ಮಿಂಚೇರಿ ಗುಡ್ಡದಲ್ಲಿ ಗಾದ್ರಿಪಾಲನಾಯಕ ಭಕ್ತರ ಕಲರವ

| Published : Dec 26 2023, 01:30 AM IST / Updated: Dec 26 2023, 01:31 AM IST

ಮಿಂಚೇರಿ ಗುಡ್ಡದಲ್ಲಿ ಗಾದ್ರಿಪಾಲನಾಯಕ ಭಕ್ತರ ಕಲರವ
Share this Article
  • FB
  • TW
  • Linkdin
  • Email

ಸಾರಾಂಶ

ಗುಡ್ಡದಲ್ಲಿ ಕಲಾಲೋಕ ಸೃಷ್ಟಿಸಿದ ಬಚ್ಚಬೋರನಹಟ್ಟಿಯ ಜನ, ಗಾದ್ರಿಪಾಲನಾಯಕ ಸ್ವಾಮಿ ಉತ್ಸವ ಮೂರ್ತಿಯನ್ನು ಜೊತೆಗೆ ಕರೆತಂದಿರುವ ಭಕ್ತರು. ಬಚ್ಚಬೋರನಹಟ್ಟಿಯ ಜನರು ಮಿಂಚೇರಿ ಗುಡ್ಡದಲ್ಲೊಂದು ಕಲಾಲೋಕವನ್ನೇ ಸೃಷ್ಟಿಸಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಸಿರಿಗೆರೆಗಾದ್ರಿ ಪಾಲನಾಯಕ ಸ್ವಾಮಿಯ ಸಾಲು ಎತ್ತಿನ ಗಾಡಿಗಳ ಮಿಂಚೇರಿ ಯಾತ್ರಾ ಮಹೋತ್ಸವವು ಗಾದ್ರಿಪಾಲನಾಯಕ ಸನ್ನಿಧಾನವಾದ ಸಿರಿಗೆರೆ ಸಮೀಪದ ಮಿಂಚೇರಿ ಗುಡ್ಡಗಳ ತಪ್ಪಲಿನಲ್ಲಿ ಭಾನುವಾರ ರಾತ್ರಿಯಿಂದ ಬಿಡುಬಿಟ್ಟಿದ್ದು, ಅಲ್ಲೊಂದು ಸಾಂಸ್ಕೃತಿಕ ಲೋಕವನ್ನೇ ಸೃಷ್ಟಿಮಾಡಿದೆ. ಎತ್ತ ಕಣ್ಣು ಹಾಯಿಸಿದರೂ ದಟ್ಟವಾಗಿ ಎತ್ತರಕ್ಕೆ ಬೆಳೆದು ನಿಂತಿರುವ ಕಾಡುಮರಗಳ ಅಡವಿಯೊಳಗೆ ಸಂಭ್ರಮದ ಜಾತ್ರೆ ನಡೆಯುತ್ತಿದೆ. ಗಾದ್ರಿಪಾಲನಾಯಕನ ಭಕ್ತರಾಗಿರುವ ಬಚ್ಚಬೋರನಹಟ್ಟಿಯ ಜನರು ಮಿಂಚೇರಿ ಗುಡ್ಡದಲ್ಲೊಂದು ಕಲಾಲೋಕವನ್ನೇ ಸೃಷ್ಟಿಸಿಕೊಂಡಿದ್ದಾರೆ.

ಇಂದು ಸೋಮವಾರ ಪೂರ್ವಿಕರ ವಿಧಿವಿಧಾನಗಳೊಂದಿಗೆ ಹುಲಿರಾಯನ ಸಮಾಧಿ ಹಾಗೂ ನಾಯಕನ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ದೇವರ ಆಣತಿಯಂತೆ ಮಣಿವು ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಸ್ವಾಮಿಯ ಸನ್ನಿಧಿಯಲ್ಲಿ ಬಸವಂತರಿಗೆ ಹಾಗೂ ಚೌಕು ಮಣೆವು ಕಾರ್ಯಕ್ರಮ. ಸಂಜೆ ಕಣಿವೆ ಮಾರಮ್ಮ, ಮಲಿಯಮ್ಮ ಹಾಗೂ ಕೊಲ್ಲಪುರದಮ್ಮನವರ ಗಂಗಾಪೂಜೆ ಕಾರ್ಯಗಳು ಜರುಗಿದವು. ಭಕ್ತಾರು ಶ್ರದ್ಧೆಯಿಂದ ದೇವತೆಗೆ ಪೂಜೆ, ನೈವೇದ್ಯ ಸಲ್ಲಿಸಿದರು.ಗ್ರಾಮದಿಂದ ಗಾದ್ರಿಪಾಲನಾಯಕ ಸ್ವಾಮಿಯ ಉತ್ಸವ ಮೂರ್ತಿಯನ್ನು ಜೊತೆಗೆ ಕರೆತಂದಿರುವ ಭಕ್ತರು, ತಾವು ಬೀಡುಬಿಟ್ಟಿರುವ ಗುಡ್ಡಗಳ ತಪ್ಪಲಿನ ಬಯಲು ಪ್ರದೇಶವೊಂದರಲ್ಲಿ ನೀಲಗಿರಿ ತೊಪ್ಪಲುಗಳಿಂದ ತಾತ್ಕಾಲಿಕವಾಗಿ ದೇವಾಲಯ ನಿರ್ಮಿಸಿ, ಅಲ್ಲಿ ನಾಯಕರ ಪ್ರತಿಪ್ಠಾಪನೆ ಮಾಡಿದ್ದಾರೆ. ಸಿರಿಗೆರೆ, ಡಿ.ಮೆದಿಕೇರಿಪುರ, ಜಮ್ಮೇನಹಳ್ಳಿ, ಕಾಲಗೆರೆ, ತಣಿಗೆಹಳ್ಳಿ, ಚಿಕ್ಕೇನಹಳ್ಳಿ, ದೊಡ್ಡಿಗನಹಾಳ್‌, ತಣಿಗೆಹಳ್ಳಿ, ಗಂಜಿಗಟ್ಟೆ ಮುಂತಾದ ಗ್ರಾಮಗಳಿಂದ ಆಗಮಿಸಿದ ಭಕ್ತರು ದೇವರಿಗೆ ಪೂಜೆ ಸಲ್ಲಿಸಿದರು.

ಭಜನೆ, ಕೋಲಾಟ, ನೃತ್ಯಗಳ ಭರಾಟೆ: ಮಿಂಚೇರಿಯಲ್ಲಿ ಈ ಬಾರಿ ನೂರಾರು ಸಂಖ್ಯೆಯಲ್ಲಿ ಯುವಕರು, ಯುವತಿಯರೂ ಭಾಗವಹಿಸಿದ್ದಾರೆ. ಹಿರಿಯರಾದ ಭಕ್ತಾದಿಗಳು ಪೂಜೆ, ನೇಮ ನಿಷ್ಠೆಗಳಲ್ಲಿ ತಲ್ಲೀನರಾಗಿದ್ದರೆ, ಯುವಕರು ತಮ್ಮ ತಂಡ ಕಟ್ಟಿಕೊಂಡು ನೃತ್ಯ, ಭಜನೆ, ಕೋಲಾಟ ಮುಂತಾದ ಪ್ರದರ್ಶನಗಳಲ್ಲಿ ತೊಡಗಿರುತ್ತಾರೆ. ಜಾನಪದ ಕಲೆಗಳ ಪ್ರದರ್ಶನಗಳ ಲೋಕವೇ ಅಲ್ಲಿ ಸೃಷ್ಟಿಗೊಂಡಿದೆ. ವಿದ್ಯುತ್‌ ದೀಪಗಳ ಸೌಕರ್ಯವೂ ಇಲ್ಲದ ಕಾಡಿನಲ್ಲಿ ಜನರೇಟರುಗಳ ಮೂಲಕ ಬೆಳಕು ಮಾಡಿಕೊಂಡು ತಮ್ಮ ಪ್ರದರ್ಶನಗಳನ್ನು ರಾತ್ರಿಯಿಡೀ ಮುಂದುವರೆಸುತ್ತಾರೆ. ಕೋಲಾಟದಲ್ಲಿ ಉತ್ತಮ ಪ್ರದರ್ಶನ ನೀಡಿದವರಿಗೆ ಧನ ರೂಪದ ಬಹುಮಾನವನ್ನು ಘೋಷಿಸಿ ಅವರನ್ನು ಪ್ರೋತ್ಸಾಹಿಸುವ ಕೆಲಸ ಹಿರಿಯರು ಮಾಡುತ್ತಿದ್ದರು.

ಸಾವಿರಾರು ಜನರ ಸಂಕುಲ: ಬಚ್ಚಬೋರನಹಟ್ಟಿಯಲ್ಲಿಯ ೪೫೦ ಮನೆಗಳ ಸಾವಿರಾರು ಭಕ್ತರ ಸಮೂಹವೇ ಮಿಂಚೇರಿಯಲ್ಲಿ ಸೇರಿದೆ. ನೂರಾರು ಟ್ರ್ಯಾಕ್ಟರ, ಚಕ್ಕಡಿ, ಕಾರು, ಬೈಕು, ಟೆಂಪೋ ಇತ್ಯಾದಿ ವಾಹನಗಳಲ್ಲಿ ಬಂದು ಸೇರಿದ್ದಾರೆ. ಬರುವಾಗಲೇ ರೊಟ್ಟಿ, ಚಟ್ನಿಪುಡಿ, ಗಾರಿಗೆ ಮುಂತಾದ ಖಾಧ್ಯಗಳನ್ನು ಹೊತ್ತು ತಂದಿದ್ದಾರೆ. ತಾತ್ಕಾಲಿಕವಾಗಿ ಕೆಲವರು ಬಿಡಾರಗಳನ್ನು ಹಾಕಿಕೊಂಡಿದ್ದರೆ ಮತ್ತೆ ಕೆಲವರಿಗೆ ಟ್ರ್ಯಾಕ್ಟರು ಮತ್ತು ಟೆಂಪೋಗಳೇ ರಾತ್ರಿ ಕಳೆಯುವ ಮನೆಗಳಾಗಿವೆ. ಸಮೀಪದ ಗಣಿ ಕಂಪನಿಗಳು ಐದಾರು ಟ್ಯಾಂಕರುಗಳಲ್ಲಿ ಬೇಕಾದ ನೀರಿನ ಸರಬರಾಜು ಮಾಡಿ ನೆರವಾಗುತ್ತಿದ್ದಾರೆ.

ಮಂಗಳವಾರ ಬೆಳಗ್ಗೆ ಸ್ವಾಮಿಯು ಜಂಗಮ ಸ್ವರೂಪಿಯಾಗಿ ಭಿಕ್ಷೆ ಸ್ವೀಕಾರ ಕಾರ್ಯಕ್ರಮ. 11ಕ್ಕೆ ಸ್ವಾಮಿಯ ಸನ್ನಿಧಿಯಲ್ಲಿ ಪ್ರಸಾದ ದಾಸೋಹ. ಮಧ್ಯಾಹ್ನ 2ಕ್ಕೆ ಮಿಂಚೇರಿ ಸುಕ್ಷೇತ್ರದಿಂದ ನಿರ್ಗಮನ. ರಾತ್ರಿ 7ಕ್ಕೆ ಕಡ್ಲೇಗುದ್ದು ಬಳಿಯ ಸಿದ್ದರ ಗುಂಡಿಗೆ ಆಗಮನ. ನಂತರ ಸ್ವಾಮಿಗೆ ಪೂಜೆ ಸಲ್ಲಿಸಿ ಬೀಡು ಬಿಡುವುದು.

ಡಿ. 27ರಂದು ಬೆಳಗ್ಗೆ 7ಕ್ಕೆ ಸ್ವಾಮಿಗೆ ಪೂಜೆ ಸಲ್ಲಿಸಿ, 10ಕ್ಕೆ ಕ್ಯಾಸಾಪುರ ಹತ್ತಿರ ಜನಿಗಿಹಳ್ಳದ ದಂಡೆಯಲ್ಲಿ ವಿಶ್ರಾಂತಿ ಮತ್ತು ಸ್ವಾಮಿಯ ಸಂಪ್ರಾದಾಯದಂತೆ ಜನಿಗಿ ಹಳಕ್ಕೆ ಗಂಗಾಪೂಜೆ ನಡೆಯುತ್ತದೆ. ನಂತರ ಯಾತ್ರೆ ಮುಂದುವರೆಯಲಿದೆ. ಮಧ್ಯಾಹ್ನ 2ಕ್ಕೆ ಗಂಡುಮೆಟ್ಟಿದ ನಾಡು ಚಿತ್ರದುರ್ಗಕ್ಕೆ ಮಿಂಚೇರಿ ಮಹೋತ್ಸವದ ಮೆರವಣಿಗೆ ಆಗಮನ. ನಂತರ ರಾಜಾ ಬೀದಿಗಳಲ್ಲಿ ಸ್ವಾಮಿಯ ಮೆರವಣಿಗೆ ಆಗಮನ. ಕೋಲಾಟ, ಭಜನೆ, ಉರುಮೆ, ಕುಣಿತ, ತಮಟೆ, ವಾದ್ಯ, ಕಹಳೆ, ಜನಪದ ನೃತ್ಯಗಳೊಂದಿಗೆ ಭವ್ಯ ಮೆರವಣಿಗೆ ನಡೆಯಲಿದೆ. ಸಂಜೆ 7ಕ್ಕೆ ಸುಕ್ಷೇತ್ರ ಕಕ್ಕಲು ಬೆಂಚಿನಲ್ಲಿ ಬೀಡು ಬಿಡುವುದು.

ಡಿ. 28ರಂದು ಸಂಜೆ 7ಕ್ಕೆ ಸ್ವಾಮಿಯ ಗ್ರಾಮದ ಹೊಸ್ತಿಲು ಪೂಜೆಯೊಂದಿಗೆ ಸ್ವಸ್ಥಾನಕ್ಕೆ ಮರಳುವುದು. ಗುರು-ಹಿರಿಯರೊಂದಿಗೆ ದೇವರ ಮುತ್ತಯ್ಯಗಳ ಬೀಳ್ಕೊಡುಗೆ ನಡೆಯಲಿದೆ.