ಸಾರಾಂಶ
ಕನ್ನಡಪ್ರಭ ವಾರ್ತೆ ಆನಂದಪುರ
ಭಾರತ ದೇಶದ ಕಟ್ಟಕಡೆಯ ಹಳ್ಳಿಗಳಿಗೂ ಮೂಲ ಸೌಕರ‍್ಯ ಕಲ್ಪಿಸಬೇಕು ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪ್ರತಿ ದಿನ ಬೊಬ್ಬಿಡುತ್ತಿವೆ. ಆದರೆ, ಅನೇಕ ಗ್ರಾಮಗಳು ಇನ್ನೂ ಮೂಲ ಸೌಕರ್ಯ ಸಿಗದೆ ಸೊರಗುತ್ತಿವೆ.ಆನಂದಪುರ ಸಮೀಪದ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಪ್ಪಳಿ ಗ್ರಾಮಕ್ಕೆ ಮೂಲ ಸೌಕರ್ಯಗಳಾದ ರಸ್ತೆ, ಕುಡಿಯುವ ನೀರು, ಚರಂಡಿ ವ್ಯವಸ್ಥೆ, ಬೀದಿ ದೀಪಗಳ ಸೌಲಭ್ಯ ಯಾವುದು ಇಲ್ಲ.
ನಮ್ಮೂರಿಗೆ ಸೌಲಭ್ಯ ಕೊಡಿ ಎಂದು ಸ್ಥಳೀಯ ಗ್ರಾಮಾಡಳಿತಕ್ಕೆ ಗ್ರಾಮಸ್ಥರು ಮನವಿ ಮಾಡುತ್ತಿದ್ದರೂ ಗ್ರಾಪಂ ಅಧ್ಯಕ್ಷರು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಹೀಗಾಗಿ ಚಿಪ್ಪಳಿ ಗ್ರಾಮದಲ್ಲಿ ಅಭಿವೃದ್ಧಿಯೆಂಬುದು ಮರೀಚಿಕೆಯಾಗಿದೆ.ಕುಡಿಯಲು ನೀರು, ಓಡಾಡಲು ರಸ್ತೆ, ರಾತ್ರಿ ವೇಳೆ ಬೀದಿ ದೀಪದ ವ್ಯವಸ್ಥೆ ಇಲ್ಲದೆ ಕತ್ತಲಲ್ಲೇ ಓಡಾಡುತ್ತಿರುವ ಗ್ರಾಮಸ್ಥರು ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಚುನಾವಣೆ ಸಮಯದಲ್ಲಿ ಮತಯಾಚನೆಗೆ ಬರುವಂತಹ ಜನಪ್ರತಿನಿಧಿಗಳು ನಂತರದ ದಿನಗಳಲ್ಲಿ ಗ್ರಾಮದ ಸಮಸ್ಯೆ ಬಗ್ಗೆ ಕಿಂಚಿತ್ತೂ ಯೋಚಿಸದೇ, ಗ್ರಾಮಾಡಳಿತದ ಇಚ್ಛಾಶಕ್ತಿಯ ಕೊರತೆಯಿಂದ ಗ್ರಾಮಗಳ ಅಭಿವೃದ್ಧಿ ಕಾರ್ಯಕ್ಕೆ ಹಿನ್ನಡೆಯಾಗುತ್ತಿದೆ.ಒಂದರಿಂದ ನಾಲ್ಕನೇ ತರಗತಿಯವರೆಗೆ ಇದ್ದಂತಹ ಪ್ರಾಥಮಿಕ ಶಾಲೆ ಮುಚ್ಚು ಹೋಗಿದೆ. ಗ್ರಾಮದ ಮಕ್ಕಳು ಶಾಲೆಗೆ ಹೋಗಬೇಕಾದರೆ ನಂದಿ ಹೊಳೆ ಕಾಲು ಸಂಕದ ಮೂಲಕ ರೈಲ್ವೆ ಹಳಿಯನ್ನು ದಾಟಿ ಸಮೀಪದ ಶಾಲೆಗೆ ಹೋಗಬೇಕಾದ ಸ್ಥಿತಿ ಇದೆ. ಈ ವೇಳೆ ಮಕ್ಕಳಿಗೆ ಹೆಚ್ಚುಕಡಿಮೆಯಾದರೆ ಯಾರು ಹೊಣೆ ಎಂಬ ಪ್ರಶ್ನೆ ಒಂದು ಕಡೆಯಾದರೆ, ಊರಿನಲ್ಲಿ ಯಾರಿಗಾದರೂ ಆರೋಗ್ಯದ ಸಮಸ್ಯೆ ಉಂಟಾಗಿ 108ಕ್ಕೆ ಕರೆ ಮಾಡಿದರೆ ರಸ್ತೆಯೇ ಇಲ್ಲ ನಿಮ್ಮೂರಿಗೆ ಬರಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ತುರ್ತು ಸಮಯದಲ್ಲಿ ರೋಗಿಗಳನ್ನು ಸಾರ್ವಜನಿಕರು ಹೆಗಲ ಮೇಲೆ ಹೊತ್ತು ಆಸ್ಪತ್ರೆಗೆ ತರಬೇಕಾಗಿದೆ. ಗ್ರಾಮಸ್ಥರು ಇಷ್ಟೆಲ್ಲ ಸಂಕಷ್ಟಗಳನ್ನು ಎದುರಿಸುತ್ತಿದ್ದರೂ ಸ್ಥಳೀಯ ಗ್ರಾಮಾಡಳಿತಕ್ಕೆ ಸಾರ್ವಜನಿಕರ ಗೋಳು ಕಾಣದೆ ಇರುವುದು ವಿಪರ್ಯಾಸ.
30ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿರುವ ಈ ಗ್ರಾಮಕ್ಕೆ ಸವಲತ್ತು ಕೊಡಿ ಎಂದು ಗ್ರಾಮ ಪಂಚಾಯಿತಿಗೆ ಅನೇಕ ಬಾರಿ ಮನವಿ ಮಾಡಿದರೂ ಇಲ್ಲಿನ ಅಧಿಕಾರಿಗಳು ಇದ್ಯಾವುದಕ್ಕೂ ಕಿವಿ ಕೊಡುತ್ತಿಲ್ಲ ಎಂಬುದು ಇಲ್ಲಿನ ಗ್ರಾಮಸ್ಥರ ಆರೋಪ.ಸರ್ಕಾರಿ ಅಧಿಕಾರಿಗಳು ಚುನಾಯಿತ ಪ್ರತಿನಿಧಿಗಳು, ಗ್ರಾಮದ ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಕಲ್ಪಿಸಿದಲ್ಲಿ ನಮ್ಮ ಮಕ್ಕಳು ಮುಂದಿನ ದಿನಗಳಲ್ಲಿ ಉತ್ತಮ ವಿದ್ಯಾವಂತರಾಗಲು ಸಾಧ್ಯವಾಗುತ್ತದೆ,
ಶಿವಕುಮಾರ್, ಗ್ರಾಮಸ್ಥ.