ಚಿರಾಗ್ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಪ್ರಮುಖ ಅಂಗವಾದ ಮಷಿನ್ ಲರ್ನಿಂಗ್ಅನ್ನು ಸ್ವಯಂ ಅಧ್ಯಯನದ ಮೂಲಕ ಕರಗತ ಮಾಡಿಕೊಂಡಿದ್ದಾರೆ.
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮುಂಡಿಗೇಸರ ಮೂಲದ, ಹುಬ್ಬಳ್ಳಿಯಲ್ಲಿ ನೆಲೆಸಿರುವ ಉದ್ಯಮಿಗಳಾದ ಬೀನಾ ಹಾಗೂ ರಮೇಶ ಹೆಗಡೆ ಹೂತನ ದಂಪತಿಯ ಪುತ್ರ ಚಿರಾಗ ರಮೇಶ ಹೆಗಡೆ ಅಮೆರಿಕದಲ್ಲಿ ಈಚೆಗೆ ನಡೆದ ವಿಶ್ವಮಟ್ಟದ DARPA TRIAGE ಸ್ಪರ್ಧೆಯಲ್ಲಿ ಗ್ರ್ಯಾಂಡ್ ಪ್ರೈಜ್(ಪ್ರಥಮ ಸ್ಥಾನ) ಗಳಿಸಿ 1 ಮಿಲಿಯನ್ ಡಾಲರ್(ಸುಮಾರು ₹9.4 ಕೋಟಿ) ಬಹುಮಾನಕ್ಕೆ ಭಾಜನರಾಗಿದ್ದಾರೆ.
ಚಿರಾಗ ಅವರು 2023ರಲ್ಲಿ ಅಸ್ಸಾಂನ ಗುವಾಹಟಿಯ ಭಾರತೀಯ ತಂತ್ರಜ್ಞಾನ ಸಂಸ್ಥೆಯಿಂದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ನಲ್ಲಿ ಬಿಟೆಕ್ ಪದವಿ ಪಡೆದಿದ್ದಾರೆ. ಪ್ರಸ್ತುತ ಸಾಫ್ಟ್ವೇರ್ ಎಂಜಿನಿಯರ್ ಆಗಿರುವ ಅವರು, ಕಠಿಣ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ಆಸಕ್ತಿ ಹಾಗೂ ನಿರಂತರ ಕಲಿಕೆಯ ಹಂಬಲದಿಂದ ಜಾಗತಿಕ ಮಟ್ಟದ ಈ ಸಾಧನೆ ಮಾಡಿದ್ದಾರೆ.ಚಿರಾಗ್ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಪ್ರಮುಖ ಅಂಗವಾದ ಮಷಿನ್ ಲರ್ನಿಂಗ್ಅನ್ನು ಸ್ವಯಂ ಅಧ್ಯಯನದ ಮೂಲಕ ಕರಗತ ಮಾಡಿಕೊಂಡಿದ್ದಾರೆ.
DARPA ಎಂದರೆ ಡಿಫೆನ್ಸ್ ಅಡ್ವಾನ್ಸ್ಡ್ ರಿಸರ್ಚ್ ಪ್ರಾಜೆಕ್ಟ್ಸ್ ಏಜೆನ್ಸಿ. ಇದು ಅಮೆರಿಕದ ರಕ್ಷಣಾ ಇಲಾಖೆಯ ಸಂಶೋಧನಾ ಸಂಸ್ಥೆಯಾಗಿದ್ದು, ಮಹತ್ವದ ತಾಂತ್ರಿಕ ಆವಿಷ್ಕಾರಗಳಿಗೆ ಉತ್ತೇಜನ ನೀಡುತ್ತದೆ. ಇಂಟರ್ನೆಟ್ನ ಆರಂಭಿಕ ತಂತ್ರಜ್ಞಾನವಾದ ARPANET ಹಾಗೂ ಚಾಲಕ ರಹಿತ ವಾಹನಗಳಂತಹ ಸಂಶೋಧನೆಗಳಿಗೆ ಈ ಸಂಸ್ಥೆ ಬೆಂಬಲ ನೀಡಿದೆ.ಚಿರಾಗ ಭಾಗವಹಿಸಿದ ಟ್ರಯೇಜ್ ಸ್ಪರ್ಧೆಯ ಉದ್ದೇಶ ನೈಸರ್ಗಿಕ ವಿಕೋಪಗಳು, ಸಾಮೂಹಿಕ ಅಪಘಾತಗಳು ಹಾಗೂ ಯುದ್ಧದಂತಹ ತುರ್ತು ಪರಿಸ್ಥಿತಿಗಳಲ್ಲಿ ಗಾಯಗೊಂಡವರಿಗೆ ತ್ವರಿತವಾಗಿ ಸೂಕ್ತ ಚಿಕಿತ್ಸೆ ಒದಗಿಸಲು ನೆರವಾಗುವ ತಂತ್ರಜ್ಞಾನ ಅಭಿವೃದ್ಧಿಪಡಿಸುವುದಾಗಿದೆ.
ಈ ಸವಾಲಿಗೆ ಪರಿಹಾರವಾಗಿ ಚಿರಾಗ ಕೃತಕ ಬುದ್ಧಿಮತ್ತೆ ಆಧರಿತ ವಿಶೇಷ ಸಾಫ್ಟ್ವೇರ್ ಮಾದರಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಮಾದರಿಯ ನೆರವಿನಿಂದ ಗಾಯಾಳುವಿನ ದೇಹದಲ್ಲಿನ ಸಮಸ್ಯೆ, ಆತನಿಗೆ ಅಗತ್ಯವಿರುವ ಚಿಕಿತ್ಸೆಯ ಸ್ವರೂಪ ಹಾಗೂ ತುರ್ತು ಚಿಕಿತ್ಸೆಗೆ ಆದ್ಯತೆ ನೀಡಬೇಕಾದ ರೋಗಿಗಳನ್ನು ತ್ವರಿತವಾಗಿ ಗುರುತಿಸಲು ವೈದ್ಯರಿಗೆ ಸಾಧ್ಯವಾಗಲಿದೆ. ಇದರಿಂದ ಸೀಮಿತ ವೈದ್ಯಕೀಯ ಸೌಲಭ್ಯಗಳಿರುವ ತುರ್ತು ಸಂದರ್ಭಗಳಲ್ಲಿ ಚಿಕಿತ್ಸೆ ನೀಡುವ ಪ್ರಕ್ರಿಯೆಗೆ ಹೆಚ್ಚಿನ ವೇಗ ಮತ್ತು ನಿಖರತೆ ದೊರೆಯಲಿದೆ.ವಿಶ್ವಮಟ್ಟದಲ್ಲಿ ಮೂರು ವರ್ಷಗಳ ಹಿಂದೆ ಆರಂಭಗೊಂಡಿದ್ದ ಈ ಸ್ಪರ್ಧೆಗೆ ಚಿರಾಗ ಪ್ರವೇಶಿಸಿದ್ದು ಕೇವಲ ಹತ್ತು ತಿಂಗಳ ಹಿಂದೆ. ವಿಶೇಷವೆಂದರೆ, ಅವರು ತಮ್ಮ ತಂಡಕ್ಕೆ ''''''''ಡಿಸ್ರಪ್ಟರ್ಸ್''''''''(Disruptors) ಎಂದು ಹೆಸರಿಟ್ಟುಕೊಂಡಿದ್ದು, ತಂಡದ ಏಕೈಕ ಸದಸ್ಯರಾಗಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ದತ್ತಾಂಶ ವಿಜ್ಞಾನ(Data Science) ಮತ್ತು ಪ್ರಾಯೋಗಿಕ ಎಂಜಿನಿಯರಿಂಗ್ ತಂತ್ರಗಳನ್ನು ಸಮನ್ವಯಗೊಳಿಸಿ, ನೂರಾರು ಗಾಯಾಳುಗಳು ಹಾಗೂ ರೋಗಿಗಳ ನೈಜ ವೈದ್ಯಕೀಯ ದತ್ತಾಂಶಗಳನ್ನು ಆಧರಿಸಿ ಮಾದರಿಯನ್ನು ರೂಪಿಸಿದ್ದಾರೆ. ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನವನ್ನು ಬಳಸಿಕೊಂಡು ಹತ್ತು ತಿಂಗಳ ಕಾಲ ಸತತ ಪ್ರಯೋಗ, ಅಧ್ಯಯನ ಹಾಗೂ ಪರಿಶ್ರಮದ ಮೂಲಕ ಅಭಿವೃದ್ಧಿಪಡಿಸಿದ ಈ ಮಾದರಿ ವಿಶ್ವಾಸಾರ್ಹ ಫಲಿತಾಂಶ ನೀಡುವಲ್ಲಿ ಯಶಸ್ವಿಯಾಗಿದೆ. ಇದರ ಪರಿಣಾಮವಾಗಿ ವಿಶ್ವಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಗಮನ ಸೆಳೆದಿದ್ದಾರೆ.ಚಿರಾಗ ಅವರ ಈ ಸಾಧನೆ ಕೇವಲ ತಾಂತ್ರಿಕ ಪ್ರತಿಭೆಯ ಪ್ರದರ್ಶನವಷ್ಟೇ ಅಲ್ಲ, ಮಾನವೀಯ ಕಾಳಜಿಯೊಂದಿಗೆ ವಿಜ್ಞಾನವನ್ನು ಜನರ ಒಳಿತಿಗಾಗಿ ಬಳಸುವ ಅವರ ಆಶಯಕ್ಕೂ ಸಾಕ್ಷಿಯಾಗಿದೆ. ಭವಿಷ್ಯದಲ್ಲಿಯೂ ತಮ್ಮ ಕಲಿಕೆ ಮತ್ತು ಸಂಶೋಧನೆಯನ್ನು ಮುಂದುವರಿಸಿ, ಜನರ ಜೀವನವನ್ನು ಸುಧಾರಿಸುವ ಹಾಗೂ ಸಮಾಜಕ್ಕೆ ಉಪಯುಕ್ತವಾಗುವ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಮಹದಾಸೆಯನ್ನು ಅವರು ಹೊಂದಿದ್ದಾರೆ. ಮುಂಡಿಗೇಸರ ಮೂಲದ ಯುವ ಪ್ರತಿಭೆಯ ಈ ಜಾಗತಿಕ ಸಾಧನೆ ಉತ್ತರ ಕನ್ನಡ ಜಿಲ್ಲೆಯ ಹೆಮ್ಮೆಯನ್ನು ಹೆಚ್ಚಿಸಿದೆ.ನನಗೆ ಅತ್ಯಂತ ಖುಷಿಯಾಗಿದೆ. ನನ್ನ ಮುಂದಿನ ಯೋಜನೆ, ಯೋಚನೆಗಳಿಗೆ ಇನ್ನಷ್ಟು ಉತ್ಸಾಹ ದೊರೆತಂತಾಗಿದೆ ಎಂದು ಚಿರಾಗ್ ಹೆಗಡೆ ತಿಳಿಸಿದರು.