ಸಾರಾಂಶ
ಮುಂಡರಗಿ: ಸರ್ಕಾರ ಉಚಿತವಾಗಿ ಪಠ್ಯ ಪುಸ್ತಕ, ಬಟ್ಟೆ, ಮಧ್ಯಾಹ್ನದ ಬಿಸಿಯೂಟ ಸೇರಿದಂತೆ ಅನೇಕ ಸೌಲಭ್ಯ ನೀಡುತ್ತಿದ್ದು, ವಿದ್ಯಾರ್ಥಿಗಳು ಅವುಗಳ ಸದುಪಯೋಗಪಡಿಸಿಕೊಳ್ಳಬೇಕು ಎಂದು ವಿಶ್ರಾಂತ ಪ್ರಾ. ಎಂ.ಎಂ. ಹೆಬ್ಬಾಳ ಹೇಳಿದರು.
ಅವರು ಶುಕ್ರವಾರ ಪಟ್ಟಣದ ಭುವನೇಶ್ವರಿ ವಿದ್ಯಾವರ್ಧಕ ಸಮಿತಿಯ ಜೆ.ಟಿ.ಕೋಟೆ ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಹಾಗೂ ಪಠ್ಯಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.ತಾವು ವಿದ್ಯಾರ್ಥಿಯಾಗಿದ್ದ ಕಾಲದಲ್ಲಿ ಸರ್ಕಾರದಿಂದ ಯಾವುದೇ ರೀತಿಯ ಸೌಲಭ್ಯಗಳಿರಲಿಲ್ಲ.ಅಂತಹ ಸಂದರ್ಭದಲ್ಲಿ ವ್ಯಾಸಂಗ ಮಾಡಿ ಉನ್ನತ ಹುದ್ದೆಯನ್ನೇರಿ ಕಾರ್ಯ ನಿರ್ವಹಿಸಿದ್ದು, ಇಂದು ಸರ್ಕಾರ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಅನುಕೂಲತೆ ನೀಡುತ್ತಿದ್ದು, ಅವುಗಳನ್ನು ಸರಿಯಾಗಿ ಬಳಸಿಕೊಂಡು ವ್ಯಾಸಂಗ ಮಾಡಬೇಕು ಎಂದರು.
ವಿದ್ಯಾ ಸಮಿತಿ ಗೌರವ ಕಾರ್ಯದರ್ಶಿ ಪ್ರೋ. ಎ.ವೈ.ನವಲಗುಂದ ಮಾತನಾಡಿ, ಪಾಲಕರು ಮಕ್ಕಳಿಗಾಗಿ ಆಸ್ತಿ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು. ಪ್ರಸ್ತುತ ವರ್ಷದಿಂದ ನಮ್ಮ ಶಾಲೆಯಲ್ಲಿ ಕಂಪ್ಯೂಟರ್ ಲ್ಯಾಬ್ ಪ್ರಾರಂಭಿಸಿ ಮಕ್ಕಳಿಗೆ ಕಂಪ್ಯೂಟರ್ ಜ್ಞಾನ ಸಹ ನೀಡುತ್ತಿದ್ದೇವೆ. ಮಕ್ಕಳು ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಪಾಲಕರು ತಮ್ಮ ಮಕ್ಕಳ ಮೇಲೆ ವಿಶೇಷ ಗಮನಹರಿಸುವ ಮೂಲಕ ಅವರ ಕಲಿಕೆಗೆ ಪ್ರೋತ್ಸಾಹಿಸಬೇಕು ಎಂದರು.ಶಾಲಾ ಮುಖ್ಯೋಪಾಧ್ಯಾಯ ಮಂಜುನಾಥ ತೆಗ್ಗಿನಮನಿ ಮಾತನಾಡಿ, ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಒಂದು ಉತ್ತಮ ಕ್ರಿಯಾ ಯೋಜನೆಯೊಂದಿಗೆ ನಾವು ಬೋಧನೆ ಮಾಡುತ್ತೇವೆ. ವಿಶೇಷ ತರಗತಿಗಳನ್ನು ಈ ವರ್ಷ ಜೂನ್ ತಿಂಗಳಿನಿಂದಲೇ ನಾವು ಪ್ರಾರಂಭಿಸುತ್ತೇವೆ. ಪ್ರತಿ ತಿಂಗಳು ತಾಯಂದಿರ ಸಭೆ ನಡೆಸುವ ಮೂಲಕ ಆ ಸಭೆಯಲ್ಲಿ ಮಕ್ಕಳ ಸಾಧನೆ ಕುರಿತು ತಿಳಿಸುತ್ತೇವೆ ಎಂದರು.
ಭುವನೇಶ್ವರಿ ವಿದ್ಯಾವರ್ಧಕ ಸಮಿತಿಯ ಅಧ್ಯಕ್ಷ ಸಿ.ಬಿ. ಚನ್ನಳ್ಳಿ ಅಧ್ಯಕ್ಷತೆ ವಹಿಸಿ ಮಕ್ಕಳಿಗೆ ಪುಸ್ತಕ ವಿತರಣೆ ಮಾಡಿದರು. ಅಧ್ಯಕ್ಷರ ಪರವಾಗಿ ಸಮಿತಿಯ ಸದಸ್ಯ ಬಿ.ವಿ.ಮುದ್ದಿ ಮಾತನಾಡಿದರು.ಶಾಲೆಗೆ ಆಗಮಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಗೇಟಿನಲ್ಲಿ ಹೂಗುಚ್ಛ ನೀಡುವುದರ ಮೂಲಕ ಎಲ್ಲ ವಿದ್ಯಾರ್ಥಿಗಳನ್ನು ಸಮಿತಿಯ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಮತ್ತು ಸರ್ವ ಸದಸ್ಯರು, ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದದವರು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಸಮಿತಿ ಸದಸ್ಯ ವೆಂಕಟೇಶ ಗುಗ್ಗರಿ, ಆರ್.ಬಿ. ಹಕ್ಕಂಡಿ, ಪಾಲಕರ ಪ್ರತಿನಿಧಿ ವೀರಪಾಕ್ಷಪ್ಪ ಬಾರಕೇರ, ರುದ್ರಗೌಡ, ನದಾಫ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಎಂ.ಟಿ.ಮಾಳಪೂರ ಸ್ವಾಗತಿಸಿ, ಆರ್.ವಿ.ಅರ್ಕಸಾಲಿ ನಿರೂಪಿಸಿ, ಶಶಿಧರ ಅಡರಕಟ್ಟಿ ವಂದಿಸಿದರು.