಭೆಗಳನ್ನು ಬಿಚ್ಚಿಡುವ ಕೆಲಸವನ್ನು ಪ್ರತಿಭಾ ಕಾರಂಜಿ ಮಾಡುತ್ತಿದೆ. ಇಂದು ಮೊಬೈಲ್‌ನಲ್ಲಿ ಇಡೀ ಪ್ರಪಂಚವನ್ನೇ ಕಾಣಬಹುದು. ಮೊಬೈಲ್‌ನಿಂದ ಪ್ರಯೋಜನದಷ್ಟೇ ದುಷ್ಪರಿಣಾಮಗಳೂ ಇವೆ. ಇದರಿಂದಾಗಿ ವಿದ್ಯಾರ್ಥಿಗಳು, ಮಕ್ಕಳ ಮೇಲೆ ಪಾಲಕರು ಹೆಚ್ಚಿನ ಗಮನಹರಿಸಬೇಕು ಎಂದರು.ಮಿಂಚಿಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ, ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ನಾಣ್ಣುಡಿಗಳು ಅರಿತುಕೊಳ್ಳಬೇಕು. ಉತ್ತಮ ಪ್ರಜೆಯಾಗಬೇಕಾದರೆ ಶಿಕ್ಷಣದ ಜತೆಗೆ ಸಂಸ್ಕಾರವಂತರೂ ಆಗಬೇಕು. ಆ ಸಂಸ್ಕಾರ ಪೋಷಕರು, ಗುರುವಿನ ಬಳಿ ಸಿಗುತ್ತದೆ ಎಂದು ಮಕ್ಕಳಿಗೆ ಸಲಹೆ ನೀಡಿದರು.
ಜಿಪಂ ಮಾಜಿ ಸದಸ್ಯ ಕೆ.ಪಿ. ಪಾಲಯ್ಯ ಮಾತನಾಡಿ, ಕರ್ನಾಟಕ ಸರ್ಕಾರ ಮಕ್ಕಳ ಪ್ರತಿಭೆ ಗುರುತಿಸಿ ಮತ್ತು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಜಾರಿಗೆ ತಂದಿದೆ. ಶಿಕ್ಷಕರು ಪಠ್ಯ ವಿಷಯಗಳಲ್ಲದೇ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಬೇಕು ಎಂದರು.ಬಿಇಒ ಹಾಲಮೂರ್ತಿ ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ವೇದಿಕೆ ಮೇಲೆ ಅನಾವರಣಗೊಳಿಸಲು ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮಗಳು ನೆರವಾಗುತ್ತವೆ. ಪ್ರತಿಯೊಬ್ಬರಲ್ಲಿ ಒಂದೊಂದು ಕಲೆ ಮತ್ತು ಪ್ರತಿಭೆ ಇರುತ್ತದೆ. ಅದನ್ನು ಗುರುತಿಸುವ ನಿಟ್ಟಿನಲ್ಲಿ ಇಲಾಖೆಯ ಈ ಕಾರ್ಯಕ್ರಮ ಸಹಕಾರಿಯಾಗಿದೆ ಎಂದರು.
ಈ ಸಂದರ್ಭ ಖಾಸಗಿ ಶಾಲೆಗಳ ಸಂಘದ ಅಧ್ಯಕ್ಷ ಎನ್.ಎಂ. ಲೋಕೇಶ್, ನವಚೇತನ ಶಾಲೆಯ ಡಾ. ಪಿ.ಎಸ್. ಅರವಿಂದನ್, ಎನ್.ಎಂ.ಕೆ. ವಿದ್ಯಾ ಸಂಸ್ಥೆಯ ಅಧ್ಯಕ್ಷ ಹಾಲಸ್ವಾಮಿ, ಶಿಕ್ಷಣ ಇಲಾಖೆಯ ಮಂಜಪ್ಪ ದಿದ್ದಿಗೆ, ಆನಂದಪ್ಪ, ಆರ್.ವಿ.ಎಸ್. ಶಾಲೆ ಕಾರ್ಯದರ್ಶಿ ವೀರೇಶ್, ಎನ್‌ಜಿಒ ನಿರ್ದೇಶಕ ಸತೀಶ್ ಬಸವರಾಜ್, ಕಲ್ಲಿನಾಥ್, ಅಕ್ಷರ ದಾಸೋಹ ನಿರ್ದೇಶಕ, ಮಂಜುನಾಥ್, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಮಹಾಂತೇಶ್, ಶಿಕ್ಷಕರಾದ ಶಿವಮ್ಮ .ಉರ್ದು ಭಾಷಾ ಶಿಕ್ಷಕರ ಸಂಘದ ಅಧ್ಯಕ್ಷೆ ಫಾತಿಮಾ ಬಿಆರ್‌ಸಿ ರವಿಕುಮಾರ ಮತ್ತಿತರರಿದ್ದರು.- - -
-19ಜೆಜಿ.ಎಲ್.1:ಪ್ರತಿಭಾ ಕಾರಂಜಿ- ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿದರು.