ಸಾರಾಂಶ
ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ನಗರ ವಾರ್ಷಿಕೋತ್ಸವದ ಅಂಗವಾಗಿ ಪಟ್ಟಣದಲ್ಲಿ ರಾಷ್ಟ್ರೀಯ ಸೇವಿಕಾ ಸಮಿತಿ ವತಿಯಿಂದ ಪಥಸಂಚಲನ ನಡೆಯಿತು.ನಗರದ ಸರಸ್ವತಿ ವಿದ್ಯಾಸಂಸ್ಥೆಯ ಆವರಣದಿಂದ ಆರಂಭಗೊಂಡ ಪಥಸಂಚಲನ ಪಟ್ಟಣದ ಕಂಠಿ ಪೇಟೆ, ಗಚ್ಚಿನಕಟ್ಟಿ, ಚೌಬಜಾರ, ಅರಳಿಕಟ್ಟಿ, ಗುಗ್ಗರಿ ಪೇಟೆ, ನೀಲಕಂಠೇಶ್ವರ ದೇವಸ್ಥಾನ, ಪವಾರ ಕ್ರಾಸ್, ಪುರಸಭೆ ಎದುರಿನ ರಸ್ತೆ ಮೂಲಕ ಹಾಯ್ದು ಮಾಹೇಶ್ವರಿ ವಿದ್ಯಾಸಂಸ್ಥೆಯ ಆವರಣ ತಲುಪಿತು. ಪಥಸಂಚಲನದಲ್ಲಿ ಪಟ್ಟಣದ 150ಕ್ಕೂ ಅಧಿಕ ಸ್ವಯಂ ಸೇವಿಕಿಯರು ಘೋಷ ಸಹಿತ ಸಂಚಲನದಲ್ಲಿ ಭಾಗವಹಿಸಿದ್ದರು.
ಪಥಸಂಚಲ ಸಾಗುವ ದಾರಿಗುಂಟ ಸಾರ್ವಜನಿಕರು ರಸ್ತೆಗಳಲ್ಲಿ ರಂಗೋಲಿ, ಹೂವಿನ ಅಲಂಕಾರ ಮಾಡಿ ಪಥ ಸಂಚಲನವನ್ನು ಸ್ವಾಗತಿಸಿದರು. ಸ್ವಯಂ ಸೇವಕಿಯರ ಮೇಲೆ ಹೂಮಳೆಗರೆದು ಹರ್ಷವ್ಯಕ್ತಪಡಿಸಿದರು. ಅಲ್ಲಲ್ಲಿ ಶಿವಾಜಿ, ಸುಭಾಷಚಂದ್ರ ಭೋಸ್, ವಿವೇಕಾನಂದ, ಝಾನ್ಸಿರಾಣಿ ಲಕ್ಷ್ಮೀಬಾಯಿ, ಒನಕೆ ಓಬವ್ವ, ಭಗತ್ ಸಿಂಗ್, ಶ್ರೀರಾಮ, ಕಿತ್ತೂರುರಾಣಿ ಚೆನ್ನಮ್ಮ ಸೇರಿದಂತೆ ವಿವಿಧ ರಾಷ್ಟ್ರನಾಯಕರ ವೇಷಧಾರಿ ಮಕ್ಕಳು ಪಥ ಸಂಚಲನವನ್ನು ಸ್ವಾಗತಿಸಿದರು.ದಾರಿಯುದ್ದಕ್ಕೂ ಮಹಿಳೆಯರ ಆಕರ್ಷಕ ಪಥಸಂಚಲನ ವೀಕ್ಷಿಸಲು ಅಪಾರ ಜನಸ್ತೋಮ ನೆರೆದಿತ್ತು. ದೇಶಾಭಿಮಾನಿಗಳು ಪುಷ್ಪವೃಷ್ಠಿಗೈದರು.ರಸ್ತೆಗಳೆಲ್ಲ ಬಣ್ಣ ಬಣ್ಣದ ರಂಗೋಲಿಗಳಿಂದ ಸಿಂಗಾರಗೊಂಡಿದ್ದವು.
ನಂತರ ಜರುಗಿದ ಕಾರ್ಯಕ್ರಮದಲ್ಲಿ ಮುಖ್ಯವಕ್ತಾರರಾಗಿ ಸೇವಿಕ ಸಮಿತಿ ವಿಜಯನಗರ ಪ್ರಾಂಥ ಸೇವಾ ಪ್ರಮುಖ ಸರಸ್ವತಿ ಹೆಬ್ಬಾರ ಮಾತನಾಡಿ, ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿ ಬೆಳೆಸುವ ಮೂಲಕ ಆದರ್ಶ ಭಾರತವನ್ನು ವಿಶ್ವಗುರುವನ್ನಾಗಿ ಮಾಡಬೇಕು. ಮಕ್ಕಳು ಆದರ್ಶ ಭವಿಷ್ಯ ರೂಪಿಸಿ ಅವರನ್ನು ದೇಶದ ಸತ್ ಪ್ರಜೆಗಳನ್ನಾಗಿ ಬೆಳೆಸುವ ಮಹತ್ವದ ಹೊಣೆಗಾರಿಕೆ ಹೆಣ್ಣು ಮಕ್ಕಳ ಮೇಲಿದೆ. ರಾಷ್ಟ್ರದ ಪುನರ್ ನಿರ್ಮಾಣದಲ್ಲಿ ಹಗಲಿರುಳು ಶ್ರಮಿಸಬೇಕಾಗಿದೆ. ಸಮಾಜದಲ್ಲಿನ ಅಂಧಕಾರ ತೊಲಗಿಸಿ ಸಕಲರನ್ನು ಸಂಘಟನೆ ಮಾಡಿ ರಾಷ್ಟ್ರಶಕ್ತಿ ನಿರ್ಮಾಣ ಮಾಡಬೇಕಿದೆ ಎಂದರು.ಮಕ್ಕಳ ಆದರ್ಶ ಭವಿಷ್ಯದ ನಿರ್ಮಾಣ ತಾಯಂದಿರ ಮೇಲಿದೆ. ಮಕ್ಕಳಿಗೆ ಗುಂಣಾತ್ಮಕ ಶಿಕ್ಷಣ, ಉತ್ತಮ ಸಂಸ್ಕಾರ ಕಲಿಸಬೇಕಿದೆ. ಅವರ ಮೂಲಕ ಭಾರತ ವಿಶ್ವ ಗುರುವಾಗಬೇಕಿದೆ. ಹೆಣ್ಣು ಮಕ್ಕಳಿಗೆ ಶಿಕ್ಷಣದ ಅವಶ್ಯಕತೆ ತುಂಬಾ ಇದೆ. ಸ್ರ್ರೀ ಶಕ್ತಿ ಸದ್ಭಳಕೆಯಾಗಬೇಕಿದೆ.
ಪಟ್ಟಣದ ಇಂದುಮತಿ ಪವಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಗತ್ತಿನಲ್ಲಿಯೇ ಅತ್ಯಂತ ಪುರಾತನವಾದ ಹಿಂದೂ ಧರ್ಮ ಉಳಿಸಲು ನಾವೆಲ್ಲ ಬದ್ಧರಾಗಬೇಕು ಎಂದರು.ಮಂಜುಳಾ ಚಮಚಿ ಮಾತನಾಡಿದರು. ಸುಧಾ ದೇಸಾಯಿ, ಪ್ರೇಮಾ ಕುಂಬಾರ, ರುಕ್ಮೀಣಿ ಕಂಠಿ, ಶ್ರುತಿ ಕಾರಕೂನ, ಸವಿತಾ ಭಾರತಿಮಠ, ಶಿಲ್ಪಾ ಶೀಲವಂತ, ಜ್ಯೋತಿ ಕದಾಂಪೂರ, ರುಕ್ಮೀಣಿ ಬೊಂಬಲೇಕರ್ ಮೊದಲಾದವರು ಭಾಗವಹಿಸಿದ್ದರು.