ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಐತಿಹಾಸಿಕ ಮೈಸೂರು ದಸರಾ ಉದ್ಘಾಟನೆಗೆ ಬುಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿರುವ ಸರ್ಕಾರದ ಕ್ರಮ ಪ್ರಶ್ನಿಸಿ ಮಾಜಿ ಸಂಸದ ಪ್ರತಾಪ್ ಸಿಂಹ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.ದಸರಾ ಮಹೋತ್ಸವದ ಉದ್ಘಾಟನೆಗೆ ಬಾನು ಮುಷ್ತಾಕ್ ಅವರಿಗೆ ನೀಡಿರುವ ಆಹ್ವಾನ ಹಿಂಪಡೆಯಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಮಾಜಿ ಸಂಸದ ಪ್ರತಾಪ್ ಸಿಂಹ, ಬೆಂಗಳೂರಿನ ಉದ್ಯಮಿ ಟಿ.ಗಿರೀಶ್ ಕುಮಾರ್ ಹಾಗೂ ಅಭಿನವ ಭಾರತ್ ಪಾರ್ಟಿಯ ರಾಷ್ಟ್ರೀಯ ಉಪಾಧ್ಯಕ್ಷೆ ಆರ್.ಸೌಮ್ಯಾ ಮೂರು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು.
ಈ ಕುರಿತು ಸೋಮವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರ ನೇತೃತ್ವದ ವಿಭಾಗೀಯ ಪೀಠ, ರಾಜ್ಯ ಸರ್ಕಾರ ಆಯೋಜಿಸುವ ಕಾರ್ಯಕ್ರಮದಲ್ಲಿ ಬೇರೆ ಧರ್ಮದ ವ್ಯಕ್ತಿ ಭಾಗಿಯಾಗುವುದು ಅರ್ಜಿದಾರರ ಯಾವುದೇ ಕಾನೂನಾತ್ಮಕ ಅಥವಾ ಸಾಂವಿಧಾನಿಕ ಹಕ್ಕನ್ನು ಉಲ್ಲಂಘಿಸುತ್ತದೆ ಅಥವಾ ಭಾರತದ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಸಾಬೀತುಪಡಿಸುವಲ್ಲಿ ವಿಫಲವಾಗಿದ್ದಾರೆ ಎಂದು ತಿಳಿಸಿ ಅರ್ಜಿಗಳನ್ನು ವಜಾಗೊಳಿಸಿದೆ.ಆದೇಶ ಪ್ರಕಟಿಸಿದ ನಂತರವೂ ವಾದ ಮುಂದುವರಿಸಲು ಯತ್ನಿಸಿದ ಪ್ರತಾಪ್ ಸಿಂಹ ಪರ ವಕೀಲರ ನಡೆಗೆ ನ್ಯಾಯಪೀಠ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ನಮ್ಮ ಆದೇಶ ಪ್ರಕಟಿಸಲಾಗಿದೆ. ಆದರೂ ನೀವು ವಾದ ಮುಂದುವರಿಸುತ್ತಿರುವುದು ಏಕೆ? ಈ ನ್ಯಾಯಾಲಯದಲ್ಲಿ ಹೀಗೆ ಮಾಡಲು ಅವಕಾಶವಿಲ್ಲ. ನಿಮಗೆ ದಂಡ ವಿಧಿಸಬೇಕೇ? ಎಂದು ನ್ಯಾಯಪೀಠ ಏರುಧ್ವನಿಯಲ್ಲಿ ಪ್ರಶ್ನಿಸಿತು. ಆಗ ಪ್ರತಾಪ್ ಸಿಂಹ ಪರ ವಕೀಲರು ಸುಮ್ಮನಾದರು.
ಇದಕ್ಕೂ ಮುನ್ನ ಪ್ರತಾಪ್ ಸಿಂಹ ಪರ ವಕೀಲರು, ದಸರಾ ಹಿಂದು ಹಬ್ಬ, ಜಾತ್ಯತೀತ ಹಬ್ಬವಲ್ಲ. ಬಾನು ಮುಷ್ತಾಕ್ ಅವರು ಹಿಂದು ಸಂಪ್ರದಾಯ ವಿರೋಧಿ. ಕನ್ನಡ, ಭುವನೇಶ್ವರಿ ದೇವಿ, ಕನ್ನಡ ಧ್ವಜದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಅವರಿಗೆ ಅರಿಶಿಣ-ಕುಂಕುಮದ ಮೇಲೆ ನಂಬಿಕೆ ಇಲ್ಲ. ದಸರಾ ಉದ್ಘಾಟನೆಗೆ ಆಯ್ಕೆಯಾದವರು ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡುವುದು ಶಿಷ್ಟಾಚಾರ. ಅದನ್ನು ಪಾಲಿಸಲಾಗಿಲ್ಲ ಎಂದು ಆಕ್ಷೇಪಿಸಿದರು.ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಶಿಷ್ಟಾಚಾರ ಪಾಲಿಸುವುದು ಅವರಿಗೆ ಬಿಟ್ಟ ವಿಚಾರ. ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಎಲ್ಲರಿಗೂ ಸ್ವಾತಂತ್ರ್ಯವಿದೆ. ಅರ್ಚಕರ ಪೂಜೆ ಹಕ್ಕು ಕಸಿದರೆ, ವ್ಯಕ್ತಿಯ ಆಸ್ತಿ ಕಸಿದರೆ ಅದನ್ನು ಪ್ರಶ್ನೆ ಮಾಡಬಹುದು. ಅದರಂತೆ ಬಾನು ಮುಷ್ತಾಕ್ ಅವರ ಆಯ್ಕೆ ಪ್ರಶ್ನಿಸಲು ನಿಮಗೆ ಸಾಂವಿಧಾನಿಕ ಮತ್ತು ಕಾನೂನಾತ್ಮಕ ಹಕ್ಕು ಏನಿದೆ? ಇಲ್ಲಿ ನಿಮ್ಮ ಯಾವ ಹಕ್ಕು ಕಸಿಯಲಾಗಿದೆ ಎಂದು ಪ್ರಶ್ನಿಸಿತು.
ಮತ್ತೊಬ್ಬ ಅರ್ಜಿದಾರರ ಪರ ವಕೀಲರು, ಹಿಂದುಯೇತರ ವ್ಯಕ್ತಿಯು ದಸರಾ ಉದ್ಘಾಟಿಸಬಹುದೇ ಎಂಬ ಪ್ರಶ್ನೆ ಇಲ್ಲಿದೆ. ಹಿಂದು ದೇವರ ಮೇಲೆ ನಂಬಿಕೆ ಇದೆ ಎಂದು ಬಾನು ಮುಷ್ತಾಕ್ ಸ್ಪಷ್ಟಪಡಿಸಿದರೆ; ನಮಗೆ ಯಾವುದೇ ಆಕ್ಷೇಪವಿಲ್ಲ ಎಂದರು.ಆಗ ರಾಜ್ಯ ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ, ಅರ್ಜಿದಾರರಲ್ಲಿ ಒಬ್ಬರಾದ ಪ್ರತಾಪ್ ಸಿಂಹ ಸಂಸದರಾಗಿದ್ದವರು. ಅವರು ಸಂಸದರಾಗಿದ್ದಾಗ ನಾಡಿನ ಖ್ಯಾತ ಸಾಹಿತಿ ನಿಸಾರ್ ಅಹ್ಮದ್, ದಸರಾ ಉದ್ಘಾಟಿಸಿದ್ದರು. ಆಗ ಪ್ರತಾಪ್ ಸಿಂಹ ಯಾವುದೇ ಆಕ್ಷೇಪ ಎತ್ತಿಲ್ಲ. ಮೇಲಾಗಿ ನಿಸಾರ್ ಅಹ್ಮದ್ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದರು. ಬಾನು ಮುಷ್ತಾಕ್ ಬುಕರ್ ಪ್ರಶಸ್ತಿ ಪುರಸ್ಕೃತರು. ಮುಸ್ಲಿಂ ಸಮುದಾಯಕ್ಕೆ ಸೇರಿದ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿರುವುದು ಅಸಾಮಾನ್ಯ ಸಂಗತಿಯಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.ಅಲ್ಲದೆ, ಎಲ್ಲ ಪಕ್ಷಗಳ ಮುಖಂಡರನ್ನೊಳಗೊಂಡ ದಸರಾ ಸಮಿತಿಯು ಅತಿಥಿ ಆಯ್ಕೆಯನ್ನು ಮುಖ್ಯಮಂತ್ರಿಗೆ ನೀಡಿತ್ತು. ಮುಖ್ಯಮಂತ್ರಿ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿದ್ದಾರೆ. ಈ ನಿರ್ಧಾರ ಸಂವಿಧಾನದ ಪರಿಚ್ಛೇದ 15ಕ್ಕೆ ಪೂರಕವಾಗಿದೆ. ದಸರಾ ರಾಜ್ಯದ ಹಬ್ಬ ಹಾಗೂ ಜಾತ್ಯತೀತ ಹಬ್ಬ. ಅದನ್ನು ಧಾರ್ಮಿಕ ಕಾರ್ಯಕ್ರಮವಾಗಿ ಬಿಂಬಿಸಲಾಗುತ್ತಿದೆ ಎಂದು ಆಕ್ಷೇಪಿಸಿದರು.
ಈ ವಾದ ಆಕ್ಷೇಪಿಸಿದ ಪ್ರತಾಪ್ ಸಿಂಹ ಪರ ವಕೀಲರು, ಮುಸ್ಲಿಂ ಆಗಿದ್ದರೂ ನಿಸಾರ್ ಅಹ್ಮದ್ ಅವರು ಹಿಂದು ಸಂಸ್ಕೃತಿಯ ಮೇಲೆ ಅಪಾರ ಗೌರವ ಹೊಂದಿದ್ದರು. ಕನ್ನಡ ಮಾತೆ, ಕೃಷ್ಣನ ಬಗ್ಗೆ ಪದ್ಯಗಳನ್ನೂ ಬರೆದಿದ್ದಾರೆ. ಅವರು ಎಂದಿಗೂ ಕನ್ನಡ ವಿರೋಧಿ ಹೇಳಿಕೆ ನೀಡಿರಲಿಲ್ಲ ಎಂದು ಸಮಜಾಯಿಷಿ ನೀಡಿದರು.ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ಪ್ರಕರಣದಲ್ಲಿ ಅರ್ಜಿದಾರರ ಯಾವುದೇ ಕಾನೂನಾತ್ಮಕ ಅಥವಾ ಸಂವಿಧಾನಾತ್ಮಕ ಹಕ್ಕು ಉಲ್ಲಂಘನೆಯಾಗಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿಗಳನ್ನು ವಜಾಗೊಳಿಸಿತು.