ನಾಡಿನ ಪ್ರತಿಷ್ಠಿತ ಕನ್ನಡಪ್ರಭ- ಏಷ್ಯಾನೆಟ್ ಸುವರ್ಣ ನ್ಯೂಸ್ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಆಯೋಜಿಸುತ್ತಾ ಬಂದಿರುವ ಚಿತ್ರಕಲಾ ಸ್ಪರ್ಧೆ ಎಂಟನೆಯ ವರ್ಷಕ್ಕೆ ಕಾಲಿಟ್ಟಿದ್ದು, ಪ್ರಸಕ್ತ ಸಾಲಿನ ಚಿತ್ರಕಲಾ ಸ್ಪರ್ಧೆಯೂ ಶುಕ್ರವಾರ (ನ.13) ಇಲ್ಲಿನ ಇಂದಿರಾ ಗಾಜಿನ ಮನೆಯಲ್ಲಿ ನಡೆಯಲಿದೆ.
ಹುಬ್ಬಳ್ಳಿ:
ನಾಡಿನ ಪ್ರತಿಷ್ಠಿತ ಕನ್ನಡಪ್ರಭ- ಏಷ್ಯಾನೆಟ್ ಸುವರ್ಣ ನ್ಯೂಸ್ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಆಯೋಜಿಸುತ್ತಾ ಬಂದಿರುವ ಚಿತ್ರಕಲಾ ಸ್ಪರ್ಧೆ ಎಂಟನೆಯ ವರ್ಷಕ್ಕೆ ಕಾಲಿಟ್ಟಿದ್ದು, ಪ್ರಸಕ್ತ ಸಾಲಿನ ಚಿತ್ರಕಲಾ ಸ್ಪರ್ಧೆಯೂ ಶುಕ್ರವಾರ (ನ.13) ಇಲ್ಲಿನ ಇಂದಿರಾ ಗಾಜಿನ ಮನೆಯಲ್ಲಿ ನಡೆಯಲಿದೆ. ಈ ಚಿತ್ರಕಲಾ ಸ್ಪರ್ಧೆಗೆ ಅಗತ್ಯ ಸಿದ್ಧತೆಗಳೆಲ್ಲ ಪೂರ್ಣಗೊಂಡಿದ್ದು, ಇಂದಿರಾಗಾಜಿನ ಮನೆಯಲ್ಲಿ ಶುಕ್ರವಾರ ಮಕ್ಕಳ ಕಲರವ ಕೇಳಿ ಬರಲಿದೆ. ಬೆಳಗ್ಗೆ 9.30ರಿಂದ 11.30ರ ವರೆಗೆ 8, 9 ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೆ ಸ್ಪರ್ಧೆ ನಡೆಯಲಿದ್ದು,ದಿವ್ಯಾಂಗ ಮಕ್ಕಳಿಗಾಗಿ ಪ್ರತ್ಯೇಕ ಸ್ಫರ್ಧೆ ನಡೆಸಲಾಗುತ್ತಿದೆ. ಧಾರವಾಡ, ಹಾವೇರಿ, ಗದಗ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸರಿಸುಮಾರು 3000 ಮಕ್ಕಳು ಪಾಲ್ಗೊಳ್ಳಲಿದ್ದಾರೆ. 11.30ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಿದ್ದಾರೆ. ಉದ್ಯಮಿ, ಸ್ವರ್ಣಾ ಗ್ರೂಪ್ ಆಫ್ ಕಂಪನೀಸ್ನ ವ್ಯವಸ್ಥಾಪಕ ನಿರ್ದೇಶಕ ಡಾ. ಸಿ.ಎಚ್. ವಿಎಸ್ವಿ ಪ್ರಸಾದ, ಮಜೇಥಿಯಾ ಫೌಂಡೇಷನ್ ಅಧ್ಯಕ್ಷೆ ನಂದಿನಿ ಕಶ್ಯಪ ಮಜೇಥಿಯಾ, ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸದಾನಂದ ಡಂಗನವರ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮಾಜಿ ಸದಸ್ಯ ಮೋಹನ ಹಿರೇಮನಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಉಮೇಶ ಬಮ್ಮಕ್ಕನವರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಕನ್ನಡಪ್ರಭ ಪತ್ರಿಕೆಯ ಸಂಪಾದಕರಾದ ಗಿರೀಶರಾವ್ ಹತ್ವಾರ್ (ಜೋಗಿ) ವಹಿಸಲಿದ್ದಾರೆ. ಕನ್ನಡಪ್ರಭ ಹುಬ್ಬಳ್ಳಿ ಆವೃತ್ತಿ ಮುಖ್ಯಸ್ಥ ಮಲ್ಲಿಕಾರ್ಜುನ ಸಿದ್ದಣ್ಣವರ ಉಪಸ್ಥಿತರಿರಲಿದ್ದಾರೆ. ವಿಶೇಷ ಅತಿಥಿಯಾಗಿ ಜೀ ಟೀವಿಯ ಸರಿಗಮ ರಿಯಾಲಿಟಿ ಶೋ ಖ್ಯಾತಿಯ ಗಾಯಕಿ ಮಹನ್ಯ ಗುರು ಪಾಟೀಲ ಭಾಗವಹಿಸಲಿದ್ದಾರೆ.ಈ ವರ್ಷ ಕಾರ್ಯಕ್ರಮಕ್ಕೆ ಸ್ವರ್ಣಾ ಗ್ರೂಪ್ ಆಫ್ ಕಂಪನಿ, ಮಜೇಥಿಯಾ ಫೌಂಡೇಶನ್, ಟ್ರ್ಯಾಕ್ ಆ್ಯಂಡ್ ಟ್ರೈಲ್, ಹ್ಯಾಂಗೋ ಐಸ್ಕ್ರಿಂ, ಧಾರವಾಡ ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ, ಹೆಗಡೆ ಗ್ರೂಪ್, ಗಂಗಾವತಿ ಸಿಲ್ಕ್ ಪ್ಯಾಲೇಸ್, ದಾವಣಗೆರೆಯ ಬಿ.ಎಸ್.ಚನ್ನಬಸಪ್ಪ ಆ್ಯಂಡ್ ಸನ್ಸ್ ಪ್ರಾಯೋಜಕತ್ವ ವಹಿಸುವ ಮೂಲಕ ಕನ್ನಡಪ್ರಭ ಕಾರ್ಯಕ್ಕೆ ಕೈ ಜೋಡಿಸಿವೆ.