ಸಾರಾಂಶ
ಬಳ್ಳಾರಿ: ನಗರದ ವಾಜಪೇಯಿ ಬಡಾವಣೆಯಲ್ಲಿರುವ ರಂಗತೋರಣ ಸಂಸ್ಥೆ ಹಮ್ಮಿಕೊಂಡಿರುವ ನೀನಾಸಂ ನಾಟಕೋತ್ಸವದ ಎರಡನೇ ದಿನದ ನಾಟಕ ಪ್ರದರ್ಶನಕ್ಕೆ ಹಿರಿಯ ಚಿಂತಕ ಲೋಹಿಯಾ ಸಿ. ಚೆನ್ನಬಸವಣ್ಣ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ನಾಡಿನ ಕೆಲವೇ ಕೆಲವು ನಾಟಕ ಸಂಸ್ಥೆಗಳು ರಾಜ್ಯದಲ್ಲಿ ನಿರಂತರವಾಗಿ ತಿರುಗಾಟ ನಡೆಸಿ, ನಾಟಕ ಪ್ರದರ್ಶನಗಳನ್ನು ಹಮ್ಮಿಕೊಳ್ಳುವ ಮೂಲಕ ಪ್ರೇಕ್ಷಕರಲ್ಲಿ ನಾಟಕದ ಅಭಿರುಚಿ ಬೆಳೆಸುವ ಮಹತ್ವದ ಕೆಲಸ ಮಾಡುತ್ತಿವೆ ಎಂದರು.ಕೆ.ವಿ. ಅಕ್ಷರ ಅವರ ಹೆಗ್ಗೋಡಿನ ನೀನಾಸಂ ಮತ್ತು ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿಯವರ ಶಿವಸಂಚಾರ ತಂಡಗಳು ಗುಣಮಟ್ಟದ ನಾಟಕಗಳ ಮೂಲಕ ಜನರಲ್ಲಿ ಕಲಾಸಕ್ತಿ ಮತ್ತು ಬೆಳೆಸುವ ಕಾಳಜಿಯ ಕೆಲಸ ಮಾಡುತ್ತಿವೆ. ಇಂತಹ ಪ್ರಮುಖ ನಾಟಕಗಳನ್ನು ಬಳ್ಳಾರಿಗೆ ಆಹ್ವಾನಿಸಿ, ನಾಟಕೋತ್ಸವ ಆಯೋಜಿಸುತ್ತಿರುವ ರಂಗತೋರಣ ಸಾಂಸ್ಕೃತಿಕ ಸಂಘಟನೆ ರಂಗಭೂಮಿ ಬೆಳವಣಿಗೆ ನೆಲೆಯಲ್ಲಿ ಮಹತ್ವದ ಕಾರ್ಯ ಮಾಡುತ್ತಿದೆ ಎಂದು ಶ್ಲಾಘಿಸಿದರು. ಪತ್ರಕರ್ತ ಶಶಿಧರ ಮೇಟಿ ಅವರು, ಸಿನಿಮಾ, ಟಿವಿ, ಸಾಮಾಜಿಕ ಜಾಲತಾಣಗಳ ಭರಾಟೆಯ ನಡುವೆ ಪ್ರೇಕ್ಷಕರನ್ನು ಹಿಡಿದುಕೊಳ್ಳುವ ಸಾಮರ್ಥ್ಯ ಇರುವ ರಂಗಭೂಮಿಯ ಮಹತ್ವ ಕುರಿತು ತಿಳಿಸಿದರು. ಬಿಜೆಪಿ ಮುಖಂಡ ಕೆ.ಎ. ವೇಮಣ್ಣ ಉಪಸ್ಥಿತರಿದ್ದರು. ರಂಗತೋರಣದ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು ಹಾಗೂ ಅಡವಿಸ್ವಾಮಿ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ನೀನಾಸಂ ತಂಡದ ಕೆಜಿ ಕೃಷ್ಣಮೂರ್ತಿ ನಿರ್ದೇಶಿಸಿರುವ “ಹುಲಿಯ ನೆರಳು” ನಾಟಕ ಪ್ರದರ್ಶನವಾಯಿತು.
ಹುಲಿ ಬೇಟೆಯೊಂದರ ಎಳೆಯಲ್ಲಿ ಪ್ರಾರಂಭವಾಗುವ ಹುಲಿಯ ನೆರಳು ನಾಟಕ, ಕಣ್ಣಿಗೆ ಅಡ್ಡವಾಗಿರುವ ತೋರಿಕೆಯ ಪರದೆಯನ್ನು ಸರಿಸಿ ಸತ್ಯವನ್ನು ಕಾಣುವುದು ಎಂದರೇನು ಎಂಬ ಪ್ರಶ್ನೆಯನ್ನು ಪ್ರೇಕ್ಷಕರ ಮುಂದಿರಿಸಿತು. ಮನುಷ್ಯನ ಮನಸ್ಸಿನಲ್ಲಿ ಮೂಡುಬಹುದಾದ ಅತಿಮಾನುಷ ರೂಪಗಳು ರಂಗದ ಮೇಲೆ ಅನಾವರಣಗೊಂಡವು. ನಾವು ಯಾರು. ನಮ್ಮ ಮೂಲ ಯಾವುದು ಎಂಬ ಅಸ್ಮಿತೆಯ ಕುರಿತಾದ ಪ್ರಶ್ನೆಗಳು, ಉತ್ತರ ಹುಡುಕಾಟದ ನಡುವೆ ಸಿಕ್ಕ ಮತ್ತೊಂದು ತಿರುವು ನಾಟಕ ಕೊನೆಯವರೆಗೆ ಕೌತುಕವನ್ನು ಮೂಡಿಸಿತಲ್ಲದೆ, ಸುಮಾರು ಒಂದು ಮುಕ್ಕಾಲು ತಾಸಿನವರೆಗೆ ಪ್ರೇಕ್ಷಕರು ಅತ್ತಿತ್ತ ಕದಲದಂತೆ ನೋಡಿಕೊಂಡಿತು.