ಕೇವಲ ಒಂದೂವರೆ ಗಂಟೆಯಲ್ಲಿ ಸರಿಸುಮಾರು ಒಂದುವರೆ ಲಕ್ಷ ರು.ಗಳಷ್ಟು ವ್ಯಾಪಾರವನ್ನು ಪುಟಾಣಿಗಳು ಮಾಡಿ ಶಬ್ಬಾಷ್ ಎನಿಸಿಕೊಂಡರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ಕೇವಲ ಒಂದೂವರೆ ಗಂಟೆಯಲ್ಲಿ ಸರಿಸುಮಾರು ಒಂದುವರೆ ಲಕ್ಷ ರು.ಗಳಷ್ಟು ವ್ಯಾಪಾರವನ್ನು ಪುಟಾಣಿಗಳು ಮಾಡಿ ಶಬ್ಬಾಷ್ ಎನಿಸಿಕೊಂಡರು.

ಹೀಗೆ ವ್ಯಾಪಾರ ಮಾಡಿ ತೋರಿಸಿದವರು ಇಲ್ಲಿಯ ಜೆಪಿ ಕಾನ್ವೆಂಟ್ ಶಾಲೆಯ ಮಕ್ಕಳು. ಶನಿವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ ಒಂದು ಗಂಟೆಯ ತನಕ ಮಕ್ಕಳ ಸಂತೆ ಮಾಡಲಾಗುವುದು ಎಂದು ಪ್ರಕಟಿಸಲಾಗಿತ್ತು. ಆದರೆ 10 ಗಂಟೆಯಿಂದ 11.30 ರೊಳಗೆ ಮಕ್ಕಳು ತಂದಿದ್ದ ಎಲ್ಲಾ ವಸ್ತುಗಳು ಗ್ರಾಹಕರ ಪಾಲಾದವು. ಸುಮಾರು 300 ಮಕ್ಕಳು ತಮ್ಮ ಪೋಷಕರು ಬೆಳೆಯುವ, ವ್ಯಾಪಾರ ಮಾಡುವ ವಸ್ತುಗಳನ್ನು ಸಂತೆಗೆ ತಂದು ಮಾರಾಟ ಮಾಡಿದರು. ಮಕ್ಕಳು ಚುರುಮುರಿ, ಪಾನೀಪುರಿ, ಬೇಲ್ ಪೂರಿ, ಮಿಠಾಯಿಗಳು, ಬಜ್ಜಿ, ಬೋಂಡ, ಸಿಹಿ ತಿನಿಸುಗಳು, ಹಪ್ಪಳ, ದಿನಸಿ ಪದಾರ್ಥಗಳು, ಹಣ್ಣು, ಹೂವು, ತರಕಾರಿಗಳು, ಬಾಳೆ ಹಣ್ಣು, ಎಳ್ಳಿಕಾಯಿ, ಪಪ್ಪಾಯಿ, ಸೀತಾಫಲ, ರಾಗಿ. ಜೋಳ, ಹೆಸರು ಕಾಳು, ತೊಗರಿ ಕಾಳು, ಅಲಸಂಡೆ, ಅವರೇಕಾಯಿ, ಎಳನೀರು, ಹುರುಳಿಕಾಳು, ಪ್ಲಾಸ್ಟಿಕ್ ಐಟಂಗಳು, ಬಟ್ಟೆ ಅಂಗಡಿ, ಮಕ್ಕಳಿಗೆ ಬೇಕಾದ ಸಣ್ಣಪುಟ್ಟ ಬಟ್ಟೆಗಳು, ತೆಂಗಿನಕಾಯಿ, ಪೆನ್ನು, ಪೆನ್ಸಿಲ್, ನೋಟ್ ಬುಕ್, ಪಾಟ್ ಗಳು, ಉಪ್ಪಿನಕಾಯಿ, ಕರಿಬೇವಿನಸೊಪ್ಪು, ನುಗ್ಗೇಸೊಪ್ಪು ಸೇರಿದಂತೆ ನೂರಾರು ವಸ್ತುಗಳನ್ನು ಕೂಗಿ ಕೂಗಿ ಮಾರುತ್ತಿದ್ದರು. ಕೆಲವು ಮಕ್ಕಳು ಒಂದು ಕೊಂಡರೆ ಮತ್ತೊಂದು ಉಚಿತ ಅಂತ ಆಫರ್ ನೀಡಿ ಗ್ರಾಹಕರನ್ನು ಆಕರ್ಷಿಸಿದರು. ಪೈಪೋಟಿಗೆ ಬಿದ್ದವರಂತೆ ಮಕ್ಕಳು ತಾವು ತಂದಿದ್ದ ವಸ್ತುಗಳನ್ನು ಮಾರುತ್ತಿದ್ದರು. ಎಲ್ಲಾ ತರಕಾರಿಗಳು, ಕಾಳುಗಳು ತಾಜಾತನ ಹೊಂದಿದ್ದರಿಂದ ಗ್ರಾಹಕರು ತಮ್ಮ ಮನೆಗೆ ಬೇಕಿದ್ದ ಎಲ್ಲಾ ವಸ್ತುಗಳನ್ನು ಮಕ್ಕಳಿಂದಲೇ ಕೊಂಡು ಹೋದರು. ಎಳನೀರನ್ನು ನಲವತ್ತು ರುಪಾಯಿಗೆ ಒಂದರಂತೆ ಮಾರುತ್ತಿದ್ದರಿಂದ ಕ್ಷಣ ಮಾತ್ರದಲ್ಲೇ ಎಲ್ಲಾ ಎಳನೀರು ಖಾಲಿಯಾಯಿತು. ಎಳನೀರು ಮಾರುತ್ತಿದ್ದ ವಿದ್ಯಾರ್ಥಿ ವೃತ್ತಿಪರ ಎಳನೀರು ವ್ಯಾಪಾರಿಗಳನ್ನು ಮೀರಿಸುವಂತೆ ಎಳನೀರು ಕೊಚ್ಚಿ ಗ್ರಾಹಕರಿಗೆ ನೀಡುತ್ತಿದ್ದುದು ಕಂಡುಬಂತು. ತಮ್ಮ ಶಾಲೆಯಲ್ಲಿ ಆಯೋಜಿಸಿದ್ದ ಮಕ್ಕಳ ಸಂತೆ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ಮಕ್ಕಳಲ್ಲಿ ವ್ಯವಹಾರ ಜ್ಞಾನ ಹೆಚ್ಚಿಸಲು ಈ ಮಕ್ಕಳ ಸಂತೆ ನೆರವಾಗಿದೆ. ಕೇವಲ ಒಂದುವರೆ ಗಂಟೆಯಲ್ಲಿ ಒಂದುವರೆ ಲಕ್ಷಕ್ಕೂ ಹೆಚ್ಚು ವ್ಯಾಪಾರ ಮಾಡಿದುದು ಖುಷಿ ತಂದಿದೆ ಎಂದು ಗೆಳೆಯರ ಬಳಗದ ಅಧ್ಯಕ್ಷ ಪ್ರಕಾಶ್ ಗುಪ್ತಾ, ಕಾರ್ಯದರ್ಶಿ ಜಿ.ಆರ್.ರಂಗೇಗೌಡ ಹೇಳಿದರು. ಮಕ್ಕಳು ಹಿರಿಯರು ಮಾಡುವ ವ್ಯಾಪಾರಕ್ಕೆ ಸರಿಸಮವಾಗಿ ಮಾಡಿ ಗ್ರಾಹಕರಿಂದ ಭೇಷ್ ಎನಿಸಿಕೊಂಡರು. ಕೇವಲ ಪಠ್ಯವಾಚನಕ್ಕೆ ಸೀಮಿತವಾಗದೇ ವ್ಯಾವಹಾರಿಕ ಜ್ಞಾನವೂ ಅಗತ್ಯ ಎಂಬುದನ್ನು ನಮ್ಮ ಸಂಸ್ಥೆ ಮಕ್ಕಳಿಗೆ ತಿಳಿಸುತ್ತಿದೆ ಎಂದು ಅವರು ತಿಳಿಸಿದರು.

ಈ ವೇಳೆ ಸಂಸ್ಥೆಯ ಖಜಾಂಚಿ ಕೆ.ಟಿ.ಶಿವಣ್ಣ, ಸಹ ಕಾರ್ಯದರ್ಶಿ ಟಿ.ಎಸ್.ಲಕ್ಷ್ಮೀನಾರಾಯಣ್, ಶಾಲೆಯ ಮುಖ್ಯೋಪಾಧ್ಯಾಯರಾದ ತುಕಾರಾಮ್, ಓಂಕಾರ ಮೂರ್ತಿ ಸೇರಿದಂತೆ ಶಾಲೆಯ ಶಿಕ್ಷಕರು ಇದ್ದರು.