ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಮಕ್ಕಳ ಸಮಗ್ರ ವ್ಯಕ್ತಿತ್ವದ ವಿಕಸನಕ್ಕೆ ಚಿಣ್ಣರ ಜಾಣರ ಜಗಲಿ ಹರಟೆ ಕಾರ್ಯಕ್ರಮ ವರದಾನವಾಗಿದೆ ಎಂದು ಆದಿಚುಂಚನಗಿರಿಯ ಹೇಮಗಿರಿ ಶಾಖಾ ಮಠದ ಗೌರವ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಹೇಳಿದರು.ಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧಿಪತಿ ಭೈರವೈಕ್ಯ, ಪದ್ಮಭೂಷಣ ಡಾ.ಬಾಲಗಂಗಾಧರನಾಥ ಮಹಾ ಸ್ವಾಮೀಜಿಯವರ 52ನೇ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಬಿಜಿಎಸ್ ಚಿನ್ನರ ಜಾಣರ ಜಗುಲಿ-2025 ಕಾರ್ಯಕ್ರಮವನ್ನು ರಾಶಿ ಪೂಜೆ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ತಮ್ಮ ದೈನಂದಿನ ಪಾಠ ಪ್ರವಚನಗಳು ಮತ್ತು ಆಟೋಗಳ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ತಮ್ಮ ವ್ಯಕ್ತಿತ್ವವು ಸಮಗ್ರವಾಗಿ ವಿಕಾಸವಾಗುತ್ತದೆ. ಚಿನ್ನರ ಜಾಣರ ಜಗಲಿ ಹರಟೆ ಕಾರ್ಯಕ್ರಮದಿಂದ ಮಕ್ಕಳಲ್ಲಿ ಮಾತನಾಡುವ ಕಲೆ ವೃದ್ಧಿಸುವ ಜೊತೆಗೆ ವೇದಿಕೆ ಮೇಲೆ ನಿಂತು ಮಾತನಾಡಲು ಆತ್ಮವಿಶ್ವಾಸ ಹೆಚ್ಚಾಗುತ್ತದೆ ಎಂದರು.ನಾಡಿನ ಪ್ರಖ್ಯಾತ ಹರಟೆ ಮಲ್ಲರನ್ನು ಕರೆಸಿ ಚರ್ಚಾ ವಿಷಯವನ್ನು ಆಯೋಜಿಸಿ ಜೀವನದಲ್ಲಿ ಯಾರು ಸುಖಿ ವಿವಾಹಿತರೋ ಎಂಬ ವಿಷಯದ ಪರವಾಗಿ ಹಾಗೂ ಅವಿವಾಹಿತರೋ ಎಂಬ ವಿಷಯದ ವಿರೋಧವಾಗಿ ನಾಡಿನ ಪ್ರಖ್ಯಾತ ಹರಟೆ ಖ್ಯಾತಿಯ ಇಂದುಮತಿ ಸಾಲಿಮಠ ಅವರ ನೇತೃತ್ವದಲ್ಲಿ ಜಾಣರ ಜಗಲಿ ಕಾರ್ಯಕ್ರಮದ ಮೂಲಕ ವಿಷಯದ ಪರ ಹಾಗೂ ವಿರೋಧವಾಗಿ ಎರಡು ಸುತ್ತು ಚರ್ಚೆ ನಡೆಸಿ ಅಂತಿಮವಾಗಿ ಜುಗಲ್ ಬಂದಿಯ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಗುತ್ತಿದೆ ಎಂದರು.
ಮೂರು ಗಂಟೆಗಳ ಕಾಲ ವಿದ್ಯಾರ್ಥಿಗಳು ಪರ ವಿರೋಧವಾಗಿ ಚರ್ಚೆ ನಡೆಸುವ ಜೊತೆಗೆ ಹಲವು ವಿಚಾರಗಳ ಮಂಥನವನ್ನು ಮಾಡುವುದರಿಂದ ವಿದ್ಯಾರ್ಥಿಗಳಲ್ಲಿ ಮಾತನಾಡುವ ಕಲೆ ವೃದ್ಧಿಯಾಗಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಆದ್ದರಿಂದ ನಮ್ಮ ಹೇಮಗಿರಿ ಹಾಗೂ ಧಾರವಾಡ ಶಾಖ ಮಠದ ವ್ಯಾಪ್ತಿಯ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಚಿಣ್ಣರ ಜಾಣರ ಜಗಲಿ ಕಾರ್ಯಕ್ರಮವನ್ನು ಪ್ರತಿ ವರ್ಷವೂ ತಪ್ಪದೇ ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ ಎಂದರು.ನಾಡಿನ ಹರಟೆ ಕಾರ್ಯಕ್ರಮದ ಖ್ಯಾತಿಯ ಸುಪ್ರಸಿದ್ದ ವಾಗ್ಮಿಗಳಾದ ಇಂದುಮತಿ ಸಾಲಿಮಠ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿಯೂ ಪ್ರತಿಭಾವಂತ ವಿದ್ಯಾರ್ಥಿಗಳಿದ್ದಾರೆ. ಇಂದಿನ ಹರಟೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ನಡೆಸಿದ ಚರ್ಚೆ ಹಾಗೂ ವಿಷಯದ ಪರ ವಿರೋಧವಾಗಿ ಮಂಡಿಸಿದ ವಿಚಾರಗಳು ಸಮಾಜಕ್ಕೆ ಪ್ರಸ್ತುತ ಬೇಕಾಗಿದ್ದು, ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಪೂರಕವಾದ ವೇದಿಕೆಯನ್ನು ಕಲ್ಪಿಸಿ ಕೊಡುವಂತಿವೆ ಎಂದು ತಿಳಿಸಿದರು.
ಬಿಜಿಎಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಚಿಣ್ಣರ ಜಾಣರ ಜಗುಲಿ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಮಕ್ಕಳಲ್ಲಿ ಸಾಂಸ್ಕೃತಿಕ ಪ್ರಜ್ಞೆಯನ್ನು ಮೂಡಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದರು.ತಾಪಂ ಮಾಜಿ ಅಧ್ಯಕ್ಷ ಜಾನಕಿರಾಮ್, ಮಂಡ್ಯ ಹಾಲು ಒಕ್ಕೂಟದ ನಿರ್ದೇಶಕ ಡಾಲು ರವಿ, ಪುರಸಭೆ ಅಧ್ಯಕ್ಷ ಪಂಕಜ ಪ್ರಕಾಶ್, ತಾಲೂಕು ಕಸಾಪ ಅಧ್ಯಕ್ಷರಾದ ಎಂ.ಕೆ.ಹರಿಚರಣ ತಿಲಕ್, ಕೆ.ಆರ್.ನೀಲಕಂಠ, ತಾಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷ ಕೆ.ಮಂಜುಳಾ ಚನ್ನಕೇಶವ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಬಿಜಿಎಸ್ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಶೃತಿ, ವ್ಯವಸ್ಥಾಪಕ ರಾಮಚಂದ್ರ, ಬಿಜಿಎಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಸಾದೇಗೌಡ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವಿದ್ಯಾರ್ಥಿಗಳಾದ ವಂಶಿ, ಕುಸುಮ, ಕೀರ್ತಿ, ಚಂದನ ಹಾಗೂ ಸವಿತಾ ಅವಿವಾಹಿತರೇ ಸುಖಿ ವಿಷಯದ ಪರವಾಗಿ ಹಾಗೂ ವಿವಾಹಿತರು ಸುಖಿ ವಿಷಯದ ಪರವಾಗಿ ಹೆಚ್.ಡಿ.ಸಂಧ್ಯಾ, ಪುನೀತ್, ಲೇಖನ ಮತ್ತು ದೀಕ್ಷಿತ ಭಾಗವಹಿಸಿ ತಮ್ಮ ಚರ್ಚೆಯನ್ನು ಮಂಡಿಸಿದರು. ವಿದ್ಯಾರ್ಥಿನಿಯರು ನೀಡಿದ ಸಂಸ್ಕೃತಿಕ ಕಾರ್ಯಕ್ರಮಗಳು ಮಕ್ಕಳ ಪೋಷಕರು ಹಾಗೂ ಸಾರ್ವಜನಿಕರನ್ನು ರಂಜಿಸಿದವು.