ಸಾರಾಂಶ
ಧರ್ಮಸ್ಥಳ ಗ್ರಾಮದಲ್ಲಿ ಅನಾಥ ಶವಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣದ ಆರೋಪಿ ಚಿನ್ನಯ್ಯನನ್ನು ಬೆಳ್ತಂಗಡಿಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಮಂಗಳವಾರ ಪೊಲೀಸರು ಹಾಜರುಪಡಿಸಿದರು. ಬಳಿಕ ಚಿನ್ನಯ್ಯನ ಹೇಳಿಕೆಯನ್ನು ದಾಖಲಿಸಲಾಯಿತು. ಈ ಪ್ರಕ್ರಿಯೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಸೆ.25 ರಂದು ಮತ್ತೆ ಕೋರ್ಟ್‌ಗೆ ಹಾಜರಾಗಿ ಹೇಳಿಕೆ ದಾಖಲಿಸುವಂತೆ ನ್ಯಾಯಾಧೀಶರು ಸೂಚಿಸಿದರು.
ಪ್ರಕರಣ ಕುರಿತಂತೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್‌ಎಸ್‌ಎಸ್) ಸೆಕ್ಷನ್ 183ರ ಅಡಿ ನ್ಯಾಯಾಲಯದಲ್ಲಿ ಸ್ವಯಂಪ್ರೇರಿತವಾಗಿ ತಪ್ಪೊಪ್ಪಿಗೆ ಹೇಳಿಕೆ ದಾಖಲಿಸಲು ಚಿನ್ಯಯ್ಯನನ್ನು ಶಿವಮೊಗ್ಗ ಜೈಲಿನಿಂದ ಬೆಳ್ತಂಗಡಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಕರೆತರಲಾಯಿತು.ಚಿನ್ನಯ್ಯನ ಹೇಳಿಕೆ ದಾಖಲು ಪ್ರಕ್ರಿಯೆ ಸಂಜೆವರೆಗೆ ನಡೆಯಿತು. ಆತ ಮತ್ತಷ್ಟು ಹೇಳಿಕೆ ನೀಡಲು ಇದೆ ಎಂದು ಹೇಳಿದ ಕಾರಣ ನ್ಯಾಯಾಧೀಶರು ಸೆ. 25ರಂದು ಮತ್ತೆ ಕೋರ್ಟ್‌ಗೆ ಹಾಜರುಪಡಿಸಿ ಹೇಳಿಕೆ ದಾಖಲಿಗೆ ಅವಕಾಶ ನೀಡುವುದಾಗಿ ಹೇಳಿದರು. ಹೀಗಾಗಿ ಚಿನ್ನಯ್ಯನನ್ನು ಮತ್ತೆ ಶಿವಮೊಗ್ಗ ಜೈಲಿಗೆ ಕರೆದೊಯ್ಯಲಾಗಿದೆ.
ಕಣ್ಣೀರಿಟ್ಟ ಚಿನ್ನಯ್ಯ:ಈ ಮಧ್ಯೆ, ಚಿನ್ನಯ್ಯ ಬೆಳ್ತಂಗಡಿ ಕೋರ್ಟ್‌ನಲ್ಲಿ ನ್ಯಾಯಾಧೀಶರ ಎದುರು ಕಣ್ಣೀರು ಹಾಕಿದ ಘಟನೆ ನಡೆಯಿತು. ಈ ಪ್ರಕರಣದಲ್ಲಿ ನನ್ನದು ತಪ್ಪಿಲ್ಲ, ನನ್ನನ್ನು ಸಿಲುಕಿಸಲಾಗಿದೆ. ಪ್ರಕರಣಕ್ಕೂ, ನನಗೂ ಯಾವುದೇ ಸಂಬಂಧ ಇಲ್ಲ ಎಂದಿದ್ದಾನೆ.
ಬುರುಡೆ ಹಾಜರು ಪಡಿಸುವಾಗ ನ್ಯಾಯಾಧೀಶರ ಮುಂದೆ ಚಿನ್ನಯ್ಯ ನೀಡಿದ ಹೇಳಿಕೆಗೆ ವ್ಯತಿರಿಕ್ತವಾಗಿ ಚಿನ್ನಯ್ಯ ಈಗ ಹೇಳಿಕೆ ನೀಡುತ್ತಿದ್ದಾನೆ. ಈತ ಕೋರ್ಟ್‌ನಲ್ಲಿ ನೀಡುವ ಹೇಳಿಕೆಯನ್ನು ಆಧರಿಸಿ ಎಸ್ಐಟಿಯ ಮುಂದಿನ ತನಿಖೆ ನಿರ್ಧಾರವಾಗಲಿದೆ.ಮಟ್ಟಣ್ಣವರ್ ಪತ್ನಿ ಖಾತೆಯಿಂದಹಣ ವರ್ಗಾವಣೆ ಕುರಿತು ತನಿಖೆ
ಧರ್ಮಸ್ಥಳ ಗ್ರಾಮದಲ್ಲಿ ಅನಾಥ ಶವಗಳ ಹೂಳಿದೆ ಎಂಬ ಆರೋಪದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಒಟ್ಟು ಪ್ರಕರಣಕ್ಕೆ ಹಣಕಾಸು ನೆರವು ನೀಡಿದವರ ಮಾಹಿತಿ ಕಲೆ ಹಾಕಿದ್ದು, 11 ಮಂದಿಗೆ ನೋಟಿಸ್ ನೀಡಿದೆ.ಆರೋಪಿ ಚಿನ್ನಯ್ಯ, ಆತನ ಪತ್ನಿ ಕುಟುಂಬಸ್ಥರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾದ ವಿವರ ಸಂಗ್ರಹಿಸಿದೆ. ಹಣಕಾಸು ನೆರವು ನೀಡಿರುವ ಮಹೇಶ್ ಶೆಟ್ಟಿ ತಿಮರೋಡಿ ಬೆಂಬಲಿಗರು ಎನ್ನಲಾದ 11 ಮಂದಿಗೆ ತನಿಖೆಗೆ ಹಾಜರಾಗುವಂತೆ ಈಗಾಗಲೇ ಎಸ್‌ಐಟಿ ನೋಟಿಸ್ ನೀಡಿದ್ದು, ಆರು ಮಂದಿಯನ್ನು ವಿಚಾರಿಸಿದೆ. ಈ ನಡುವೆ ಗಿರೀಶ್ ಮಟ್ಟಣ್ಣವರ್ ಪತ್ನಿಯ ಖಾತೆಯಿಂದಲೂ ಚಿನ್ನಯ್ಯನ ಪತ್ನಿ ಖಾತೆಗೆ ಹಣ ವರ್ಗಾವಣೆಯಾಗಿರುವ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ.ಆರು ತಿಂಗಳ ಹಿಂದೆ ಹಣ ವರ್ಗಾವಣೆ ಆಗಿರುವ ಬಗ್ಗೆ ದಾಖಲೆ ಪಡೆದಿರುವ ಅಧಿಕಾರಿಗಳು ಇನ್ನಷ್ಟು ಮಂದಿ ಹಣಕಾಸು ನೆರವು ನೀಡಿರುವ ಮಾಹಿತಿ ಸಂಗ್ರಹಿಸಿದ್ದಾರೆ. ಈಗಾಗಲೇ ಎಸ್‌ಐಟಿ ಆರು ಮಂದಿಯ ವಿಚಾರಣೆ ನಡೆಸಿದ್ದು, ಉಳಿದ ಮಂದಿಯ ವಿಚಾರಣೆ ನಡೆಸಬೇಕಾಗಿದೆ.
(ಬಾಕ್ಸ್):ನಿರೀಕ್ಷಣಾ ಜಾಮೀನು ಅರ್ಜಿ ಸ್ವಿಕಾರಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪದಲ್ಲಿ ಕೇಸು ದಾಖಲಾದ ಹಿನ್ನೆಲೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ತಲೆಮರೆಸಿಕೊಂಡಿದ್ದಾರೆ. ಈ ಮಧ್ಯೆ, ನಿರೀಕ್ಷಣಾ ಜಾಮೀನಿಗಾಗಿ ತಿಮರೋಡಿ ಸಲ್ಲಿಸಿದ ಅರ್ಜಿಯನ್ನು ಮಂಗಳವಾರ ಮಂಗಳೂರಿನ ಜಿಲ್ಲಾ ನ್ಯಾಯಾಲಯ ಸ್ವೀಕರಿಸಿದೆ. ನಿರೀಕ್ಷಣಾ ಜಾಮೀನು ನೀಡದಂತೆ ಆಕ್ಷೇಪಣೆ ಸಲ್ಲಿಸಲು ಸರ್ಕಾರಿ ಅಭಿಯೋಜಕರು ಕಾಲಾವಕಾಶ ಕೇಳುವ ಸಾಧ್ಯತೆ ಇದ್ದು, ಪೊಲೀಸ್ ವರದಿ ಪಡೆದು ಸರ್ಕಾರಿ ಅಭಿಯೋಜಕರು ಬುಧವಾರ ಆಕ್ಷೇಪಣೆ ಸಲ್ಲಿಸಲಿದ್ದಾರೆ. ವಾದ-ಪ್ರತಿವಾದದ ಬಳಿಕ ನಿರೀಕ್ಷಣಾ ಜಾಮೀನು ನೀಡುವ ಬಗ್ಗೆ ನ್ಯಾಯಾಲಯ ನಿರ್ಧರಿಸಲಿದೆ.(ಬಾಕ್ಸ್):ಚಿನ್ನಯ್ಯನ ತಪ್ಪೊಪ್ಪಿಗೆತನಿಖೆಗೆ ಸಿಎಂಗೆ ಪತ್ರ
ಬುರುಡೆ ಆರೋಪಿ ಚಿನ್ನಯ್ಯನ ತಪ್ಪೊಪ್ಪಿಗೆ ಹೇಳಿಕೆ ಬಗ್ಗೆ ಸಮಗ್ರ ತನಿಖೆಗೆ ಒತ್ತಾಯಿಸಿ ಮುಖ್ಯಮಂತ್ರಿಗೆ ಸುಪ್ರೀಂಕೋರ್ಟ್ ವಕೀಲ ರೋಹಿತ್ ಪಾಂಡೆ ಎಂಬುವರು ಪತ್ರ ಬರೆದಿದ್ದಾರೆ. ಚಿನ್ನಯ್ಯ ಮ್ಯಾಜಿಸ್ಟ್ರೇಟ್ ಮುಂದೆ ಹಿಂತೆಗೆದುಕೊಂಡ ಹೇಳಿಕೆಯ ಸಂದರ್ಭಗಳ ಕುರಿತು ತಕ್ಷಣದ ತನಿಖೆಗೆ ಅವರು ಮನವಿ ಮಾಡಿದ್ದಾರೆ.ಚಿನ್ನಯ್ಯನ ಸಾಕ್ಷಿ ಹೇಳಿಕೆ ಬಲಾತ್ಕಾರ ಅಥವಾ ಒತ್ತಡದ ಲಕ್ಷಣಗಳನ್ನು ಹೊಂದಿದೆ. ಈ ವೇಳೆ ಹೊರ ಬಂದ ವಿಡಿಯೋಗಳು ಚಿನ್ನಯ್ಯನ ಮೊದಲಿನ ಹೇಳಿಕೆಗಳನ್ನು ನಂಬುವಂತೆ ಮಾಡಿವೆ. ಆದ್ದರಿಂದ ಸಿಎಂ ಕೂಡಲೇ ಮಧ್ಯಪ್ರವೇಶ ಮಾಡಿ ಚಿನ್ನಯ್ಯನ ಮೊದಲಿನ ತಪ್ಪೊಪ್ಪಿಗೆ ಹೇಳಿಕೆ ಬಗ್ಗೆ ಸಮಗ್ರ ತನಿಖೆ ನಡೆಸಲು ಸೂಚಿಸಬೇಕು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.