ಸಾರಾಂಶ
ದಾವಣಗೆರೆ: ಏಸುಕ್ರಿಸ್ತನ ಜನ್ಮದಿನವಾದ ಕ್ರಿಸ್‌ಮಸ್ ಹಬ್ಬವನ್ನು ನಗರದ ವಿವಿಧ ಚರ್ಚ್‌ಗಳಲ್ಲಿ ಕ್ರೈಸ್ತ ಬಾಂಧವರು ಶ್ರದ್ಧಾ ಭಕ್ತಿಯಿಂದ, ಸಂಭ್ರಮ ಸಡಗರದಿಂದ ಆಚರಿಸಿದರು.
ಕ್ರಿಸ್‌ಮಸ್ ಹಬ್ಬದ ಮುನ್ನಾದಿನವಾದ ಭಾನುವಾರ ರಾತ್ರಿ ಚರ್ಚ್‌ಗಳಲ್ಲಿ ಏಸು ಸ್ವಾಮಿಯ ಜನ್ಮದಿನದ ಕಾರ್ಯಕ್ರಮಗಳನ್ನು ಮಾಡಿದರು. ಈ ಸಂದರ್ಭದಲ್ಲಿ ವಿಶೇಷ ಪ್ರಾರ್ಥನೆ, ಕ್ರಿಸ್‌ಮಸ್ ಗೀತೆಗಳ ಗಾಯನ, ಮಕ್ಕಳಿಂದ ಮನರಂಜನೆ ಕಾರ್ಯಕ್ರಮಗಳು ನಡೆದವು.ಇಲ್ಲಿನ ಪಿ.ಜೆ.ಬಡಾವಣೆಯಲ್ಲಿರುವ ಸಂತ ತೋಮಸರ ಚರ್ಚ್‌ನಲ್ಲಿ ಫಾದರ್ ಆಂಥೋನಿ ನಜರತ್ ನೇತೃತ್ವದಲ್ಲಿ ಭಾನುವಾರ ರಾತ್ರಿ ಗೋದಲಿಯಲ್ಲಿ ಏಸು ಸ್ವಾಮಿ ಜನ್ಮವಾಗಿರುವ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು. ಏಸು ಸ್ವಾಮಿಯ ಆಸೆಯಂತೆ ವಿಶ್ವ ಶಾಂತಿಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಗೋದಲಿಯಲ್ಲಿ ಮಗುವನ್ನು ಇರಿಸಿ ನಾಮಕರಣ ಮಾಡಲಾಯಿತು. ಚರ್ಚ್‌ಗಳಿಗೆ ಸಹಸ್ರಾರು ಭಕ್ತರು ಆಗಮಿಸಿ ಏಸು ಸ್ವಾಮಿಯ ಮುಂದೆ ಕ್ಯಾಂಡಲ್ ಬೆಳಗಿ ಪ್ರಾರ್ಥನೆ ಸಲ್ಲಿಸಿದರು.
ಬಂದಂತಹವರಿಗೆ ಸಿಹಿ ವಿತರಿಸಲಾಯಿತು. ಚರ್ಚ್ ಆವರಣದಲ್ಲಿ ಏಸುವಿನ ಜೀವನ ಬಿಂಬಿಸುವ ಗೋದಲಿ ಪ್ರದರ್ಶನ ಸೇರಿದಂತೆ ವಿವಿಧ ಕಲಾ ಕೃತಿಗಳುಆಕರ್ಷಿಸಿತ್ತು. ಚರ್ಚ್ ಮೇಲಿನ ದೊಡ್ಡದಾದ ನಕ್ಷತ್ರ ಎಲ್ಲರ ಕಣ್ಮನ ಸೆಳೆಯುತ್ತಿತ್ತು. ಚರ್ಚ್ ಒಳಗೆ, ಆವರಣದಲ್ಲಿ ಅಲಂಕಾರಿಕ ಗಂಟೆಗಳು, ಬಲೂನುಗಳು ಹಬ್ಬದ ಮೆರುಗನ್ನು ಹೆಚ್ಚಿಸಿದ್ದವು. ವಿದ್ಯುತ್ ದೀಪಗಳು ಜಗಮಗಿಸುತ್ತಿದ್ದವು.
ಸಾಂತಾಕ್ಲಾಸ್ ಟೋಪಿಯನ್ನು ಹುಡುಗರು, ಹುಡುಗಿಯರು ಧರಿಸಿ ಸಂಭ್ರಮಿಸಿದರು. ನಕ್ಷತ್ರ, ಟ್ರೀ ಮುಂಭಾಗ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿರುವ ದೃಶ್ಯ ಕಾಣುತ್ತಿತ್ತು.ಇಲ್ಲಿನ ಎಂಸಿಸಿ ಎ ಬ್ಲಾಕ್‌ನಲ್ಲಿರುವ ಫುಲ್ ಗಾಸ್ಪಲ್ ಅಸೆಂಬ್ಲಿ ಪ್ರಾರ್ಥನಾ ಮಂದಿರದಲ್ಲಿ ಏಸು ಸ್ವಾಮಿಯ ಪ್ರಾರ್ಥನೆ, ಕ್ರಿಸ್ತರ ಜನನದ ಹಾಡುಗಳು, ಮಕ್ಕಳಿಂದ ನೃತ್ಯ ರೂಪಕಗಳು, ಪ್ರಾರ್ಥನೆ, ಆರಾಧನಾ ಕಾರ್ಯಕ್ರಮಗಳು, ಹಾಗೂ ಸಭಾಪಾಲಕರಾದ ಪಿ.ಪ್ರೇಮ್‌ಕುಮಾರ್, ಸಂಜೀವ್ ನೇತೃತ್ವದಲ್ಲಿ ಪ್ರವಚನ ಕಾರ್ಯಕ್ರಮಗಳು ನಡೆದವು. ಬಂದಂತವರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಚರ್ಚ್ ಸಮೀಪದ ಸ್ಟೋರ್, ಅಂಗಡಿಗಳಲ್ಲಿ ಕ್ರಿಸ್‌ಮಸ್ ಹಬ್ಬಕ್ಕಾಗಿ ಅಲಂಕಾರಿಕ ವಸ್ತುಗಳು, ಉಡುಗೊರೆಗಳ ವ್ಯಾಪಾರ ಜೋರಾಗಿ ನಡೆಯುತ್ತಿತ್ತು.ಈ ಸಂದರ್ಭದಲ್ಲಿ ಸಭಾ ಹಿರಿಯರಾದ ಎಸ್.ಎಸ್.ಪ್ರಕಾಶ್, ಪ್ರಾರ್ಥನಾ ಮಂದಿರದ ಹಿರಿಯರು, ಸುತ್ತಮುತ್ತಲ ಗ್ರಾಮದ ಸಮಾಜಬಾಂಧವರು, ಇತರರು, ಮಕ್ಕಳು ಭಾಗವಹಿಸಿ ಸ್ವಾಮಿಯ ಪ್ರಾರ್ಥನೆ ಮಾಡಿದರು.
ಇಲ್ಲಿನ ರಿಂಗ್ ರಸ್ತೆ ಸಮೀಪದ ಚರ್ಚ್, ಕುವೆಂಪು ನಗರದ ಎಂಜಿಒಸಿಎಸ್ ಎಂ ಚರ್ಚ್, ಜಾಲಿ ನಗರದ ಜೆಎಂಬಿ ಚರ್ಚ್, ಜಯನಗರದ ವಸನ್ನ ಚರ್ಚ್ ಸೇರಿದಂತೆ ವಿವಿಧ ಚರ್ಚ್ ಗಳಲ್ಲಿ ವಿವಿಧ ಪ್ರಾರ್ಥನಾ ಕಾರ್ಯಕ್ರಮಗಳು ನಡೆದವು. ಚರ್ಚ್ ಶಾಲೆಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.