ಸಾರಾಂಶ
ಮೂರು ದಿನ ನಡೆದ ಉತ್ಸವ । ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ
ಅರಕಲಗೂಡು: ತಾಲೂಕಿನ ಮಲ್ಲಿಪಟ್ಟಣ ಗ್ರಾಮದ ಸಮುದಾಯ ಭವನದಲ್ಲಿ ಮೂರು ದಿನಗಳ ಕಾಲ ನಡೆದ ಮಕ್ಕಳ ಸಾಹಿತ್ಯ ಸಂಭ್ರಮ-2024ರ ಕಾರ್ಯಕ್ರಮದಲ್ಲಿ ವಿಜಾಪುರ ಅರಣ್ಯ ಮತ್ತು ಮಲ್ಲಿಪಟ್ಟಣ ಗ್ರಾಪಂ ವ್ಯಾಪ್ತಿಯ 6 ರಿಂದ 9ನೇ ತರಗತಿ ವರೆಗಿನ ಶಾಲಾ ಮಕ್ಕಳು ವಿವಿಧ ಸಾಹಿತ್ಯ ಸಾಂಸ್ಕೃತಿ ಕಾರ್ಯಕ್ರಮ ನೀಡುವ ಮೂಲಕ ಸಂಭ್ರಮಿಸಿದರು.
ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಭಾರತ ಜ್ಞಾನ ವಿಜ್ಞಾನ ಸಮಿತಿ ಆಶ್ರಯದಲ್ಲಿ ಮೂರು ದಿನಗಳ ಕಾಲ ಜರುಗಿದ ಮಕ್ಕಳ ಸಾಹಿತ್ಯ ಸಂಭ್ರಮದಲ್ಲಿ ಎರಡು ಗ್ರಾಪಂ ವ್ಯಾಪ್ತಿಯ ಪ್ರೌಢಶಾಲೆ, ಹಿರಿಯ ಪ್ರಾಥಮಿಕ ಶಾಲೆಗಳ ನೂರಕ್ಕೂ ಹೆಚ್ಚು ವಿದ್ಯಾರ್ಥಿ, ವಿದ್ಯಾರ್ಥಿನಿಯರು ವಿವಿಧ ಕಲೆ, ಸಾಂಸ್ಕೃತಿಕ ನೃತ್ಯ, ಸಾಹಿತ್ಯ ರಚನೆ, ಸಾಮಾಜಿಕ ನಾಟಕ ಪ್ರದರ್ಶನ, ಹಾಡುಗಾರಿಕೆ, ಚಿತ್ರ ಬಿಡಿಸುವಿಕೆ, ಗ್ರಾಮೀಣ ನಾಟಕ, ರೂಪಕ ಸೇರಿದಂತೆ ಮುಂತಾದ ಕಲೆಗಳನ್ನು ಪ್ರದರ್ಶಿಸಿದರು.ಪರಿಸರ ಸಂರಕ್ಷಣೆಯಲ್ಲಿ ಜನ ಸಾಮಾನ್ಯರ ಪಾತ್ರ, ಕಾಡುಪ್ರಾಣಿಗಳ ರಕ್ಷಣೆ ಹಾಗೂ ಎಚ್ಚರಿಕೆ ಕುರಿತ ಸಾಮಾಜಿಕ ನಾಟಕ ಪ್ರದರ್ಶನ ಹೆಚ್ಚು ಆಕರ್ಷಕವಾಗಿ ಮೂಡಿಬಂದಿತು. ಪೋಷಕರು ತಮ್ಮ ಮಕ್ಕಳಿಗೆ ಹುರಿದುಂಬಿಸಿದರು.
ಗುರುವಾರ ಸಂಜೆ ಜರುಗಿದ ಸಮಾರೋಪ ಸಮಾರಂಭದಲ್ಲಿ ಸಂಭ್ರಮದಲ್ಲಿ ಭಾಗವಹಿಸಿ ಕಲೆಗಳನ್ನು ಪ್ರದರ್ಶಿಸಿದ ಪ್ರತಿ ವಿದ್ಯಾರ್ಥಿ ಹಾಗೂ ತಂಡಕ್ಕೆ ಅಭಿನಂದನಾ ಪತ್ರವನ್ನು ವಿತರಣೆ ಮಾಡಿ ಮಕ್ಕಳ ಸಾಹಿತ್ಯ ಕಲೆಗಳಿಗೆ ಉತ್ತೇಜಿಸಲಾಯಿತು.ಕಾರ್ಯಕ್ರಮದಲ್ಲಿ ತಾಪಂ ಇಒ ಡಾ.ಅಶೋಕ್, ಬಿಇಒ ದೇವರಾಜ್, ತಾಪಂ ಸಹಾಯಕ ನಿರ್ದೇಶಕ ಶೇಖರ್, ಭಾರತ ಜ್ಞಾನ ವಿಜ್ಞಾನ ಸಮಿತಿ ಸಂಯೋಜಕಿ ರಾಧ, ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ಕುಮಾರ್ ಹನ್ಯಾಳು, ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿದ್ದರು.ಅರಕಲಗೂಡು ತಾಲೂಕು ಮಲ್ಲಿಪಟ್ಟಣದಲ್ಲಿ ಗುರುವಾರ ಜರುಗಿದ ಮಕ್ಕಳ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳು ಕಾಡುಪ್ರಾಣಿಗಳ ರಕ್ಷಣೆ ಕುರಿತು ರೂಪಕ ನಾಟಕ ಪ್ರದರ್ಶಿಸಿದರು.