ಸಾರಾಂಶ
ಕನ್ನಡಪ್ರಭ ವಾರ್ತೆ ರಾಯಚೂರು
ಕೇಂದ್ರ ಬಿಜೆಪಿ ಸರ್ಕಾರ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ, ಸಂಸದರ ಅಮಾನತು ಕ್ರಮ ಮತ್ತು ಪ್ರಜಾಪ್ರಭುತ್ವ ಸಂವಿಧಾನ ವಿರೋಧಿ ನಡೆಯನ್ನು ಖಂಡಿಸಿ ಭಾರತ ಕಮ್ಯೂನಿಸ್ಟ್ ಪಕ್ಷ-ಮಾರ್ಕ್ಸ್‌ವಾದಿ (ಸಿಪಿಐಎಂ) ಪಕ್ಷದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.ಸ್ಥಳೀಯ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಪಕ್ಷದ ಪದಾಧಿಕಾರಿಗಳು, ಸದಸ್ಯರು, ಮುಖಂಡರು ಕೇಂದ್ರ ಸರ್ಕಾರದ ವಿರುದ್ಧ ಘೊಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇತ್ತೀಚೆಗೆ ನಡೆದ ಸಂಸತ್ತನ ಚಳಿಗಾಲದ ಅಧಿವೇಶನದಲ್ಲಿ 146 ಪ್ರತಿಪಕ್ಷಗಳ ಸಂಸದರನ್ನು ಅಮಾನತುಗೊಳಿಸಿರುವ ಕೇಂದ್ರ ಸರ್ಕಾರದ ನಡೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ವಿರೋಧಿ ನಡೆಯಾಗಿದೆ. ಈ ಕ್ರಮ ಖಂಡನೀಯ ವಿಷಯವಾಗಿದೆ ಎಂದರು.ಕಾರ್ಪೊರೇಟ್ ಬಂಡವಾಳದಾರರ ಲೂಟಿಯಾಗಿ ಸಂಸತ್ತನ್ನೂ ಬಲಿಕೊಡಲು ಮೋದಿ ಸರ್ಕಾರ ಸಿದ್ಧವಾಗಿದೆ. ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಸತ್ತು ಅತ್ಯಂತ ಪ್ರಧಾನ ಅಂಗವಾಗಿದೆ. ಹೀಗಿದ್ದೂ ಪ್ರಶ್ನೆ ಕೇಳಿದ ಕಾರಣಕ್ಕಾಗಿ ಸಂಸದರನ್ನು ಅಮಾನತುಗೊಳಿಸುವ ಈ ಕ್ರಮವು ಸರ್ವಾಧಿಕಾರತನದ ಧೋರಣೆಯಾಗಿದೆಯಾಗಿದೆ ಎಂದು ಆರೋಪಿಸಿದರು.
ಸಂಸತ್ ಭವನದಲ್ಲಿ ಕಲಾಪ ನಡೆಯುವ ವೇಳೆಯಲ್ಲೇ ದಾಳಿ ನಡೆದಿರುವುದು ಗಂಭೀರವಾದ ಭದ್ರತಾ ಲೋಪವಾಗಿದೆ. ಇದಕ್ಕೆ ಗೃಹ ಸಚಿವರಿಂದ ಉತ್ತರ ಬಯಸುವ, ಪ್ರಶ್ನಿಸುವ ಹಕ್ಕು ಸಂಸದರಿಗೆ ಇದೆ. ಆದರೆ, ನರೇಂದ್ರ ಮೋದಿ ಸರ್ಕಾರ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಗೌರವದಿಂದ ಕಾಣುತ್ತಿದೆ. ಇದನ್ನು ಎಲ್ಲ ಪ್ರಜಾಪ್ರಭುತ್ವವಾದಿಗಳು ಖಂಡಿಸಬೇಕು ಎಂದು ಕರೆ ನೀಡಿದರು.ಬಿಜೆಪಿ ಅಧಿಕಾರಕ್ಕಾಗಿ ಧರ್ಮದ ಆಧಾರದಲ್ಲಿ ಜನರ ನಡುವೆ ವಿಷ ಬೀಜ ಬಿತ್ತುವುಇದರ ಮೂಲಕ ಅಮಾಯಕರ ಸಾವುಗಳಿಗೆ ಕಾರಣವಾಗುತ್ತಿದೆ. ರಾಮನು ಸೇರಿದಂತೆ ಎಲ್ಲ ದೇವರುಗಳನ್ನು ತಮ್ಮ ಅಧಿಕಾರದಾಸೆಗಾಗಿ ಬಿಜೆಪಿ ಮತ್ತು ಸಂಘ ಪರಿವಾರದವರು ಮಲೀನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರಜಾಪ್ರಭುತ್ವ ಉಳಿವಿಗಾಗಿ ಸರ್ವಾಧಿಕಾರಿ ನಿರಂಕುಶ ಆಡಳಿತ ನಡೆಸುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರವನ್ನು ಮುಂಬರುವ ಚುನಾವಣೆಯಲ್ಲಿ ಸೋಲಿಸದೆ ಬೇರೆ ದಾರಿ ಇಲ್ಲ. ಈ ಹಿನ್ನೆಲೆಯಲ್ಲಿ ದೇಶದ ಜನ ಪ್ರಜಾಪ್ರಭುತ್ವ ಉಳಿವಿಗಾಗಿ ಮುಂದಾಗಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಸಿಪಿಐಎಂನ ಜಿಲ್ಲಾ ಕಾರ್ಯದರ್ಶಿ ಕೆ.ಜಿ ವೀರೇಶ, ಮುಖಂಡರಾದ ಡಿ.ಎಸ್.ಶರಣಬಸವ. ಕರಿಯಪ್ಪ ಅಚ್ಚೊಳ್ಳಿ, ನರಸಣ್ಣ ನಾಯಕ, ನರಸಿಂಹ ಪುಚ್ಚಲದಿನ್ನಿ, ರಮೇಶ ಯಾಪಲದಿನ್ನಿ, ವಿರೇಶ, ನಾಗೇಂದ್ರ, ಶ್ಯಾಮ್ ಸುಂದರ, ಈ.ರಂಗನಗೌಡ ಸೇರಿ ಅನೇಕರು ಇದ್ದರು.