ಸಾರಾಂಶ
ಮಕ್ಕಳನ್ನು ಪ್ರೋತ್ಸಾಹಿಸಿ ಅವರ ಭವಿಷ್ಯ ನಿರ್ಮಾಣಕ್ಕೆ ಮಕ್ಕಳ ಹಬ್ಬದಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿವೆ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಗದಗ: ಮಕ್ಕಳನ್ನು ಪ್ರೋತ್ಸಾಹಿಸಿ ಅವರ ಭವಿಷ್ಯ ನಿರ್ಮಾಣಕ್ಕೆ ಮಕ್ಕಳ ಹಬ್ಬದಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿವೆ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ನಗರದ ಕನಕ ಭವನದಲ್ಲಿ ಶನಿವಾರ ಜಿಲ್ಲಾಡಳಿತ, ಜಿಪಂ, ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಧಾರವಾಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಕ್ಕಳ ಹಬ್ಬ ಉದ್ಘಾಟಿಸಿ ಮಾತನಾಡಿದರು.ನ.14ರಂದು ಮಕ್ಕಳ ದಿನಾಚರಣೆ ಆಚರಿಸುತ್ತಾ ಬಂದಿದ್ದೇವೆ. ಅದೇ ರೀತಿ ಮಾ. 2ರಂದು ಮಕ್ಕಳ ಹಬ್ಬ ಆಚರಿಸುತ್ತಿದ್ದೇವೆ. ನಮ್ಮ ದೇಶವು ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು, ಆ ತೋಟದಲ್ಲಿ ಅರಳುತ್ತಿರುವ ಹೂಗಳಾದ ಮಕ್ಕಳೆಲ್ಲರಿಗೂ ಉಜ್ವಲ ಭವಿಷ್ಯ ಕಾದಿದೆ. ನಮ್ಮ ದೇಶದ ಮಾನವ ಸಂಪನ್ಮೂಲವು ಅತೀ ಮುಖ್ಯವಾಗಿದೆ. ಚಂದ್ರಯಾನಕ್ಕೆ ಪ್ರಯಾಣದ ವಿಚಾರ ಮಾಡುವ ಅದ್ಭುತ ಬೆಳವಣಿಗೆಯೂ ಸಹ ಸಂತಸದ ವಿಷಯವಾಗಿದೆ. ನಮ್ಮ ದೇಶವನ್ನು ಶ್ರೀಮಂತ, ಸಂಪದ್ಭರಿತ, ಪ್ರಜ್ಞಾವಂತ, ಬುದ್ಧಿವಂತ ನಾಡನ್ನಾಗಿಸಿ ನಿಮ್ಮ ಸಂಪತ್ತಾಗಿಸುವಲ್ಲಿ ಪ್ರಯತ್ನಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಸಿದ್ದು ಪಾಟೀಲ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪಿ.ವೈ.ಶೆಟ್ಟೆಪ್ಪನವರ, ಡಿಡಿಪಿಐ ಎಂ.ಎ. ರಡ್ಡೇರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ರಾಧಾ ಮಣ್ಣೂರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಡಾ. ಕಮಲವ್ವ ಬೈಲೂರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಫೀಕಾ ಹಳ್ಳೂರ, ಇಲಾಖೆಯ ಅಧಿಕಾರಿ, ಸಿಬ್ಬಂದಿ, ಶಾಲಾ ಶಿಕ್ಷಕರು, ವಿವಿಧ ಸ್ಪರ್ಧೆಯ ನಿರ್ಣಾಯಕರುಗಳು, ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಜರಿದ್ದರು.ವೆಂಕಟೇಶ ಅಲ್ಕೋಡ ನಾಡಗೀತೆ ಪ್ರಸ್ತುತ ಪಡಿಸಿದರು. ಎಸ್.ಎಸ್.ಗೌಡರ, ನಿರೂಪಿಸಿ ವಂದಿಸಿದರು.
ನಂತರ ಮಕ್ಕಳಿಗಾಗಿ ಜಾನಪದ ನೃತ್ಯ, ಕವನ ಬರೆಯುವ ಸ್ಪರ್ಧೆ, ಗಾಯನ, ಹಗ್ಗ ಜಗ್ಗಾಟ, ಲಗೋರಿ, ಚಿತ್ರಕಲೆ, ಕಥೆ ಬರೆಯುವ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳು ಜರುಗಿದವು.