ಸಾರಾಂಶ
ನರಸಿಂಹರಾಜಪುರ, 18 ವರ್ಷದ ಒಳಗಿನ ಮಕ್ಕಳು ತಂಬಾಕು ಉತ್ಪನ್ನ ಸೇವನೆ ಮಾಡಬಾರದು ಎಂದು ಪೊಲೀಸ್ ಸಹಾಯಕ ಆರಕ್ಷಕ ನಿರೀಕ್ಷಿಕ ಶ್ರೀಧರ್ ಸೂಚನೆ ನೀಡಿದರು.
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ
18 ವರ್ಷದ ಒಳಗಿನ ಮಕ್ಕಳು ತಂಬಾಕು ಉತ್ಪನ್ನ ಸೇವನೆ ಮಾಡಬಾರದು ಎಂದು ಪೊಲೀಸ್ ಸಹಾಯಕ ಆರಕ್ಷಕ ನಿರೀಕ್ಷಿಕ ಶ್ರೀಧರ್ ಸೂಚನೆ ನೀಡಿದರು.ಶನಿವಾರ ಪಟ್ಟಣದ ಹಳೇ ಪೇಟೆಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಆರೋಗ್ಯ ಇಲಾಖೆ, ಪೊಲೀಸ್ ಠಾಣೆಯ ಸಂಯುಕ್ತ ಆಶ್ರಯದಲ್ಲಿ ವಿವಿಧ ಅಂಗಡಿ, ಹೋಟೆಲ್, ಕ್ಯಾಂಟೀನ್ ಮೇಲೆ ದಾಳಿ ಮಾಡಿ ಜನರಲ್ಲಿ ಜಾಗೃತಿ ಮೂಡಿಸಿದ ಸಂದರ್ಭದಲ್ಲಿ ಮಾತನಾಡಿದರು. ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. 18 ವರ್ಷದ ಒಳಗಿನ ಮಕ್ಕಳಿಗೆ ತಂಬಾಕು ಉತ್ಪನ್ನಗಳಾದ ವಿಮಲ್, ಪಾನ್ ಪರಾಗ್, ಬೀಡಿ, ಸಿಗರೇಟು ಮಾರಾಟ ಮಾಡಿದರೆ ದಂಡ ವಿಧಿಸಲಾಗುತ್ತದೆ. ಅಲ್ಲದೆ ಅಂಗಡಿ ಮುಂದೆ ದೂಮಪಾನ ನಿಷೇಧಿಸಿದೆ ಹಾಗೂ 18 ವರ್ಷದ ಒಳಗಿನ ಮಕ್ಕಳಿಗೆ ತಂಬಾಕು ಉತ್ಪನ್ನ ಮಾರಾಟ ಮಾಡುವುದಿಲ್ಲ ಎಂದು ಎಲ್ಲರಿಗೂ ಕಾಣುವಂತೆ ನಾಮಫಲಕ ಹಾಕಬೇಕು. ನಾಮ ಫಲಕ ಇಲ್ಲದಿದ್ದರೆ ₹200 ದಂಡ ವಿಧಿಸಲಾಗುವುದು. ಶಾಲಾ ಆವರಣದಿಂದ 100 ಮೀಟರ್ ಅಂತರ ದಲ್ಲಿ ತಂಬಾಕು ಮಾರಾಟ ಸಂಪೂರ್ಣ ನಿಷೇದಿಸಲಾಗಿದೆ ಎಂದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕೇಶವಮೂರ್ತಿ ಮಾತನಾಡಿ, ತಂಬಾಕಿನಲ್ಲಿ ಕ್ಯಾನ್ಸರ್ ಕಾರಕ 4 ಸಾವಿರ ರಾಸಾಯನಿಕ ಇದೆ. ಇದನ್ನು ಗಮನಿಸಿ ಜನರು ತಂಬಾಕು ಉತ್ಪನ್ನ ಸೇವನೆ ಮಾಡಬಾರದು. ಉತ್ತಮ ಆರೋಗ್ಯ ಕಾಪಾಡಿ ಕೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ದರ್ಶನ್, ಎಚ್.ಪಿ.ಹರೀಶ್ ಇದ್ದರು.ಒಟ್ಟು 8 ಪ್ರಕರಣ ದಾಖಲಿಸಿಕೊಂಡು ₹1500 ದಂಡ ವಿಧಿಸಲಾಯಿತು.