ಸಾರಾಂಶ
ಕ್ರಿಸ್‌ಮಸ್ ಪ್ರಯುಕ್ತ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಎಲ್ಲ ಚರ್ಚ್‌ಗಳಲ್ಲಿ ವಿಶೇಷ ಬಲಿಪೂಜೆ, ಪ್ರಾರ್ಥನೆ ನೆರವೇರಿತು. ಭಾನುವಾರ ರಾತ್ರಿ ಬಲಿಪೂಜೆಗಳಲ್ಲಿ ಭಾಗವಹಿಸಲು ಸಾಧ್ಯವಾಗದೆ ಇದ್ದವರು ಸೋಮವಾರ ನಡೆದ ವಿಶೇಷ ಬಲಿಪೂಜೆಯಲ್ಲಿ ಭಾಗವಹಿಸಿದರು. ಗೋದಲಿ, ಪ್ರಾರ್ಥನೆ, ಕೇಕ್ ವಿನಿಮಯ ಹಬ್ಬದ ಸಂಭ್ರಮ ಹೆಚ್ಚಿಸಿತು.
ಕನ್ನಡಪ್ರಭ ವಾರ್ತೆ ಮಂಗಳೂರು/ಉಡುಪಿಯೇಸುಕ್ರಿಸ್ತರ ಜನ್ಮದಿನ ಸಂಭ್ರಮಾಚರಣೆಯ ಕ್ರಿಸ್‌ಮಸ್ ಹಬ್ಬವನ್ನು ಕರಾವಳಿಯ ಕ್ರೈಸ್ತ ಬಾಂಧವರು ಸಡಗರದಿಂದ ಆಚರಿಸಿದರು.
ಕ್ರಿಸ್‌ಮಸ್ ಪ್ರಯುಕ್ತ ದ.ಕ. ಜಿಲ್ಲೆಯ ಚರ್ಚ್‌ಗಳಲ್ಲಿ ವಿಶೇಷ ಬಲಿಪೂಜೆ, ಪ್ರಾರ್ಥನೆ ನೆರವೇರಿತು. ಭಾನುವಾರ ರಾತ್ರಿ ಬಲಿಪೂಜೆಗಳಲ್ಲಿ ಭಾಗವಹಿಸಲು ಸಾಧ್ಯವಾಗದೆ ಇದ್ದವರು ಸೋಮವಾರ ನಡೆದ ವಿಶೇಷ ಬಲಿಪೂಜೆಯಲ್ಲಿ ಭಾಗವಹಿಸಿದರು. ಅನೇಕ ಚರ್ಚ್‌ಗಳಲ್ಲಿ ಬೆಳಗ್ಗೆ ಒಂದಕ್ಕಿಂತ ಹೆಚ್ಚು ಪೂಜೆಗಳು ನಡೆದವು.ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ.ವಂ. ಡಾ.ಪೀಟರ್ ಪಾವ್ಲ್ ಸಲ್ದಾನಾ ಅವರು ಕ್ರಿಸ್‌ಮಸ್ ಈವ್‌ನ ಪೂಜೆಯನ್ನು ನಗರದ ರೊಸಾರಿಯೋ ಕೆಥೆಡ್ರಲ್‌ನಲ್ಲಿ ಭಾನುವಾರ ರಾತ್ರಿ ನೆರವೇರಿಸಿದರೆ, ಕ್ರಿಸ್‌ಮಸ್ ಪೂಜೆಯನ್ನು ತಣ್ಣೀರುಬಾವಿ ಫಾತಿಮಾ ಚರ್ಚ್‌ನಲ್ಲಿ ಸೋಮವಾರ ಮುಂಜಾನೆ ನೆರವೇರಿಸಿದರು.ಈ ಸಂದರ್ಭ ಮಾತನಾಡಿದ ಅವರು, ಬಡತನವನ್ನು ಸಾಂಕೇತಿಸುವ ಗೋದಲಿಯಲ್ಲಿ ಜನಿಸಿದ ಯೇಸುಕ್ರಿಸ್ತರು, ಬಡವರು ಹಾಗೂ ಸಮಾಜದಲ್ಲಿ ಕಡೆಗಣನೆಗೆ ಒಳಗಾದ ಜನರ ಬಗ್ಗೆ ತೋರಿದ ಕಾಳಜಿಯನ್ನು ಬಿಷಪ್ ಸ್ಮರಿಸಿದರು. ಏಸುಕ್ರಿಸ್ತರ ಪ್ರೀತಿ, ತ್ಯಾಗ ಮನೋಭಾವ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು. ಈ ಸಂದರ್ಭ ಚರ್ಚ್‌ನ ಧರ್ಮಗುರುಗಳಾದ ಫಾ.ಲಾರೆನ್ಸ್ ಡಿಸೋಜ, ಫಾ. ವಿಲಿಯಂ ಗೊಮ್ಸ್ ಮತ್ತಿತರರಿದ್ದರು.ದ.ಕ. ಜಿಲ್ಲಾದ್ಯಂತ ಮನೆ ಮನೆಗಳು ಮತ್ತು ಚರ್ಚ್‌ಗಳಲ್ಲಿ ಕ್ರಿಸ್ಮಸ್ ಟ್ರೀ ಮತ್ತು ನಕ್ಷತ್ರಗಳು, ಗೋದಲಿಗಳನ್ನು ರಚಿಸಿ ಅಲಂಕರಿಸಲಾಗಿತ್ತು. ಕೆಲವು ಐಷಾರಾಮಿ ಹೊಟೇಲ್‌ಗಳು ಕೂಡ ಗ್ರಾಹಕರನ್ನು ಆಕರ್ಷಿಸಲು ಹೊರಭಾಗದಲ್ಲಿ ಆಕರ್ಷಕ ಗೋದಲಿಗಳನ್ನು ಅಳವಡಿಸಿದ್ದವು. ಅಲ್ಲದೆ, ವಿಶೇಷ ಔತಣ ಕೂಟಗಳನ್ನು ಏರ್ಪಡಿಸಲಾಗಿತ್ತು.ಕ್ರಿಸ್‌ಮಸ್ ಪ್ರಯುಕ್ತ ಸೋಮವಾರ ಚರ್ಚ್‌ಗಳಲ್ಲಿ ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆದವು. ವಿವಿಧ ಸ್ಪರ್ಧೆಗಳನ್ನೂ ಆಯೋಜಿಸಲಾಗಿತ್ತು. ವಿಜೇತರಾದವರಿಗೆ ಬಹುಮಾನ ಸೇರಿದಂತೆ ಸಾಂತಾಕ್ಲಾಸ್ ನಿಂದ ಸಿಹಿತಿಂಡಿಯ ವಿತರಣೆ ನಡೆಯಿತು.ಏಸುಕ್ರಿಸ್ತರ ಜನ್ಮದಿನ ಕ್ರಿಸ್ಮಸ್ ಹಬ್ಬವನ್ನು ಸೋಮವಾರ ಉಡುಪಿ ಜಿಲ್ಲಾದ್ಯಂತ ಕ್ರೈಸ್ತ ಬಾಂಧವರು ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಭಾನುವಾರ ರಾತ್ರಿ ಮತ್ತು ಸೋಮವಾರ ಬೆಳಗ್ಗೆ ಜಿಲ್ಲೆಯ ಎಲ್ಲ ಚರ್ಚ್‌ಗಳಲ್ಲಿ ಹಬ್ಬದ ವಿಶೇಷ ಬಲಿಪೂಜೆಗಳು ಜರುಗಿದವು. ಉಡುಪಿ ಧರ್ಮಾಧ್ಯಕ್ಷ ಡಾ.ಜೆರಾಲ್ಡ್ ಐಸಾಕ್ ಲೋಬೊ ಉಡುಪಿಯಲ್ಲಿ ಬಲಿಪೂಜೆಯಲ್ಲಿ ಭಾಗವಹಿಸಿ ಹಬ್ಬದ ಸಂದೇಶ ನೀಡಿದರು.ನಂತರ ಮಧ್ಯಾಹ್ನ ಮನೆಯಲ್ಲಿ ವಿಶೇಷ ಖಾದ್ಯಗಳನ್ನು ತಯಾರಿಸಿ ನೆರೆಮನೆಯವರು, ಬಂಧುಮಿತ್ರರೊಡಗೂಡಿ ಹಬ್ಬದ ಊಟವನ್ನು ಸವಿದರು. ಪರಸ್ಪರ ಕ್ರಿಸ್ಮಸ್ ಹಬ್ಬದ ವಿಶೇಷ ತಿಂಡಿ ಕುಸ್ವಾರ್ ಅವಿನಿಮಯ ಮಾಡಿಕೊಂಡು ಶುಭಾಶಯ ಕೋರಿದರು.
ಐಸಿವೈಎಂ ಸಂಘಟನೆಯ ಸದಸ್ಯರು ಆಯಾ ಚರ್ಚ್‌ಗಳ ಮಕ್ಕಳಿಗಾಗಿ ಕ್ರಿಸ್ಮಸ್ ಗೋದಲಿ ನಿರ್ಮಾಣದ ಸ್ಪರ್ಧೆ ಆಯೋಜಿಸಿದ್ದು ಹಬ್ಬಕ್ಕೆ ವಿಶೇಷ ಸಡಗರವನ್ನು ನೀಡಿತ್ತು.