ತಾಲೂಕಿನ ಚಿನ್ನಮಳ್ಳಿ ಗ್ರಾಮದ ಅಭಿನವ ಕೈಲಾಸ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವ ಪ್ರಯುಕ್ತ ಜ.3ರಿಂದ ಆರಂಭಗೊಂಡಿದ್ದು ಜ.13 ರವರೆಗೆ ಪ್ರತಿದಿನ ರಾತ್ರಿ 8 ಗಂಟೆಗೆ ಶಿವ ಪುರಾಣ ಪ್ರಾರಂಭವಾಗಲಿದೆ.

ಅಫಜಲ್ಪುರ: ತಾಲೂಕಿನ ಚಿನ್ನಮಳ್ಳಿ ಗ್ರಾಮದ ಅಭಿನವ ಕೈಲಾಸ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವ ಪ್ರಯುಕ್ತ ಜ.3ರಿಂದ ಆರಂಭಗೊಂಡಿದ್ದು ಜ.13 ರವರೆಗೆ ಪ್ರತಿದಿನ ರಾತ್ರಿ 8 ಗಂಟೆಗೆ ಶಿವ ಪುರಾಣ ಪ್ರಾರಂಭವಾಗಲಿದೆ.

ಪುರಾಣರತ್ನ ಪ್ರಶಸ್ತಿ ಪುರಸ್ಕೃತ ಸಂಗಮೇಶ ಶಾಸ್ತ್ರಿಗಳು ಮಾಶಾಳ ಅವರಿಂದ ಪುರಾಣ ಪ್ರವಚನ ನಡೆಯಲಿದೆ. ವೀರೇಂದ್ರ ಜಿ.ಬಂಟನಹಳ್ಳಿ, ಸೇಡಂ ಮತ್ತು ಮೌನೇಶ ವಿಶ್ವಕರ್ಮ ಗೌನಳ್ಳಿ ಸಂಗೀತದ ಸಾಥ್ ನೀಡುವರು. ಜಾತ್ರಾ ಮಹೋತ್ಸವದ ಅಂಗವಾಗಿ ಜ.9ರಿಂದ 13ವರೆಗೆ ಮಲ್ಲಿಕಾರ್ಜುನ ದೇವರಿಗೆ ಪ್ರತಿನಿತ್ಯ ಎಣ್ಣೆ ಹಚ್ಚುವ ಕಾರ್ಯಕ್ರಮ ನಡೆಯಲಿದೆ.

ಭವ್ಯ ಚಮ್ಮಳಿಗೆ ಮೆರವಣಿಗೆ:

ಜ.14ರಂದು ಬೆಳಿಗ್ಗೆ 8 ಗಂಟೆಗೆ ಮಲ್ಲಿಕಾರ್ಜುನ ದೇವರಿಗೆ ಅಕ್ಷತಾರೋಪಣ ನಂತರ ಭೀಮಾ ನದಿಯಿಂದ 108 ಮುತ್ತೈದೆಯರ ಕುಂಭಗಳೊಂದಿಗೆ ಭವ್ಯ ಮೆರವಣಿಗೆ ಜರುಗುವದು. ಮಲ್ಲಿಕಾರ್ಜುನ ದೇವರು ಹಾಗೂ ಭ್ರಮರಾಂಬಿಕಾ ದೇವಿಗೆ ಸಹಸ್ರನಾಮದೊಂದಿಗೆ ಅಭಿಷೇಕ ಜರುಗುವದು.

ಅಂದು ರಾತ್ರಿ 7 ಗಂಟೆಗೆ ಧರ್ಮಸಭೆ ನಡೆಯುವದು. ರಾತ್ರಿ 9 ಗಂಟೆಯಿಂದ ಬೆಳಗಿನವರೆಗೂ ಮಲ್ಲಿಕಾರ್ಜುನ ಚಾಮನಾಳ ಅವರ ಅಧ್ಯಕ್ಷತೆಯಲ್ಲಿ ವಿವಿಧ ಭಜನಾ ಸಂಘಗಳಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. 14 ರಂದು ರಾತ್ರಿ 2 ಗಂಟೆಗೆ ಭವ್ಯ ಚಮ್ಮಳಿಗೆ ಮೆರವಣಿಗೆ ನಡೆಯಲಿದೆ. ಜ.15 ರಂದು ಬೆಳಿಗ್ಗೆ 7ರಿಂದ 9 ರವರೆಗೆ ಪುರವಂತರ ಮೆರವಣಿಗೆಯೊಂದಿಗೆ ದೇವರ ಪಲ್ಲಕ್ಕಿಯು ಗುಡಿಯ ಪ್ರವೇಶ ಮಾಡುವುದು. ಭಕ್ತಾದಿಗಳು ಜಾತ್ರಾ ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮಲ್ಲಿಕಾರ್ಜುನ ದೇವರ ಕೃಪೆಗೆ ಪಾತ್ರರಾಗುವಂತೆ ಸಕಲ ಸದ್ಭಕ್ತ ಮಂಡಳಿ ಹಾಗೂ ಸುಕ್ಷೇತ್ರ ಚಿನ್ನಮಳ್ಳಿ ಅಭಿನವ ಕೈಲಾಸ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಅಭಿವೃದ್ಧಿ ಸಮಿತಿಯವರು ಕೋರಿದ್ದಾರೆ.