ಸಾರಾಂಶ
ಓದುವ ಅಭಿರುಚಿಯನ್ನು ಬೆಳೆಸುವ ಪ್ರಮುಖ ಗುರಿಯನ್ನು ಹೊಂದಿರುವ ಕಾರ್ಯಕ್ರಮ ಮಕ್ಕಳ ಸಾಹಿತ್ಯ ಸಂಭ್ರಮ
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಮಕ್ಕಳಲ್ಲಿ ಸಾಹಿತ್ಯಾಸಕ್ತಿಯನ್ನು ಮೂಡಿಸಿ ಓದುವ ಅಭಿರುಚಿಯನ್ನು ಬೆಳೆಸುವ ಪ್ರಮುಖ ಗುರಿಯನ್ನು ಹೊಂದಿರುವ ಕಾರ್ಯಕ್ರಮ ಮಕ್ಕಳ ಸಾಹಿತ್ಯ ಸಂಭ್ರಮ ಎಂದು ರಾಜ್ಯ ಸಂಪನ್ಮೂಲ ವ್ಯಕ್ತಿ ಶಿವಕುಮಾರ್ ಕೊಳ್ಳೆಗಾಲ ಹೇಳಿದರು.ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗು ಭಾರತ ವಿಜ್ಞಾನ ಸಮಿತಿಯ ಸಹಯೋಗದಲ್ಲಿ ಮಾ.4ರಿಂದ 6ರ ತನಕ ಪಟ್ಟಣದಲ್ಲಿ ನಡೆಯುವ ಮಕ್ಕಳ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಬಗ್ಗೆ ಚನ್ನಬಸಪ್ಪ ಸಭಾಂಗಣದಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.ಮಕ್ಕಳಲ್ಲಿ ಅಭಿವ್ಯಕ್ತಿ ಸಾಮಾರ್ಥ್ಯ ಹೆಚ್ಚಿಸುವುದು. ಮಕ್ಕಳು ಮೊಬೈಲ್ ಬಿಟ್ಟು ಗ್ರಂಥಾಲಯದ ಕಡೆಗೆ ತೆರಳುವಂತೆ ಮಾಡುವ ಉದ್ದೇಶ ಹೊಂದಿದೆ. ರಾಜ್ಯದ ಆಯ್ದ 75 ತಾಲೂಕುಗಳಲ್ಲಿ ಮಕ್ಕಳ ಸಾಹಿತ್ಯ ಸಂಭ್ರಮ ನಡೆಯಲಿದೆ. ಮುಂದಿನ ಸಾಲಿನಿಂದ ರಾಜ್ಯದ ಎಲ್ಲ ತಾಲೂಕುಗಳಲ್ಲಿ ಮಕ್ಕಳ ಸಾಹಿತ್ಯ ಸಂಭ್ರಮ ನಡೆಯಲಿದೆ. ಮಕ್ಕಳ ಕಲಿಕೆಯಲ್ಲಿ ವೈಜ್ಞಾನಿಕತೆ ಮೂಡಿಸುವುದೇ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದು ಹೇಳಿದರು.
ಕಥೆ ಕಟ್ಟೋಣ, ಕವನ ಬರೆಯೋಣ, ನಾಟಕ ಮಾಡೋಣ, ನಾನು ರಿಪೋರ್ಟರ್ ಎಂಬ ವಿಷಯದಲ್ಲಿ ವಿದ್ಯಾರ್ಥಿಗಳನ್ನು ತರಬೇತುಗೊಳಿಸಿ, ವಿದ್ಯಾರ್ಥಿಗಳಿಂದಲೇ ಕಥೆ, ಕವನ, ನಾಟಕ ಬರೆಸಿ, ಆಯ್ಕೆಯಾದ ಬರಹಗಳನ್ನು ಪುಸ್ತಕ ರೂಪದಲ್ಲಿ ಹೊರತಂದು, ಗ್ರಂಥಾಲಯಗಳಲ್ಲಿ ಇಡಲಾಗುತ್ತದೆ ಎಂದು ಜಿಲ್ಲಾ ಸಂಯೋಜಕಿ ಸುಮನ್ ಮ್ಯಾಥ್ಯು ಹೇಳಿದರು.ಮಕ್ಕಳು ಬರೆದ ಪುಸ್ತಕಗಳು ಗ್ರಂಥಾಲಯದಲ್ಲಿ ಸಿಕ್ಕರೆ ಮಕ್ಕಳು ಆಕರ್ಷಿತರಾಗುತ್ತಾರೆ. ಈ ಕಾರ್ಯಕ್ರಮವನ್ನು ಮಕ್ಕಳ ಹಬ್ಬದಂತೆ ಆಚರಿಸಲಾಗುವುದು ಎಂದು ಹೇಳಿದರು.ಮಕ್ಕಳ ಸಾಹಿತ್ಯ ಸಂಭ್ರಮಕ್ಕೆ ಆಯ್ಕೆಯಾಗಿರುವ ಶಾಲಾ ಶಿಕ್ಷಕರು, ಗ್ರಂಥಪಾಲಕರು, ಸ್ವಯಂಸೇವಕರಿಗೆ ತರಬೇತಿ ಹಾಗು ಪೂರ್ವ ಮಾಹಿತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಸಂಪನ್ಮೂಲ ವ್ಯಕ್ತಿಗಳಾದ ಗೌತಮ್ ಕಿರಗಂದೂರು, ಶರ್ಮಿಳಾ ರಮೇಶ್, ಹೇಮಂತ್ ಪಾರೇರಾ ಇದ್ದರು.