ಚಿಂತನಹಳ್ಳಿ ಶಿವಯೋಗ ಸಾಧನೆಯ ಪವಿತ್ರ ತಾಣ : ಶಿವಾಚಾರ್ಯ

| Published : Feb 15 2025, 12:31 AM IST

ಚಿಂತನಹಳ್ಳಿ ಶಿವಯೋಗ ಸಾಧನೆಯ ಪವಿತ್ರ ತಾಣ : ಶಿವಾಚಾರ್ಯ
Share this Article
  • FB
  • TW
  • Linkdin
  • Email

ಸಾರಾಂಶ

Chintanahalli is a sacred place for Shiva Yoga practice: Shivacharya

-ಚಿಂತನಹಳ್ಳಿಯ ಗವಿಸಿದ್ಧಲಿಂಗೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಧಾರ್ಮಿಕ ಸಭೆ

----

ಕನ್ನಡಪ್ರಭ ವಾರ್ತೆ ಯಾದಗಿರಿ

ಚಿಂತನಹಳ್ಳಿಯ ಗವಿಸಿದ್ಧಲಿಂಗೇಶ್ವರ ಕ್ಷೇತ್ರವು ಶಿವಯೋಗ ಸಾಧನೆಯ ಪವಿತ್ರ ತಾಣವಾಗಿದೆ ಎಂದು ವಾರಣಾಸಿ ಎಲ್ಹೇರಿ ಹಿರೇಮಠದ ಕೊಟ್ಟೂರೇಶ್ವರ ಶಿವಾಚಾರ್ಯರು ನುಡಿದರು.

ಜಿಲ್ಲೆಯ ಪವಿತ್ರ ಯಾತ್ರಾ ಕ್ಷೇತ್ರ ಚಿಂತನಹಳ್ಳಿಯ ಗವಿಸಿದ್ಧಲಿಂಗೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಬುಧವಾರ ರಾತ್ರಿ ಏರ್ಪಡಿಸಿದ್ದ ಧಾರ್ಮಿಕ ಸಭೆಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಅವರು ಮಾತನಾಡಿದರು. ದಟ್ಟಡವಿಯ ನಿಸರ್ಗ ರಮಣೀಯವಾದ ಸುಂದರ ತಾಣದಲ್ಲಿ ಗವಿಸಿದ್ದ ಲಿಂಗೇಶ್ವರರು ನೆಲೆಸಿರುವುದು ಇಲ್ಲಿನ ಪುಣ್ಯ ವಿಶೇಷವೇ ಸರಿ. ಇಂತಹ ಕ್ಷೇತ್ರ ದರ್ಶನದಿಂದ ಜನರ ಕಾಳಿಕೆ ದೂರವಾಗಿ ಸಾತ್ವಿಕ ಭಾವ ಮೂಡಲು ಸಾಧ್ಯವಾಗುತ್ತದೆ ಎಂದರು.

ಪ್ರಾಂಶುಪಾಲ ಡಾ. ಸುಭಾಶ್ಚಂದ್ರ ಕೌಲಗಿ ಮಾತಾನಾಡಿ, ಪ್ರತಿಯೊಬ್ಬ ಮನುಷ್ಯ ಸಂಸ್ಕಾರವಂತರಾಗುವುದು ಬಹಳ ಮುಖ್ಯವಾಗಿದೆ. ಎಲ್ಲರೂ ಸಂಸಾರಸ್ಥರಾಗಬಹುದು. ಆದರೆ, ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಮತ್ತು ಸಹಬಾಳ್ವೆ ಮೂಡಬೇಕಾದರೆ ಸಂಸ್ಕಾರ ಬಹಳ ಅವಶ್ಯ. ಅದಕ್ಕಾಗಿ ಪ್ರತಿಯೊಬ್ಬರು ಮಾನವೀಯ ಮೌಲ್ಯಗಳು ಅಳವಡಿಸಿಕೊಳ್ಳುವುದರ ಮೂಲಕ ಸಂಸ್ಕಾರವಂತರಾಗುವಂತೆ ತಿಳಿಸಿದರು.

ಸತ್ಯದ ಮಾರ್ಗದಲ್ಲಿ ನಡೆಯಬೇಕು. ಸತ್ಯ, ಅಹಿಂಸೆ ಮನುಷ್ಯನನ್ನು ಸಂಸ್ಕಾರವಂತನಾಗಲು ಅನುಕೂಲ ಮಾಡಿಕೊಡುತ್ತದೆ. ಅದಕ್ಕಾಗಿ ಪ್ರತಿಯೊಬ್ಬ ಮನುಷ್ಯ ಜೀವಿ ಆಚಾರ-ವಿಚಾರಗಳ ಮೂಲಕ ಮಾನವಂತರಾಗಬೇಕೆಂದರು.

ಮಲ್ಲನಗೌಡ ಚಿಂತನಳ್ಳಿ ಮಾತನಾಡಿ, ಜಾತ್ರೆಗಳಲ್ಲಿ ಭಾಗವಹಿಸುವುದರ ಜೊತೆಗೆ ಅಲ್ಲಿ ನಡೆಯುವ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ಪರಮ ಪೂಜ್ಯರ ಅನುಭಾವವನ್ನು ಆಲಿಸುವುದರಿಂದ ಪವಿತ್ರಾತ್ಮರಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಈ ಸಂದಭದಲ್ಲಿ ತೇರಿಗೆ ಹೂವಿನ ಅಲಂಕಾರ ಮಾಡಿಸಿದ ಹಿಮ್ಲಾಪೂರ ತಾಂಡಾದ ನಾನ್ಯಾ ನಾಯಕ ಸೇರಿದಂತೆ ದಾಸೋಹ ಮನೆಯಲ್ಲಿ ಸೇವೆ ಸಲ್ಲಿಸಿದವರನ್ನು ವಿಶೇಷವಾಗಿ ಸತ್ಕರಿಸಲಾಯಿತು.

ಗುರುಮಠಕಲ್ ಸಿಪಿಐ ದೇವಿಂದ್ರಪ್ಪ ಧೂಳಖೇಡ, ಪಿಎಸ್ಐ ದಿನೇಶ, ಬಸವರಾಜ್ ಆವಂತಿ, ರಾಮರೆಡ್ಡಿ ಚಿಂತನಳ್ಳಿ, ಗಂಗಪ್ಪ ಅಲೆಮನೆ, ಲಚ್ಚಣ್ಣ ಬಡಿಗೇರ್, ಗುಂಡು ಕೇರಳ್ಳಿ, ಶ್ರೀನಿವಾಸ್, ಸಾಬಣ್ಣ, ಜೆಲ್ಲಪ್ಪ ಅಲ್ಲೂರು, ಬಸವರಾಜ ಹರಸೂರ, ಜಗನಾಥ ನಾಯಕೋಡಿ, ದ್ಯಾವಪ್ಪ ಗುಂಗುರಿ, ಸಾಬಣ್ನ ದಿಡ್ಡಿಕಾಡಿ, ಶಿವಪುರದ ಲಾಲಪ್ಪ, ರುದ್ರಪ್ಪ, ನಾಗೇಶ್ ಸೇರಿದಂತೆ ಇತರರಿದ್ದರು.

---ಬಾಕ್ಸ್----ವೈಭವದ ರಥೋತ್ಸವ

ಬೆಳಿಗ್ಗೆ ಗವಿ ಸಿದ್ಧಲಿಂಗೇಶ್ವರ ಮೂರ್ತಿಗೆ ವಿಶೇಷ ರುದ್ರಾಭಿಷೇಕ ನೆರವೇರಿಸಲಾಯಿತು. ನಂತರ ಪುರವಂತರ ಸೇವೆಯೊಂದಿಗೆ ಮಂಗಳವಾದ್ಯಗಳು ಸುಮಂಗಲಿಯರ ಕಳಸ ಕನ್ನಡಿಯೊಂದಿಗೆ ಚಿಂತನಳ್ಳಿ ಗ್ರಾಮದಿಂದ ಗವಿಯವರೆಗೆ ಪಲ್ಲಕ್ಕಿ ಉತ್ಸವ ನಡೆಯಿತು. ಸಂಜೆ ಗವಿಸಿದ್ಧಲಿಂಗೇಶ್ವರ ರಥೋತ್ಸವ ವೈಭವದಿಂದ ಜರುಗಿತು. ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಹೋರಾತ್ರಿ ವಿವಿಧ ಭಜನಾ ತಂಡಗಳಿಂದ ಭಜನೆ ಮತ್ತು ಕೈ ಕುಸ್ತಿ ಪಂದ್ಯಗಳು ಜರುಗಿದವು.

---

14ವೈಡಿಆರ್13: ಯಾದಗಿರಿ ಜಿಲ್ಲೆಯ ಚಿಂತನಹಳ್ಳಿಯ ಗವಿಸಿದ್ಧಲಿಂಗೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಧಾರ್ಮಿಕ ಸಭೆ ಜರುಗಿತು.