ಚಿತ್ತಾಪುರ: ಬಿಜೆಪಿ ಕಾರ್ಯಕರ್ತರ ವಿರುದ್ಧ ಸುಳ್ಳು ಪ್ರಕರಣ

| Published : Feb 08 2024, 01:36 AM IST

ಚಿತ್ತಾಪುರ: ಬಿಜೆಪಿ ಕಾರ್ಯಕರ್ತರ ವಿರುದ್ಧ ಸುಳ್ಳು ಪ್ರಕರಣ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ಕಾರ್ಯಕರ್ತರು ಸಕ್ರಿಯವಾಗಿ ಕೆಲಸ ಮಾಡುತ್ತಿರುವುದನ್ನು ಸಹಿಸದ ಪ್ರಿಯಾಂಕ್ ಖರ್ಗೆ ಪೊಲೀಸ್ ಇಲಾಖೆಯ ಮುಲಕ ಬಿಜೆಪಿ ಕಾರ್ಯಕರ್ತರ ಶಕ್ತಿ ಕುಂದಿಸುವ ಕೆಲಸವನ್ನು ಮಾಡುತ್ತಾರೆ: ನೀಲಕಂಠ ಪಾಟೀಲ್‌

ಕನ್ನಡಪ್ರಭ ವಾರ್ತೆ ಚಿತ್ತಾಪುರ

ಜಿಲ್ಲೆಯಲ್ಲಿ ಚಿತ್ತಾಪುರ ತಾಲೂಕಿನಲ್ಲಿ ಬಿಜೆಪಿ ಕಾರ್ಯಕರ್ತರು ಸಕ್ರಿಯವಾಗಿ ಕೆಲಸ ಮಾಡುತ್ತಿರುವುದನ್ನು ಸಹಿಸದ ಪ್ರಿಯಾಂಕ್ ಖರ್ಗೆ ಪೊಲೀಸ್ ಇಲಾಖೆಯ ಮುಲಕ ಬಿಜೆಪಿ ಕಾರ್ಯಕರ್ತರ ಶಕ್ತಿ ಕುಂದಿಸುವ ಕೆಲಸವನ್ನು ಮಾಡುತ್ತಾರೆ ಎಂದು ಚಿತ್ತಾಪುರ ಬಿಜೆಪಿ ಮಂಡಲ ಅಧ್ಯಕ್ಷ ನೀಲಕಂಠ ಪಾಟೀಲ್ ಆರೊಪಿಸಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಅವರು ಕ್ಷೇತ್ರದಲ್ಲಿ ಆಗುತ್ತಿರುವ ಅನ್ಯಾಯವನ್ನು ಪ್ರಶ್ನಿಸಿದರೆ ಅವರ ವಿರುದ್ಧ ಸುಳ್ಳು ಕೇಸ್‌ಗಳನ್ನು ದಾಖಲಿಸಿ ಅವರಿಗೆ ಮಾನಸಿಕವಾಗಿ ಕುಗ್ಗುವಂತೆ ಮಾಡುತ್ತಿದ್ದಾರೆ. ಬಿಜೆಪಿ ಪ್ರತಿಯೊಬ್ಬ ಕಾರ್ಯಕರ್ತ ಇಂತಹ ಸುಳ್ಳು ಹಾಗೂ ಗೊಡ್ಡು ಬೆದರಿಕೆಗಳಿಗೆ ಅಂಜುವದಿಲ್ಲಾ ಎಂದು ಅವರು ತಿಳಿಯಬೇಕು ಎಂದರು.

ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬರುವ ರೊಗಿಗಳಿಗೆ ಆಗುತ್ತಿರುವ ತೊಂದರೆ ಕುರಿತು ಪ್ರಶ್ನಿಸಿದರೆ ಅಂತಹವರ ವಿರುದ್ಧ ಸುಳ್ಳು ಕೇಸ್ ದಾಖಲಿಸುತ್ತಿದ್ದಾರೆ. ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ವೈದ್ಯ ಮುಬಾಶೀರ್ ಎನ್ನುವವರು ಡ್ಯೂಟಿ ಡಾಕ್ಟರ್ ಬರದೇ ಇದ್ದರೂ ಹಾಜರೀ ಹಾಕಿರುವದು ಪ್ರಶ್ನಿಸುವದು ತಪ್ಪೆ? ಅಲ್ಲದೇ ಆಸ್ಪತ್ರೆಯ ಆಡಳಿತಾಧಿಕಾರಿಯಾಗಿ ಖಾಸಗೀ ಆಸ್ಪತ್ರೆ ನಡೆಸಿ ಸರ್ಕಾರಿ ಆಸ್ಪತೆಗೆ ಬರುವ ರೊಗಿಗಳಿಗೆ ತಮ್ಮ ಖಾಸಗಿ ಕ್ಲೀನಿಕ್‌ಗೆ ಬನ್ನಿ ಎಂದು ಹೇಳುವುದು ಸರೀಯೇ? ಇದನ್ನು ಪ್ರಶ್ನಿಸುವುದು ತಪ್ಪೇ ಎಂದು ಅವರು ಪ್ರಶ್ನಿಸಿದರು.

ವಾಡಿ ವಲಯ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ನಮ್ಮ ಪಕ್ಷದ ಮುಖಂಡರೊಬ್ಬರು ಅಸ್ವಸ್ಥರಾದಾಗ ಆಸ್ಪತ್ರೆಗೆ ಭೇಟಿ ನೀಡಿದಾಗ ಡ್ಯೂಟಿ ಡಾಕ್ಟರ್ ಇರಲಿಲ್ಲಾ ಇದನ್ನು ನಮ್ಮ ಪಕ್ಷದ ಮುಖಂಡ ಮಣಿಕಂಠ ರಾಠೋಡ್ ಪ್ರಶ್ನಿಸಿದ್ದಾರೆ. ಈ ಸಂದರ್ಭದಲ್ಲಿ ನಾನು ಸ್ಥಳದಲ್ಲಿ ಇರಲಿಲ್ಲ ಆದರೂ ಕೂಡಾ ನನ್ನ ಹಾಗೂ ೯ ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಕುರಿತಾಗಿ ನಮ್ಮ ನಾಯಕರು ಸ್ಥಳಿಯ ಪೊಲಿಸ್ ಠಾಣೆ ಹಾಗೂ ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ ಪೊಲೀಸ್‌ ಇಲಾಖೆ ನಮ್ಮ ಕೇಸ್ ದಾಖಲಿಸಿಕೊಳ್ಳದೇ ಕಾಂಗ್ರೆಸ್ ಮುಖಂಡರ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ಅವರ ಸೂಚನೆ ಮೇಲೆ ನಮ್ಮ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದರ ಹಿಂದಿರುವ ಕೈವಾಡ ಯಾರದಿದೆ ಎನ್ನುವುದು ತಿಳಿಸಬೇಕು ಎಂದು ಅವರು ಒತ್ತಾಯಿಸಿದರು.