ಶಿವಾನಂದ ಪಿ.ಮಹಾಬಲಶೆಟ್ಟಿ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿಈ ಬಾರಿ ಅರಿಷಿಣಕ್ಕೆ ಮಾರುಕಟ್ಟೆಯಲ್ಲಿ ತೀವ್ರ ಬೇಡಿಕೆ ಉಂಟಾಗಿದ್ದು, ಅರಿಷಿಣಕ್ಕೆ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯೂ ಮೇಳೈಸಿರುವುದರಿಂದ ಈ ಭಾಗದ ರೈತರು ಅರಿಷಿಣ ಬೀಜಗಳನ್ನು ಖರೀದಿಸಲು ಪೈಪೋಟಿಯಲ್ಲಿ ಮುಂದಾಗಿದ್ದಾರೆ.
ಈ ಭಾಗದ ರೈತರ ಬೇಡಿಕೆಯ ಭರಾಟೆಗೆ ಪೂರೈಕೆ ಸಾಧ್ಯವಾಗದ ಕಾರಣ ತಮಿಳುನಾಡಿನ ಚಿನ್ನಾ ಸೇಲಂನಿಂದ ಅರಿಷಿಣ ಬೀಜಗಳನ್ನು ತರಿಸಿಕೊಳ್ಳಲಾಗುತ್ತಿದೆ. ಈ ಬಾರಿ ಇಳುವರಿ ಕಡಿಮೆ ಇರುವುದರಿಂದ ಮುಂದಿನ ದಿನಗಳಲ್ಲಿ ಬೀಜಗಳ ಬೆಲೆ ಇನ್ನಷ್ಟು ದುಬಾರಿಯಾಗುವುದು ಖಚಿತ ಎಂದರಿತ ತಮಿಳುನಾಡಿನ ರೈತರು ಅವುಗಳನ್ನು ಸಂಗ್ರಹ ಮಾಡಿಕೊಂಡಿದ್ದರೇ, ಉತ್ತರ ಕರ್ನಾಟಕದ ಅದರಲ್ಲೂ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರೈತರಿಗೆ ನಾಟಿ ಮಾಡಲು ಈ ಭಾಗದಲ್ಲಿ ಬೀಜಗಳ ತೀವ್ರ ಕೊರತೆಯಾಗುತ್ತಿದೆ.ಬೇಡಿಕೆಗನುಗುಣ ಪೂರೈಕೆ ಇರದ ಕಾರಣಕ್ಕೆ ಬೀಜದ ಬೆಲೆ ಕೂಡ ಹೆಚ್ಚಾಗುತ್ತಿದೆ. ಕ್ವಿಂಟಲ್ ಅರಿಷಿಣ ಬೀಜಕ್ಕೆ ₹5800 ದಿಂದ ₹6400 ಗಳವರೆಗೂ ಪ್ರಸ್ತುತ ಮಾರುಕಟ್ಟೆಯಲ್ಲಿ ದರವಿದೆ. ಕೃಷ್ಣಾ ನದಿ ಪಾತ್ರದಲ್ಲಿ ಬೇಸಿಗೆಯ ಸಂದರ್ಭದಲ್ಲಿಯೂ ಸಾಕಷ್ಟು ಪ್ರಮಾಣದ ನೀರಿನ ಲಭ್ಯತೆ ಇರುವುದರಿಂದ ಇಲ್ಲಿನ ರೈತರು ಲಾಭದಾಯಕವಾದ ಅರಿಷಿಣ ಬೆಳೆ ನಾಟಿಗೆ ಸಜ್ಜಾಗುತ್ತಿದ್ದಾರೆ. ತಾಲೂಕಿನ ಹಲವಾರು ಗ್ರಾಮಗಳ ಸುತ್ತ ಅಂದಾಜು ೧೦೦ ರಿಂದ ೧೫೦ ಲಾರಿಯಷ್ಟು ಅರಿಷಿಣ ಬೀಜಗಳು ಮಾರಾಟವಾಗುತ್ತಿವೆ. ಒಂದು ಲಾರಿಯಲ್ಲಿ ೧೬ ಟನ್‌ನಷ್ಟು ಬೀಜಗಳಿರುತ್ತವೆ. ಜಗದಾಳ ಗ್ರಾಮದಲ್ಲಿ ದೊರೆಯುವ ಗುಣಮಟ್ಟದ ಅರಿಷಿಣ ಬೀಜಗಳನ್ನು ಖರೀದಿಸಲು ವಿಜಯಪುರ, ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳ ವಿವಿಧ ಪ್ರದೇಶಗಳ ರೈತರು ಆಗಮಿಸುತ್ತಿದ್ದಾರೆ.ಅರಿಷಿಣ ಬೀಜಗಳಲ್ಲಿಯೂ ಕೂಡ ಸಾಕಷ್ಟು ಕಲಬೆರಕೆಯ ಬೀಜಗಳು ಬರುತ್ತಿರುವುದರಿಂದ ಬೀಜ ಖರೀದಿಸಿ ನಾಟಿ ಮಾಡುವ ರೈತರಿಗೆ ಲಕ್ಷಾಂತರ ಮೊತ್ತದ ಹಾನಿಯಾಗಿರುವ ಪ್ರಕರಣಗಳೂ ಇವೆಯೆಂದು ರೈತರು ಹೇಳುತ್ತಾರಾದರೂ, ಅರಿಷಿಣಕ್ಕೆ ಬಂಗಾರದ ಬೆಲೆ ಬಂದಿರುವುದರಿಂದ ಬೆಳೆಯುವ ಉಮೇದಿ ಹೆಚ್ಚುತ್ತಿದೆ ಎಂಬುವುದು ಹಲವಾರು ರೈತರ ಹೇಳಿಕೆ.ಕೈತುಂಬ ಉತ್ತಮ ಆದಾಯ ತರುವ ಅರಿಷಿಣ ಕೃಷಿಯು ರೈತರಿಗೆ ವರದಾನವಾಗಿದೆ. ೮ ತಿಂಗಳ ಬೆಳೆಯಾಗಿರುವ ಅರಿಷಿಣ ಬೆಳೆಗೆ ರೈತರು ಎಷ್ಟೇ ದುಬಾರಿಯಾದರೂ ಸರಿ, ಬೀಜ ಖರೀದಿಗೆ ಮುಂದಾಗುತ್ತಿದ್ದಾರೆ. ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಈ ಬೆಳೆ ನಾಟಿ ಮಾಡುವ ಸಕಾಲವಾಗಿದ್ದು, ಜನವರಿ ಮತ್ತು ಮಾರ್ಚ್ ನಡುವೆ ಬೆಳೆ ಕಟಾವಿಗೆ ಬರುತ್ತದೆ. ಚಿನ್ನಾ ಸೇಲಂ ಅರಿಷಿಣ ಬೀಜಕ್ಕೆ ಬನಹಟ್ಟಿಯ ಪ್ರಗತಿಪರ ರೈತ ಹಾಗೂ ವರ್ತಕ ಮಹೇಶ ದ್ವಾರಕದಾಸ ಭಟ್ಟಡ(೯೬೩೨೧-೯೧೬೬೩)ರನ್ನು ಸಂಪರ್ಕಿಸಬಹುದು.