ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಸಾಹಿತ್ಯ ಸಾಂಸ್ಕೃತಿಕ ಶ್ರೀಮಂತಿಕೆಗೆ ಧಾರವಾಡ, ಮೈಸೂರು ಹೆಸರಾದಂತೆ ಚಿತ್ರದುರ್ಗವೂ ತನ್ನದೇ ಛಾಪು ಮೂಡಿಸಿದೆ‌. ಐತಿಹಾಸಿಕ ಕಾದಂಬರಿಗಳ ಮೂಲಕ ಹೆಸರಾದ ತ.ರಾ.ಸು ಅವರಿಂದ ಹಿಡಿದು ಇಂದಿನ ಅನೇಕರು ಅಂತಹ ಕೆಲಸ ಮಾಡುತ್ತಿದ್ದಾರೆ ಎಂದು ಮಾದಾರ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಹೇಳಿದರು.

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಶನಿವಾರ ಚಿನ್ಮೂಲಾದ್ರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ಆಯೋಜಿಸಿದ್ದ ಎ.ಆರ್.ಮಣಿಕಾಂತ್ ಅವರೊಂದಿಗೆ ಸಂವಾದ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಈಶಾನ್ಯ ರಾಜ್ಯಗಳಿಂದ ಶುರುವಾದ ಕ್ರಾಂತಿಕಾರಿ ಸಾಹಿತ್ಯ ಪಶ್ಚಿಮ ಬಂಗಾಳ, ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ಕರ್ನಾಟಕದ ಪಶ್ಚಿಮ ಘಟ್ಟಗಳವರೆಗೆ ವ್ಯಾಪಿಸಿತ್ತು. ಬರಹ ಹುಟ್ಟುವುದೇ ಸಂದಿಗ್ಧ ಸಂದರ್ಭದಲ್ಲಿ. ಬರಹಕ್ಕೆ ಯಾವುದೇ ಪೂರ್ವ ತಯಾರಿ ಬೇಕಾಗಿಲ್ಲ. ಅನಿಸಿದ್ದನ್ನು ಬರೆಯುತ್ತಾ ಹೋಗುವುದು ಕಲಿಯಬೇಕು. ಆ ನಂತರ ಪಕ್ವತೆ ಎನ್ನುವುದು ತನ್ನಿಂದ ತಾನೇ ಸಿದ್ದಿಸುತ್ತದೆ ಎಂದರು.

ಯಾವುದೇ ಪ್ರಕಾರದ ಸಾಹಿತ್ಯ ಸಮಾಜವನ್ನು ಮತ್ತು ಅಲ್ಲಿ ಜೀವಿಸುವ ಮನುಷ್ಯನ ಆಂತರ್ಯದ ಪರಿವರ್ತನೆಗೆ ದಾರಿಯಾಗಬೇಕು. ಮಣಿಕಾಂತ್ ಅವರು ಕನ್ನಡದ ಅನೇಕ ದೈನಿಕಗಳಲ್ಲಿ ಬರೆಯುತ್ತಾ ಬಂದಿದ್ದಾರೆ. ಕೊನೆಯವರೆಗೂ ಓದಿಸಿಕೊಂಡು ಹೋಗುವುದು ಇವರ ಬರಹದ ಶಕ್ತಿ. ಕುತೂಹಲ ಹುಟ್ಟಿಸುವ ಅವರ ಪ್ರಕಾರ ಎಲ್ಲರಿಗೂ ಇಷ್ಟವಾಗುತ್ತದೆ ಎಂದು ವಿವರಿಸಿದರು.

ಅಂಕಣಕಾರ ಎ.ಆರ್.ಮಣಿಕಾಂತ್ ಮಾತನಾಡಿ, ಅಂಕಣ ಬರಹಗಾರರಾಗ ಬೇಕಾದವರಿಗೆ ಭಾಷೆಯ ಬಳಕೆಯ ಜೊತೆಗೆ ತಾಳ್ಮೆ, ವಿಷಯಗಳ ಆಯ್ಕೆಯಲ್ಲಿ ವೈಶಿಷ್ಟತೆ ಇರಬೇಕು. ಬರವಣಿಗೆ ವ್ಯಷ್ಟಿಯಿಂದ ಸಮಷ್ಟಿಯ ಕಡೆ ಬೆಳಕು ಚೆಲ್ಲುವಂತಿದ್ದು, ಸಮಾಜದಲ್ಲಿ ಸೋತವರಿಗೆ ವಿಜಯದ ಹಾದಿಯನ್ನು ತೋರಿಸುವಂತಿರಬೇಕು ಎಂದರು. ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದಿಸಿದರು.


ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ.ಕೆ.ಎಂ.ವೀರೇಶ್, ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಕಳೆದ 20 ವರ್ಷಗಳಿಂದ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ವೇದಿಕೆಯಡಿಯಲ್ಲಿ ಸಾಕಷ್ಟು ಕಾರ್ಯಕ್ರಮಗಳು ನಡೆಯುತ್ತಲೇ ಬಂದಿವೆ. ಇಂತಹ ವಿಶಿಷ್ಟ ಅತಿಥಿಗಳನ್ನು ಕರೆಸಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಾಹಿತ್ಯದ ಊಟ ಉಣಬಡಿಸುವ ಕಾಯಕ ಮುಂದುವರಿಯಲಿ ಎಂದು ಹೇಳಿದರು.

ಕಾನೂನುಗಳ ಅರಿವು ವಿಷಯ ಕುರಿತು ವಕೀಲರಾದ ಬಿ.ಕೆ.ರೆಹಮತ್ ವುಲ್ಲಾ ಮಾತನಾಡಿದರು. ವೇದಿಕೆಯ ಸಂಸ್ಥಾಪನ ಅಧ್ಯಕ್ಷೆ ದಯಾವತಿ ಪುತ್ತೂರ್ಕರ್ ಪ್ರಾಸ್ತಾವಿಕ ಮಾತನಾಡಿದರು. ಶಾರದಾ ಬಿ.ಜೈರಾಮ್, ಸತೀಶ್ ಕುಮಾರ್, ಎಚ್, ಎಂ.ಬಿ.ಜಯದೇವಮೂರ್ತಿ, ಶಿವಾನಂದ್, ವಿನಾಯಕ, ಬಸವರಾಜ್ ಹರ್ತಿ, ಸುಮಾ ರಾಜಶೇಖರ್, ಶಂಕರ್ ಮುಂತಾದವರು ಉಪಸ್ಥಿತರಿದ್ದರು.