ಸಾರ್ಥಕ ಜೀವನ ನಡೆಸಲು ಶರಣ ಸಾಹಿತ್ಯ ಅವಶ್ಯ

| Published : Dec 02 2024, 01:20 AM IST

ಸಾರಾಂಶ

ಜನರು ಸಾರ್ಥಕ ಜೀವನ ನಡೆಸಲು ಶರಣ ಸಾಹಿತ್ಯ ಅವಶ್ಯ, ಮಾರ್ಗದರ್ಶಕವಾಗಲಿದೆ ಎಂದು ಜಡೆ ಸಂಸ್ಥಾನ ಮಠದ ಶ್ರೀ ಕುಮಾರ ಕಂಪಿನ ಸಿದ್ದ ವೃಷಭೇಂದ್ರ ಸ್ವಾಮಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಆನಂದಪುರ

ಜನರು ಸಾರ್ಥಕ ಜೀವನ ನಡೆಸಲು ಶರಣ ಸಾಹಿತ್ಯ ಅವಶ್ಯ, ಮಾರ್ಗದರ್ಶಕವಾಗಲಿದೆ ಎಂದು ಜಡೆ ಸಂಸ್ಥಾನ ಮಠದ ಶ್ರೀ ಕುಮಾರ ಕಂಪಿನ ಸಿದ್ದ ವೃಷಭೇಂದ್ರ ಸ್ವಾಮಿ ತಿಳಿಸಿದರು.

ಅವರು ಭಾನುವಾರ ಮುರುಘಾಮಠದಲ್ಲಿ ನಡೆದ ಉಚಿತ ಆರೋಗ್ಯ ಶಿಬಿರ ಮತ್ತು ಶರಣ ಸಾಹಿತ್ಯ ಸಮ್ಮೇಳನ ಹಾಗೂ 585ನೇ ಮಾಸಿಕ ಶಿವಾನುಭವ ಗೋಷ್ಠಿಯ ಧ್ವಜಾರೋಹಣ ನೆರವೇರಿಸಿ ಮಾತನಾಡಿ ವಚನಗಳು, ರಚನೆಯಾಗಿ 8 ಶತಮಾನಗಳ ನಂತರವೂ ಜನರಿಗೆ ಮಾರ್ಗದರ್ಶಕ ಜ್ಯೋತಿಯಾಗಿ ಕಾರ್ಯನಿರ್ವಹಿಸುತ್ತಿವೆ. ನೂರಾರು ಮಠಗಳಂತೆ ಇಂದಿಗೂ ಆನಂದಪುರ ಜಗದ್ಗುರು ಗುರುಬಸವೇಶ್ವರ ಮಠ ಶರಣರ ಪಾರಂಪರೆ ಕಾಯಕ, ಶಿಕ್ಷಣ ಮತ್ತು ದಾಸೋಹ ಅನಿಸರಿಸುತ್ತಿರುವ ಮಠಗಳಲ್ಲಿ ಒಂದಾಗಿದೆ ಎಂದರು.

12ನೆಯ ಶತಮಾನದ ಶರಣರು ಜನರ ನಡುವಿನ ತಾರತಮ್ಯವನ್ನು ಬಲವಾಗಿ ವಿರೋಧಿಸಿದರು. ಶಿವಶರಣರು ಶೋಷಣೆ ಮತ್ತು ದಬ್ಬಾಳಿಕೆಯಿಂದ ಮುಕ್ತವಾದ ಮತ್ತು ಸಮಾನತೆಯ ಸಮಾಜಕ್ಕಾಗಿ ಹೋರಾಡಿದವರು. 12ನೇ ಶತಮಾನದಲ್ಲಿ ಶಿವಶರಣರು ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರವಾದದ್ದು. ನಾವು ನಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡುವುದರೊಂದಿಗೆ ಶರಣರ ವಚನಗಳನ್ನ ತಿಳಿಸುವಂತಹ ರಾಗಬೇಕು ಎಂದು ಕರೆ ನೀಡಿದರು.ಆರೋಗ್ಯ ಶಿಬಿರ ಹಾಗೂ ಶರಣು ಸಾಹಿತ್ಯ ಸಮ್ಮೇಳವನ್ನು ಜಿಲ್ಲಾ ಆಯುಷ್ ಅಧಿಕಾರಿ ಡಾ. ಲಿಂಗರಾಜು ಹಿಂಡಸಘಟ್ಟ ಉದ್ಘಾಟಿಸಿ ಮಾತನಾಡಿ, ಮುರುಘಾಮಠದಲ್ಲಿರುವ ಡಾ. ನಾಗೇಶ್ ಸುವರ್ಣ ಕವಿ ಆಯುರ್ವೇದ ಆಸ್ಪತ್ರೆ ಉತ್ತಮ ಸೇವೆಗಳನ್ನು ಸಲ್ಲಿಸುತ್ತಿದೆ. ಈ ಆಸ್ಪತ್ರೆಯ ಸಮಗ್ರ ಅಭಿವೃದ್ಧಿಗೆ ಇನ್ನು ಹೆಚ್ಚಿನ ಸಹಕಾರ ನೀಡುವುದಾಗಿ ತಿಳಿಸಿದರು. ಅಧ್ಯಕ್ಷತೆ ವಹಿಸಿದ ತಾಳಗುಪ್ಪ ಕೂಡಲಿ ಮಠದ ಸಿದ್ಧವೀರ ಸ್ವಾಮಿ ಮಾತನಾಡಿ, ಜಾಗತೀಕರಣದ ಭರಾಟೆಯಲ್ಲಿ ಸ್ಥಳೀಯ ಸಂಸ್ಕೃತಿ ಕ್ಷೀಣಿಸುತ್ತಿದೆ. ಶರಣರ ಸಂಸ್ಕೃತಿಯನ್ನು ಯುವ ಸಮೂಹ ಮರೆಯುತ್ತಿವೆ. ನಾವು ನಮ್ಮ ಮಕ್ಕಳಿಗೆ ಆಸ್ತಿ ಮಾಡದೆ ವಚನಗಳ ಅರಿವು ಮೂಡಿಸುವಂತಹ ಪ್ರಯತ್ನವಾಗಬೇಕು. ಮನುಷ್ಯರನ್ನು ಪ್ರೀತಿ ವಿಶ್ವಾಸದಿಂದ ಕಾಣುವುದೇ ಧರ್ಮ ಅದಕ್ಕಿಂತ ಮಿಗಿಲಾದ ಧರ್ಮ ಇಲ್ಲ. ಬಸವಣ್ಣನವರು ಮನುಷ್ಯನ ಘನತೆ ಮತ್ತು ಸ್ವಾತಂತ್ರ್ಯಕ್ಕೆ ಮಾನ್ಯತೆ ನೀಡಿದಂತಹ ಏಕೈಕ ವ್ಯಕ್ತಿ ಎಂದರು.

ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಶ್ರೀ ದಿವ್ಯ ಸಾನಿಧ್ಯದಲ್ಲಿ ನಡೆದ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಗುತ್ತಲ ಮಠದ ಪ್ರಭು ಸ್ವಾಮಿ, ಹಿರೇ ಸಿಂದೋಗಿ ಮಠದ ಚಿದಾನಂದ ಶ್ರೀ, ರಾಮದುರ್ಗ ವಿರಕ್ತ ಮಠದ ಶಾಂತವೀರ ಶ್ರೀ, ಮೂಲೆಗೆದ್ದೆ ಶಿವಯೋಗ ಆಶ್ರಮದ ಅಭಿನವ ಚೆನ್ನಬಸವ ಶ್ರೀ, ಕೆ. ಬಿದಿರೆ ದೊಡ್ಡ ಮಠದ ಪ್ರಭುಕುಮಾರ್ ಶಿವಾಚಾರ್ಯ ಶ್ರೀ, ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ರುದ್ರಮುನಿ.ಎನ್. ಸಜ್ಜನ್, ವೀರಶೈವ ರಾಜ್ಯ ಘಟಕದ ಸದಸ್ಯ ಎಸ್‌.ವಿ. ಈರೇಶ್, ವೀರಶೈವ ತಾಲೂಕು ಘಟಕದ ಅಧ್ಯಕ್ಷ ಕೆ.ವಿ ಪ್ರವೀಣ್, ಅನೇಕರು ಉಪಸ್ಥಿತರಿದ್ದರು.