----ಕನ್ನಡಪ್ರಭ ವಾರ್ತೆ ಮೈಸೂರು

ಪರಿಸರ ಸಂರಕ್ಷಣೆಯಲ್ಲಿ ಮಕ್ಕಳು ಮತ್ತು ಯುವಜನರು ಮುಂಚೂಣಿಯಲ್ಲಿದ್ದರೆ ಮಾತ್ರ ಪರಿಣಾಮಕಾರಿ ಬದಲಾವಣೆ ಸಾಧ್ಯ ಎಂದು ಪರಿಸರ ತಜ್ಞ ಪ್ರೊ.ಯು.ಎನ್. ರವಿಕುಮಾರ್ ತಿಳಿಸಿದರು.ನಗರ ಕುಪ್ಪಣ್ಣ ಪಾರ್ಕ್ ನಲ್ಲಿ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಯು (ಆರ್.ಎಲ್.ಎಚ್.ಪಿ) ಶನಿವಾರ ಆಯೋಜಿಸಿದ್ದ ಪರಿಸರ ಸ್ನೇಹಿ ಮೈಸೂರಿಗಾಗಿ ಚಿಣ್ಣರ ಹೆಜ್ಜೆ ಕಾರ್ಯಕ್ರಮವನ್ನು ಅವರು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.ಪರಿಸರವನ್ನು ಹಾನಿಗೊಳಿಸುವಲ್ಲಿ ಮಾನವನ ಪಾತ್ರ ಪ್ರಮುಖವಾಗಿದ್ದು, ಕೇವಲ ಮಾತಿನಲ್ಲಿ ಮಾತ್ರವಲ್ಲದೆ ನಿತ್ಯ ಜೀವನದಲ್ಲಿ ಪರಿಸರ ಸ್ನೇಹಿ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ. ಪ್ರತಿಯೊಬ್ಬರೂ ಕನಿಷ್ಠ 5 ಗಿಡಗಳನ್ನು ನೆಟ್ಟರೆ ಅದು ಒಂದು ಕಾಡಿನ ನಿರ್ಮಾಣಕ್ಕೆ ಕಾರಣವಾಗಬಹುದು ಎಂದು ಅವರು ಹೇಳಿದರು.ಪರಿಸರಕ್ಕಾಗಿ ನಾವು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪರಶುರಾಮೇಗೌಡ ಮಾತನಾಡಿ, ಪ್ಲಾಸ್ಟಿಕ್‌ ನ ಅತಿಯಾದ ಬಳಕೆ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಎಲ್ಲರೂ ಬಟ್ಟೆಯ ಚೀಲಗಳನ್ನು ಬಳಸಬೇಕು ಹಾಗೂ ಮನೆಯಿಂದಲೇ ನೀರಿನ ಬಾಟಲ್ ತೆಗೆದುಕೊಂಡು ಹೋಗುವ ಅಭ್ಯಾಸ ಬೆಳೆಸಿಕೊಳ್ಳಬೇಕು. ತಾವು ಮಾತ್ರ ಜಾಗೃತರಾಗುವುದಕ್ಕಿಂತ ಇತರರಲ್ಲಿಯೂ ಅರಿವು ಮೂಡಿಸುವುದು ಮುಖ್ಯ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಮಕ್ಕಳಿಗಾಗಿ ಪರಿಸರ ಜಾಗೃತಿ ಕಾರ್ಯಕ್ರಮ ಹಾಗೂ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ವಿವಿಧ ಗ್ರಾಮಗಳು ಮತ್ತು ಜಿಲ್ಲೆಗಳಿಂದ 200 ಹೆಚ್ಚು ಮಕ್ಕಳು ಮತ್ತು ಯುವಜನರು ಭಾಗವಹಿಸಿದ್ದರು. ಸಂಸ್ಥೆಯ ನಿರ್ದೇಶಕಿ ಸರಸ್ವತಿ ಮೊದಲಾದವರು ಇದ್ದರು.