ಸಾರಾಂಶ
ಗಡಿಭಾಗದ ಗ್ರಾಮೀಣ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಕ್ಕೆ ತೆರಳಲು ಸರ್ಕಾರಿ ಬಸ್ಸಿನ ಸೌಲಭ್ಯವಿಲ್ಲದೇ ರಂಗನಾಥ ಅನುದಾನಿತ ಪ್ರೌಢಶಾಲೆಯ ಆಡಳಿತ ಮಂಡಳಿ ಗೂಡ್ಸ್ ವಾಹನದಲ್ಲಿ ಮಕ್ಕಳನ್ನು ಬೈರೇನಹಳ್ಳಿಯಿಂದ ಅಕ್ಕಿರಾಂಪುರಕ್ಕೆ ಕನ್ನಡ ಪರೀಕ್ಷೆ ಬರೆಯಲು ಕಳುಹಿಸಿರುವ ಘಟನೆ ನಡೆದಿದೆ.
ಕೊರಟಗೆರೆ : ಗಡಿಭಾಗದ ಗ್ರಾಮೀಣ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಕ್ಕೆ ತೆರಳಲು ಸರ್ಕಾರಿ ಬಸ್ಸಿನ ಸೌಲಭ್ಯವಿಲ್ಲದೇ ರಂಗನಾಥ ಅನುದಾನಿತ ಪ್ರೌಢಶಾಲೆಯ ಆಡಳಿತ ಮಂಡಳಿ ಗೂಡ್ಸ್ ವಾಹನದಲ್ಲಿ 28 ಮಕ್ಕಳನ್ನು ಬೈರೇನಹಳ್ಳಿಯಿಂದ ಅಕ್ಕಿರಾಂಪುರಕ್ಕೆ ಕನ್ನಡ ಪರೀಕ್ಷೆ ಬರೆಯಲು ಕಳುಹಿಸಿರುವ ಘಟನೆ ಶುಕ್ರವಾರ ನಡೆದಿದೆ.
ತಾಲೂಕಿನ ಹೊಳವನಹಳ್ಳಿ ಹೋಬಳಿ ಅರಸಾಪುರ ಗ್ರಾಪಂನ ಬೈರೇನಹಳ್ಳಿ ಶ್ರೀರಂಗನಾಥ ಪ್ರೌಢಶಾಲೆಯ ೨೮ಜನ ವಿದ್ಯಾರ್ಥಿಗಳು ಬೈರೇನಹಳ್ಳಿಯಿಂದ ಅಕ್ಕಿರಾಂಪುರ ಸರ್ಕಾರಿ ಪ್ರೌಢಶಾಲೆಯ ಪರೀಕ್ಷಾ ಕೇಂದ್ರಕ್ಕೆ ಗೂಡ್ಸ್ ವಾಹನದಲ್ಲಿ ಹೋಗಿದ್ದರು. ಪರೀಕ್ಷೆ ಮುಗಿಸಿಕೊಂಡು ಹಿಂದಕ್ಕೆ ಬರುವಾಗ ಬೈಚಾಪುರ ಕ್ರಾಸಿನ ನರ್ಸರಿ ಸಮೀಪದ ಮುಖ್ಯರಸ್ತೆ ಸೇತುವೆ ಬಳಿ ಆಗಬೇಕಿದ್ದ ಬಹು ದೊಡ್ಡ ಅನಾಹುತ ಕ್ಷಣಾರ್ಧದಲ್ಲಿ ತಪ್ಪಿದ್ದು ಅಷ್ಟು ವಿದ್ಯಾರ್ಥಿಗಳು ಹಾಗೂ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.
ಇತ್ತೀಚೆಗೆ ಚಿಂಪುಗಾನಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳನ್ನು ವನಮಹೋತ್ಸವಕ್ಕೆಂದು ಶಾಲಾ ಶಿಕ್ಷಕರು ಟಾಟಾ ಎಸ್ ವಾಹನದಲ್ಲಿ ಹೋಗಿ ಬರುವಾಗ ಟಾಟಾ ಎಸ್ ಪಲ್ಟಿ ಹೊಡೆದು ಅನೇಕ ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿದ್ದರು. ಈ ಘಟನೆ ಮಾಸುವ ಮುನ್ನ ಮತ್ತೊಂದು ದುರಂತ ತಪ್ಪಿದೆ. ಈ ಭಾಗದಲ್ಲಿ ಸರ್ಕಾರಿ ಬಸ್‌ಗಳು ಸಮಯಕ್ಕೆ ಸರಿಯಾಗಿ ಬರದೆ ಇರುವ ಕಾರಣ ಇಂತಹ ಘಟನೆಗಳು ನಡೆಯುತ್ತಿವೆ.
ಬೈರೇನಹಳ್ಳಿಯಿಂದ ಕಡೆಯಿಂದ ಕೊರಟಗೆರೆ ಕಡೆಗೆ ಬರುತ್ತಿದ್ದ ಲಾರಿಯೊಂದು ಸೇತುವೆ ಬಳಿ ವೇಗವಾಗಿ ಬಂದಾಗ ೨೮ ಮಕ್ಕಳನ್ನು ತುಂಬಿದ್ದ ಗೂಡ್ಸ್ ಟಾಟಾ ಎಸಿ ವಾಹನ ರಸ್ತೆಯಿಂದ ಕೆಳಗಡೆ ಚಾಲಕ ಇಳಿಸಿದ್ದು, ಹಿಂದೆ ಇದ್ದ ವಿದ್ಯಾರ್ಥಿಗಳು ಒಬ್ಬರ ಮೇಲೋಬ್ಬರ ಬಿದ್ದು ನಂತರ ಗಾಡಿಯಲ್ಲೇ ಎದ್ದು ಕುಳಿತಿದ್ದಾರೆ. ವಾಹನ ಚಾಲಕನ ಸಮಯ ಪ್ರಜ್ಞೆಯಿಂದ ಯಾವುದೇ ಅನಾಹುತ ಆಗಿಲ್ಲ. ಈ ಕುರಿತು ವಾಹನ ಚಾಲಕ ಮತ್ತು ಮುಂದೆ ಕುಳಿತುಕೊಂಡಿದ್ದ ಶಿಕ್ಷಕನನ್ನು ಪ್ರಶ್ನಿಸಿದಾಗ ಸರ್ಕಾರಿ ಬಸ್ಸಿನ ಕೊರತೆ ಇದೆ. ಸಮಯಕ್ಕೆ ಸರಿಯಾಗಿ ಯಾವುದೇ ವಾಹನ ಸಿಗದಿರುವ ಪರಿಣಾಮ ನಾವು ಗೂಡ್ಸ್ ವಾಹನದಲ್ಲೇ ಹೋಗಬೇಕಾಯಿತು ಎಂದು ಉತ್ತರಿಸಿದ್ದಾರೆ.
ಬಿಇಒ ಉಡಾಫೆ ಉತ್ತರ..
ಗೋಡ್ಸ್ ವಾಹನದಲ್ಲಿ 28 ಜನ ಮಕ್ಕಳು ಪ್ರಯಾಣಿಸುವಾಗ ತಪ್ಪಿದ ಅನಾಹುತದ ಬಗ್ಗೆ ಬಿಇಒ ನಟರಾಜ್ ಅವರಿಗೆ ಪತ್ರಕರ್ತರು ಮಾಹಿತಿ ನೀಡಿದಾಗ, ಏನ್ರೀ ನಿಮ್ಮ ಟಾರ್ಚರ್ ಜಾಸ್ತಿ ಆಯ್ತು. ಆ ಶಾಲೆಗೆ ಯಾವ ಅನುದಾನವು ಬರೋದಿಲ್ಲ. ಅದೇನು ಸುದ್ದಿ ಮಾಡುತ್ತೀರೋ ಅದನ್ನು ಮಾಡಿಕೊಳ್ಳಿ. ಏನ್ ನ್ಯೂಸ್ ಮಾಡ್ತಿರಾ ನೀವು. ಏನಂತಾ ನ್ಯೂಸ್ ಮಾಡೋಕೆ ಆಗುತ್ತೆ ನನ್ನ ಮೇಲೆ. ಮಾಡಿದ ಮೇಲೆ ನನಗೆ ರಿಪೋರ್ಟ್ ಕೊಡಿ ಎಂದು ದಾಷ್ಟ್ಯದಿಂದ ಮಾತನಾಡಿದರು
ಬೈರೇನಹಳ್ಳಿಯಿಂದ ಕೊರಟಗೆರೆಗೆ ಸರ್ಕಾರಿ ಬಸ್ಸಿನ ಕೊರತೆ ಇದೆ. ಮಕ್ಕಳು ಪರೀಕ್ಷೆ ಬರೆಯಲು ಸಮಯಕ್ಕೆ ಸರಿಯಾಗಿ ಬಸ್ಸುಗಳು ಬರೋದಿಲ್ಲ. ಪರೀಕ್ಷೆಗೆ ತಡವಾಗಿದ್ದ ಪರಿಣಾಮ ೨೮ ಮಕ್ಕಳನ್ನು ಟಾಟಾ ಎಸಿ ಗೂಡ್ಸ್ ವಾಹನದಲ್ಲಿ ಕಳಿಸಿದ್ದು ಸತ್ಯ. ಮತ್ತೆ ನಮ್ಮ ಶಾಲೆಯಿಂದ ಇನ್ನೊಮ್ಮೆ ಈ ರೀತಿ ಘಟನೆ ನಡೆಯದ ಹಾಗೆ ಕ್ರಮ ಕೈಗೊಳ್ಳುತ್ತೇವೆ.
ಮಹಮ್ಮದ್ ರಫಿ. ಮುಖ್ಯಶಿಕ್ಷಕ. ರಂಗನಾಥ ಪ್ರೌಢಶಾಲೆ. ಬೈರೇನಹಳ್ಳಿ.