ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ಮೆಣಸಿನಕಾಯಿ ಆವಕ ಹೆಚ್ಚಳ, ದರದಲ್ಲಿ ಸ್ಥಿರತೆ

| Published : Mar 25 2025, 12:46 AM IST

ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ಮೆಣಸಿನಕಾಯಿ ಆವಕ ಹೆಚ್ಚಳ, ದರದಲ್ಲಿ ಸ್ಥಿರತೆ
Share this Article
  • FB
  • TW
  • Linkdin
  • Email

ಸಾರಾಂಶ

ಸತತವಾಗಿ ಕಳೆದ 6 ವಾರ ಕೂಡ ಒಟ್ಟು ಆವಕಿನಲ್ಲಿ 2.5 ಲಕ್ಷ ದಾಟಿದ್ದು, ಇಲ್ಲಿಯವರೆಗೂ ಸುಮಾರು 25 ಲಕ್ಷಕ್ಕೂ ಅಧಿಕ ಮೆಣಸಿನಕಾಯಿ ಚೀಲ ಅವಕವಾಗಿದೆ ಮಾರುಕಟ್ಟೆ ಮೂಲ ದೃಢಪಡಿಸಿದೆ.

ಬ್ಯಾಡಗಿ: ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸೋಮವಾರ ಒಟ್ಟು 2.79 ಲಕ್ಷ ಮೆಣಸಿಕಾಯಿ ಚೀಲಗಳು ಆವಕಾಗಿದ್ದು, ಕಳೆದ ಗುರುವಾರಕ್ಕಿಂತ 30 ಸಾವಿರ ಚೀಲ ಅಧಿಕ ಮೆಣಸಿನಕಾಯಿ ಮಾರುಕಟ್ಟೆಗೆ ಆಗಮಿಸಿದ್ದು, ಎಂದಿನಂತೆ ದರದಲ್ಲಿ ಸ್ಥಿರತೆ ಮುಂದುವರಿದಿದೆ.

ಪ್ರಸಕ್ತ ವರ್ಷದ ಸೀಸನ್ ಹೆಚ್ಚು ದಿನಗಳ ಕಾಲ ಮುಂದುವರಿಯುವುದಿಲ್ಲ ಎನ್ನುವಷ್ಟರಲ್ಲಿ ವರ್ತಕರ ಲೆಕ್ಕಕ್ಕೆ ಸಿಗದಂತೆ ಮೆಣಸಿನಕಾಯಿ ಆವಕವಾಗುತ್ತಿದೆ. ಎಲ್ಲ ರೀತಿಯ ಲೆಕ್ಕಾಚಾರ ತಲೆ ಕೆಳಗಾಗುವಂತೆ ಮಾಡಿದೆಯಾದರೂ ಖರೀದಿದಾರರಲ್ಲಿ ಮಾತ್ರ ಹುಮ್ಮಸ್ಸು ಕೊರತೆ ಮಾತ್ರ ಕಾಣುತ್ತಿಲ್ಲ.25 ಲಕ್ಷಕ್ಕೂ ಅಧಿಕ ಚೀಲ: ಸತತವಾಗಿ ಕಳೆದ 6 ವಾರ ಕೂಡ ಒಟ್ಟು ಆವಕಿನಲ್ಲಿ 2.5 ಲಕ್ಷ ದಾಟಿದ್ದು, ಇಲ್ಲಿಯವರೆಗೂ ಸುಮಾರು 25 ಲಕ್ಷಕ್ಕೂ ಅಧಿಕ ಮೆಣಸಿನಕಾಯಿ ಚೀಲ ಅವಕವಾಗಿದೆ ಮಾರುಕಟ್ಟೆ ಮೂಲ ದೃಢಪಡಿಸಿದೆ. ಪ್ರಮುಖ ಅಂತಾರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆ ಆಂಧ್ರದ ಗುಂಟೂರಿಗೆ ಹೋಗಬೇಕಾಗಿದ್ದ ಮೆಣಸಿನಕಾಯಿ ಬ್ಯಾಡಗಿ ಕಡೆಗೆ ಮುಖ ಮಾಡಿದ್ದಾಗಿ ತಿಳಿದು ಬಂದಿದೆ. ಪಾರದರ್ಶಕ ವ್ಯಾಪಾರ: ಬ್ಯಾಡಗಿಯಲ್ಲಿ ಟೆಂಡರ್ ದಿನವೇ ಎಲ್ಲ ಮಾಲುಗಳು ಮಾರಾಟ, ಅಂದೇ ರೈತರಿಗೆ ಹಣಕಾಸಿನ ಸೌಲಭ್ಯ, ಸ್ಪರ್ಧಾತ್ಮಕ ದರಕ್ಕಾಗಿ ಇ-ಟೆಂಡರ್ ಸೌಲಭ್ಯ, ಎಲೆಕ್ಟ್ರಾನಿಕ್ ತೂಕದ ಯಂತ್ರಗಳ ಬಳಿಕೆ ಪಾರದರ್ಶಕ ವ್ಯಾಪಾರವನ್ನು ಒಪ್ಪಿಕೊಂಡ ಆಂಧ್ರಪ್ರದೇಶ ಹಾಗೂ ತೆಲಂಗಾಣದ ರೈತರು ಗುಂಟೂರು ಬದಲಿಗೆ ಬ್ಯಾಡಗಿ ಮಾರುಕಟ್ಟೆ ಕಡೆಗೆ ಮುಖ ಮಾಡಿದ್ದಾಗಿ ತಿಳಿದುಬಂದಿದೆ.ಬಿಗಿ ಭದ್ರತೆ ನಡುವೆ ಟೆಂಡರ್: ಪ್ರಸಕ್ತ ವರ್ಷದ ಸೀಸನ್ ಆರಂಭದಿಂದಲೂ ಬಿಗಿ ಭದ್ರತೆ ಏರ್ಪಡಿಸಿರುವ ಪೊಲೀಸರು ಎಂದಿನಂತೆ ಪಥಸಂಚಲನ ನಡೆಸಿದರು. ರೈತರ ಹೆಸರಿನಲ್ಲಿ ಪುಂಡಾಟಿಕೆ ನಡೆಸುವವರ ವಿರುದ್ಧ ತೀವ್ರ ನಿಗಾ ವಹಿಸಿದ್ದು, ಮಾರುಕಟ್ಟೆ ಪ್ರಾಂಗಣದಲ್ಲಿ ಶಸ್ತ್ರಸಜ್ಜಿತ ಸಿಬ್ಬಂದಿಯೊಂದಿಗೆ ಸೋಮವಾರ 2 ಬಾರಿ ಪಥಸಂಚಲನ ನಡೆಸಿದರು.ಸೋಮವಾರದ ಮಾರುಕಟ್ಟೆ ದರ: ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸೋಮವಾರ ಕಡ್ಡಿತಳಿ ಮೆಣಸಿನಕಾಯಿ ಕ್ವಿಂಟಲ್‌ಗೆ ಕನಿಷ್ಠ ₹2069, ಗರಿಷ್ಠ ₹24100, ಡಬ್ಬಿತಳಿ ಕನಿಷ್ಠ ₹2469, ಗರಿಷ್ಠ ₹26299, ಗುಂಟೂರು ಕನಿಷ್ಠ ₹799, ಗರಿಷ್ಠ ₹13509ಕ್ಕೆ ಮಾರಾಟವಾಗಿವೆ.ಜಿಲ್ಲೆಯ ವಿವಿಧೆಡೆ ವರುಣನ ಆರ್ಭಟ

ಹಾವೇರಿ: ಜಿಲ್ಲೆಯ ವಿವಿಧ ಭಾಗದಲ್ಲಿ ಸೋಮವಾರ ಸಂಜೆ ಮಳೆಯಾಗಿದೆ.ರಾಣಿಬೆನ್ನೂರು ತಾಲೂಕಿನ ಲಿಂಗದಹಳ್ಳಿಯಲ್ಲಿ ಆಲಿಕಲ್ಲು ಮಳೆಯಾಗಿದ್ದರೆ, ಹಾವೇರಿ ಸಮೀಪದ ಕಬ್ಬೂರ ಗ್ರಾಮದ ಮನೆಯ ಮೇಲೆ ಬೃಹತ್ ಗಾತ್ರದ ನೀಲಗಿರಿ ಮರ ಬಿದ್ದಿದೆ.ಹಾವೇರಿ ನಗರದಲ್ಲಿ ಕೆಲಕಾಲ ಜೋರು ಮಳೆ ಸುರಿದಿದ್ದರೆ, ಕೆಲಭಾಗದಲ್ಲಿ ಗಾಳಿ ಸಹಿತವಾಗಿ ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆಯಾಗಿದೆ.

ಕಬ್ಬೂರು ಗ್ರಾಮದ ಸಿದ್ದಪ್ಪ ವಾಲೀಕರ್ ಅವರ ಮನೆಯ ಚಾವಣಿ ಮೇಲೆ ಬೃಹತ್ ಗಾತ್ರದ ನೀಲಗಿರಿ ಮರ ಉರುಳಿ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮರ ಬಿದ್ದಾಗ ಸಿದ್ದಪ್ಪ ಅವರ ಇಬ್ಬರು ಮಕ್ಕಳು, ಹೆಂಡತಿ, ತಂದೆ, ತಾಯಿ ಮನೆಯೊಳಗೆ ಇದ್ದರು. ಒಮ್ಮಿಂದೊಮ್ಮೆಲೆ ಭಾರಿ ಗಾಳಿಗೆ ಮಳೆ ಬಿದ್ದ ಪರಿಣಾಮ ಮನೆಯ ಚಾವಣಿ ಕುಸಿದು, ಹೆಂಚುಗಳು ಒಡೆದು ನೀರು ಮನೆಯೊಳಗೆ ನುಗ್ಗಿದೆ.