ಸಾರಾಂಶ
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಉತ್ತಮ ಸಂಸ್ಕಾರ ಉತ್ತಮ ಫಲವನ್ನು ನೀಡುತ್ತದೆ ಎನ್ನುವುದಕ್ಕೆ ಶಿಶು ಮಂದಿರದಲ್ಲಿನ ಮಕ್ಕಳ ಸಾಮರ್ಥ್ಯವನ್ನು ಕಂಡಾಗ ಅರಿವಾಗುತ್ತಿದೆ ಎಂದು ಶಿಶು ಮಂದಿರದ ಪೋಷಕರ ಸಂಘದ ಅಧ್ಯಕ್ಷೆ ಶ್ರೀದೇವಿ ಹೇಳಿದರು.ಅವರು ಉಪ್ಪಿನಂಗಡಿ ವೇದಶಂಕರ ನಗರದಲ್ಲಿರುವ ಶ್ರೀ ಮಾಧವ ಶಿಶು ಮಂದಿರದಲ್ಲಿ ಶನಿವಾರ ಪುಟಾಣಿ ಮಕ್ಕಳಿಂದಲೇ ನಿರ್ವಹಿಸಲ್ಪಟ್ಟ ಚಿಣ್ಣರ ಚಿಲಿಪಿಲಿ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನಾಲ್ಕೈದು ವರ್ಷದ ಮಕ್ಕಳು ಕಾರ್ಯಕ್ರಮವೊಂದನ್ನು ನಿರೂಪಣೆಯಿಂದ ಧನ್ಯವಾದದ ವರೆಗೆ ನಿರ್ವಹಿಸುತ್ತಾರೆ ಎನ್ನುವುದನ್ನು ಕಲ್ಪಿಸಿಯೇ ಇರಲಿಲ್ಲ. ಅದನ್ನು ಶಿಶು ಮಂದಿರದಲ್ಲಿ ಕಂಡು ಮಕ್ಕಳ ಸಾಮರ್ಥ್ಯವನ್ನು ಅರಿತಾಗ ಬಿತ್ತಿದಂತೆ ಬೆಳೆ ಎನ್ನುವ ನಾಣ್ಣುಡಿಯಂತೆ ಗೋಚರಿಸುತ್ತದೆ ಎಂದರು. ಕಾರ್ಯಕ್ರಮದಲ್ಲಿ ಪೋಷಕ ಸಂಘದ ಭವ್ಯ, ಶಿಶು ಮಂದಿರ ಆಡಳಿತ ಮಂಡಳಿಯ ಜಯಶ್ರೀ ಜನಾರ್ಧನ್, ವಿಶ್ವನಾಥ ಶೆಟ್ಟಿ ಕಂಗ್ವೆ, ಹರಿರಾಮಚಂದ್ರ , ಉದಯ್ ಕುಮಾರ್ ಉಪಸ್ಥಿತರಿದ್ದು, ಶುಭ ನುಡಿದರು. ಸಭಾ ಕಾರ್ಯಕ್ರಮವನ್ನು ಪುಟಾಣಿ ಶಾರ್ವಿ ನಿರ್ವಹಿಸಿದ್ದು, ಪುಟಾಣಿಗಳಾದ ನಿಶಿತಾ ಸ್ವಾಗತಿಸಿ, ಸುಧರ್ಮ ವಂದಿಸಿದರು. ಕಾರ್ಯಕ್ರಮ ನಿಮಿತ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪುಟಾಣಿ ಅತೀಕ್ಷ್ ನಿರ್ವಹಿಸಿದರು. ಶಿಶು ಮಂದಿರದ ಮಾತಾಜಿಗಳಾದ ಚೈತ್ರಾ, ಕಾಂತಿಮಣಿ ಹಾಗೂ ಚಂದ್ರಾವತಿ ಉಪಸ್ಥಿತರಿದ್ದರು.