ನಾವು ಪ್ರತಿಷ್ಠಾನ ಟ್ರಸ್ಟ್ ಹಾಗೂ ಸಿಎಂಸಿಎ ಸಂಸ್ಥೆಯ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಕ್ಕಳ ಗ್ರಾಮಸಭೆಯ ಪರಿಕಲ್ಪನೆ, ಉದ್ದೇಶ ಮತ್ತು ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಪ್ರತಿಷ್ಠಾನದ ಕಾರ್ಯಕಾರಿ ಮಂಡಳಿ ನಿರ್ದೇಶಕಿ ಸುಮನಾ ಮಾಹಿತಿ ನೀಡಿದರು.

ಸೋಮವಾರಪೇಟೆ: ನಾವು ಪ್ರತಿಷ್ಠಾನ ಟ್ರಸ್ಟ್ ಹಾಗೂ ಸಿಎಂಸಿಎ ಸಂಸ್ಥೆಯ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಕ್ಕಳ ಗ್ರಾಮಸಭೆಯ ಪರಿಕಲ್ಪನೆ, ಉದ್ದೇಶ ಮತ್ತು ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಪ್ರತಿಷ್ಠಾನದ ಕಾರ್ಯಕಾರಿ ಮಂಡಳಿ ನಿರ್ದೇಶಕಿ ಸುಮನಾ ಮಾಹಿತಿ ನೀಡಿದರು.ಮಕ್ಕಳ ಬದುಕುವ ಹಕ್ಕು, ರಕ್ಷಣೆಯ ಹಕ್ಕು, ಅಭಿವೃದ್ಧಿಯ ಹಕ್ಕು ಹಾಗೂ ಭಾಗವಹಿಸುವಿಕೆಯ ಹಕ್ಕು ಸೇರಿದಂತೆ ವಿವಿಧ ಹಕ್ಕುಗಳ ಕುರಿತು ಚಟುವಟಿಕೆಗಳ ಮೂಲಕ ಅರಿವು ಮೂಡಿಸಲಾಯಿತು. ಗ್ರಾಮ ಪಂಚಾಯಿತಿಯ ರಚನೆ, ಕಾರ್ಯವೈಖರಿ, ಜವಾಬ್ದಾರಿಗಳು ಹಾಗೂ ಗ್ರಾಮಮಟ್ಟದಲ್ಲಿ ಮಕ್ಕಳ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸ್ಥಳೀಯ ಆಡಳಿತದ ಪಾತ್ರದ ಬಗ್ಗೆಯೂ ತಿಳಿಸಲಾಯಿತು.

ಮಕ್ಕಳು ತಮ್ಮ ಗ್ರಾಮದ ಅಭಿವೃದ್ಧಿ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಗ್ರಾಮದ ಸಮಸ್ಯೆಗಳು, ತಮ್ಮ ಅಗತ್ಯಗಳು ಹಾಗೂ ಬೇಡಿಕೆಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ಮೂಲಕ ಗ್ರಾಮಸಭೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಬೇಕು ಎಂದು ತಿಳಿಸಲಾಯಿತು.

ಮಕ್ಕಳ ಹಕ್ಕುಗಳ ರಕ್ಷಣೆ, ಅವರ ಅಭಿಪ್ರಾಯಗಳಿಗೆ ಮನ್ನಣೆ ನೀಡುವುದು ಹಾಗೂ ಮಕ್ಕಳ ಸ್ನೇಹಿ ಗ್ರಾಮ ಆಡಳಿತ ವ್ಯವಸ್ಥೆ ರೂಪಿಸುವಲ್ಲಿ ಮಕ್ಕಳ ಗ್ರಾಮಸಭೆ ಮಹತ್ವದ ವೇದಿಕೆಯಾಗಿದೆ ಎಂದು ಸುಮನಾ ತಿಳಿಸಿಕೊಟ್ಟರು.

ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಸುಕುಮಾರ್, ನಾವು ಪ್ರತಿಷ್ಠಾನ ಸಂಸ್ಥೆಯ ಸ್ಥಾಪಕ ಗೌತಮ್ ಇದ್ದರು.