ಚಿಂಚೋಳಿ: ಐನಾಪುರ ಗ್ರಾಪಂನಲ್ಲಿ ಸಿಗುತ್ತಿಲ್ಲ ಬಡವರಿಗೆ ಸೌಲಭ್ಯ

| Published : Jan 12 2024, 01:46 AM IST

ಸಾರಾಂಶ

ಜನಸ್ಪಂದನ ಸಭೆ ಸಭೆಯಲ್ಲಿ ಮನೆ ಮಂಜೂರಿಗೆ ಹಣ ಕೇಳುತ್ತಾರೆಂದು ಪಿಡಿಒ ವಿರುದ್ಧ ಜಿಲ್ಲಾ ಪಂಚಾಯ್ತಿ ಸಿಇಒ ಭಂವರಸಿಂಗ ಮೀನಾ ಅವರಿಗೆ ಗ್ರಾಮಸ್ಥರ ದೂರು.

ಕನ್ನಡಪ್ರಭ ವಾರ್ತೆ ಚಿಂಚೋಳಿ

ತಾಲೂಕಿನ ಐನಾಪೂರ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಗ್ರಾಮ ಮತ್ತು ತಾಂಡಾ ನಿವಾಸಿಗಳಿಗೆ ಸರ್ಕಾರಿ ಯೋಜನೆಗಳು ಸಮರ್ಪಕವಾಗಿ ಸಿಗುತ್ತಿಲ್ಲ. ಬಡವರಿಗೆ ಗ್ರಾಪಂನಿಂದ ನೀಡುವ ಮನೆಗಳನ್ನು ಹಣ ಕೊಟ್ಟವರಿಗೆ ಕೊಡುತ್ತಾರೆ. ಪಿಡಿಒ ಗ್ರಾಪಂ ಕಚೇರಿಗೆ ಸರಿಯಾಗಿ ಬರುವುದಿಲ್ಲ. ೩ ಗ್ರಾಪಂ ಪ್ರಭಾರ ಹೊಂದಿರುವ ಪಿಡಿಒ ಐನಾಪೂರ ಗ್ರಾಮದಲ್ಲಿ ಮೂಲ ಸೌಕರ್ಯಗಳ ಬಗ್ಗೆ ಗಮನಹರಿಸುತ್ತಿಲ್ಲವೆಂದು ಮಹಿಳೆಯರು ಕಣ್ಣೀರಿಡುತ್ತಾ ಕಲಬುರಗಿ ಜಿಪಂ ಸಿಇಒ ಭಂವರಸಿಂಗ ಮೀನಾ ಅವರ ಮುಂದೆ ನೋವು ತೋಡಿಕೊಂಡರು.

ಮುಖ್ಯಮಂತ್ರಿಗಳ ಆದೇಶದ ಮೇರೆಗೆ ತಾಲೂಕಿನ ಐನಾಪೂರ ಗ್ರಾಮದ ಸಿದ್ದಲಿಂಗೇಶ್ವರ ಮಠದ ಸಮುದಾಯಭವನದಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ ಸಂದರ್ಭದಲ್ಲಿ ಗ್ರಾಮದ ಕಸ್ತೂರಿ ಬಸಯ್ಯಸ್ವಾಮಿ ಮಾತನಾಡಿ, ವಾಸಿಸಲು ಇದ್ದ ಒಂದು ಮನೆಯ ಕೋಣೆ ಮಾರಿಕೊಂಡಿದ್ದಾನೆ ನನ್ನ ಯೋಗಕ್ಷೇಮವನ್ನು ನೋಡಿಕೊಳ್ಳುವವರು ಯಾರೂ ಇಲ್ಲ. ಸರಕಾರದಿಂದ ಮನೆ ಮಂಜೂರಿ ಮಾಡುವಂತೆ ಗ್ರಾಪಂ ಕಚೇರಿಗೆ ತಿರುಗಾಡಿ ಸಾಕಾಗಿ ಹೋಗಿದೆ. ಇಂತಹ ಇಳಿವಯಸ್ಸಿನಲ್ಲಿ ಜಾಗ ಖರೀದಿಸಿ ಮನೆ ಕಟ್ಟಿಕೊಳ್ಳುವ ಸಾಮರ್ಥ್ಯ ನನಗೆ ಇಲ್ಲ. ಸರಕಾರದಿಂದ ಮನೆ ನೀಡಲು ಕೇಳಿದರೂ ಹಣ ಕೇಳುತ್ತಾರೆ ಗ್ರಾಪಂ ಸದಸ್ಯರಿಗೆ ಕೇಳಿ ಸಾಕಾಗಿದೆ ಎಂದು ಸಿಇಓ ಮುಂದೆ ಗೋಳು ತೋಡಿಕೊಂಡರು.

ಗ್ರಾಪಂ ಪಿಡಿಓ ಅವರು ಗಡಿಲಿಂಗದಳ್ಳಿ, ಚಿಮ್ಮನಚೋಡ, ಐನಾಪೂರ ಮೂರು ಗ್ರಾಪಗಳಿಗೆ ಪಿಡಿಓ ಎಂದು ಕೆಲಸ ಮಾಡುತ್ತಿದ್ದಾರೆ. ನಮ್ಮ ಗ್ರಾಮದ ಜನರ ಸಮಸ್ಯೆಗೆ ಸ್ಪಂದಿಸುವುದಿಲ್ಲ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸಗಳು ಸರಿಯಾಗಿ ನಡೆಯುತ್ತಿಲ್ಲ. ವಿದ್ಯುತ್‌ ದೀಪ, ಕುಡಿವ ನೀರು, ಜಲಜೀವನ ಮಿಷನ್‌ ವಿಫಲವಾಗಿದೆ. ೧೫ನೇ ಹಣಕಾಸು ಯೋಜನೆ ಅಡಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳ ನಡೆಸಿಲ್ಲ. ಗ್ರಾಮದಲ್ಲಿ ಸ್ವಚ್ಛ ಭಾರತ ಮಿಷನ್‌ ಯೋಜನೆ ಅಡಿಯಲ್ಲಿ ವೈಯಕ್ತಿಕ ಶೌಚಾಲಯಗಳು ಏನು ಇಲ್ಲ. ಗ್ರಾಪಂನಲ್ಲಿ ಕೆಲಸ ಮಾಡದೇ ಸರಕಾರದ ಅನುದಾನ ದುರುಪಯೋಗವೇ ಹೆಚ್ಚಾಗಿದೆ. ಗ್ರಾಪಂ ವತಿಯಿಂದ ಗ್ರಾಮಸಭೆ ನಡೆಸುತ್ತಿಲ್ಲ ಎಂದು ಗ್ರಾಮಸ್ಥರು ಸಿಇಓ ಅವರಿಗೆ ತಿಳಿಸಿದರು.

ಖಾನಾಪೂರ ಫತ್ತುನಾಯಕ ತಾಂಡಾದ ಗ್ರಾಪಂ ಸದಸ್ಯ ಲಕ್ಷ್ಮಣ ರಾಠೋಡ ಮಾತನಾಡಿ, ನಮ್ಮ ತಾಂಡಾದಲ್ಲಿ ಗ್ರಾಪಂದಿಂದ ಏನು ಕೆಲಸ ಆಗುತ್ತಿಲ್ಲ. ಜನರ ಸಮಸ್ಯೆಗೆ ಕೇಳಬೇಕಾದರೆ ಪಿಡಿಓ ಕಚೇರಿ ಸರಿಯಾಗಿ ಬರುವುದಿಲ್ಲ. ಕೃಷಿಹೊಂಡಾ, ಬದುನಿರ್ಮಾಣ, ಶೆಡ್‌ ನಿರ್ಮಾಣ ನರೇಗಾ ಕೆಲಸವನ್ನು ತಾಂಡಾಕ್ಕೆ ಕೊಟ್ಟಿಲ್ಲವೆಂದು ಹೇಳಿದರು.

ಚಂದು ಗುತ್ತೆದಾರ ಮಾತನಾಡಿ, ಐನಾಪೂರ ಗಾಂಧಿ ಪುರಸ್ಕಾರ ಪಡೆದುಕೊಂಡಿದೆ. ಆದರೆ ಇಲ್ಲಿ ಮೂಲ ಸೌಕರ್ಯ ಸರಿಯಾಗಿ ಜನರಿಗೆ ಕೊಡುತ್ತಿಲ್ಲ ತಾಲೂಕಿನಿಂದ ಕೊನೆಯ ಗ್ರಾಮವಾಗಿದೆ. ಹೋಬಳಿ ಇದ್ದರೂ ಸಹಾ ಇಲ್ಲಿನ ಜನರಿಗೆ ಸರಕಾರದ ಯೋಜನೆಗಳು ಮರೀಚಿಕೆಯಾಗಿದೆ. ತಾಪಂ ಅಧಿಕಾರಿಗಳು ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಿಇಒ ಭಂವರಸಿಂಗ್‌ ಮೀನಾ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದ ನಂತರ ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡಿ, ನಿಮ್ಮ ಗ್ರಾಮದ ಸಮಸ್ಯೆಗಳನ್ನು ಆಲಿಸುವುದಕ್ಕಾಗಿಯೇ ಬಂದಿದ್ದೇನೆ. ಸರಕಾರದ ಯೋಜನೆಗಳು ಬಡವರ ಮನೆಯ ಬಾಗಿಲಿಗೆ ಮುಟ್ಟಿಸುವುದೇ ಇದರ ಮುಖ್ಯ ಉದ್ದೇಶವಾಗಿದೆ. ಪಿಡಿಓ, ತಾಪಂ ಅಧಿಕಾರಿಗಳ ವಿರುದ್ಧ ಕೆಲವರು ದೂರು ನೀಡಿದ್ದಾರೆ ಇದರ ಬಗ್ಗೆ ಗಮನಹರಿಸುತ್ತೇನೆ ಎಂದರು.

ಗ್ರಾಪಂ ಅಧ್ಯಕ್ಷ ಸಂಜೀವಕುಮಾರ ಡೊಂಗರ, ಉಪಾಧ್ಯಕ್ಷ ಉಮಲಿಬಾಯಿ, ತಾಪಂ ಅಧಿಕಾರಿ ಶಂಕರ ರಾಠೋಡ, ಡಾ. ಧನರಾಜ ಬೊಮ್ಮ, ಎಇಇ ರಾಹುಲ್‌ ಕಾಂಬ್ಳೆ, ಸಮಾಜ ಕಲ್ಯಾಣಾಧಿಕಾರಿ ಪ್ರಭುಲಿಂಗ ಬುಳ್ಳ, ಕೃಷಿ ಅಧಿಕಾರಿ ವೀರಶೆಟ್ಟಿ ರಾಠೋಡ, ಪಿಡಿಓ ಗೋವಿಂದರೆಡ್ಡಿ, ತೋಟಗಾರಿಕೆ ಅಧಿಕಾರಿ ರಾಜಕುಮಾರ ಗೋವಿನ, ಬಿಸಿಎಂ ಅಧಿಕಾರಿ ಅನುಸೂಯ, ಎಡಿಎ ನಾಗೇಂದ್ರಪ್ಪ ಬೆಡಕಪಳ್ಳಿ ಇನ್ನಿತರ ಅಧಿಕಾರಿಗಳು ಭಾಗವಹಿಸಿದ್ದರು.