ಚಿತ್ತಾಪುರ ಸಂಘ ದಂಗಲ್‌: ಹೈ ತೀರ್ಪಿನತ್ತ ಚಿತ್ತ

| Published : Oct 30 2025, 01:45 AM IST

ಚಿತ್ತಾಪುರ ಸಂಘ ದಂಗಲ್‌: ಹೈ ತೀರ್ಪಿನತ್ತ ಚಿತ್ತ
Share this Article
  • FB
  • TW
  • Linkdin
  • Email

ಸಾರಾಂಶ

ಚಿತ್ತಾಪುರದಲ್ಲಿ ನ.2ರಂದು ಆರ್‌ಎಸ್‌ಎಸ್‌ ಸಂಘ ಶತಾಬ್ದಿ ಪಥ ಸಂಚಲನ ನಡೆಯುತ್ತಾ? ಎಂಬ ಕುತೂಹಲಕ್ಕೆ ಅ.30ರಂದು ತೆರೆ ಬೀಳಲಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ, ರಾಜಕೀಯವಾಗಿ ಭಾರಿ ವಾಕ್ಸ್‌ಮರಕ್ಕೆ ಕಾರಣವಾಗಿರುವ ಸಚಿವ ಪ್ರಿಯಾಂಕ್‌ ಖರ್ಗೆ ತವರು ಚಿತ್ತಾಪುರದಲ್ಲಿ ನ.2ರಂದು ಆರ್‌ಎಸ್‌ಎಸ್‌ ಸಂಘ ಶತಾಬ್ದಿ ಪಥ ಸಂಚಲನ ನಡೆಯುತ್ತಾ? ಎಂಬ ಕುತೂಹಲಕ್ಕೆ ಅ.30ರಂದು ತೆರೆ ಬೀಳಲಿದೆ.

ಪಥಸಂಚಲನಕ್ಕೆ ಅನುಮತಿ ಕೋರಿ ಆರ್‌ಎಸ್‌ಎಸ್‌ ಸಲ್ಲಿಸಿರುವ ರಿಟ್‌ ಅರ್ಜಿ ಕುರಿತು ವಿಚಾರಣೆ ನಡೆಸುತ್ತಿರುವ ಕಲಬುರಗಿ ಹೈಕೋರ್ಟ್‌ ಪೀಠದಲ್ಲಿ ಗುರುವಾರ ತೀರ್ಪು ನೀಡಲಿದ್ದು, ಸಂಘದ ಕಾರ್ಯಕ್ರಮಕ್ಕೆ ಕೋರ್ಟ್‌ ಹಸಿರು ನಿಶಾನೆ ನೀಡುತ್ತಾ? ಅಥವಾ ಇಲ್ಲವಾ? ಎಂದು ಎಲ್ಲರೂ ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ.

ಈ ಹಿಂದೆ ಹೈಕೋರ್ಟ್‌, ಶಾಂತಿಸಭೆ ನಡೆಸಿ ವರದಿಯೊಂದಿಗೆ ಬರುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿತ್ತು. ಆದರೆ, ಶಾಂತಿಸಭೆಯಲ್ಲಿ ಅಶಾಂತಿ ತಾಂಡವವಾಡಿದ್ದು, ಒಮ್ಮತಕ್ಕೆ ಬರಲು ಆಡಳಿತ ವಿಫಲವಾಗಿದೆ. ಜಿಲ್ಲಾಡಳಿತ ಏನು ವರದಿ ಸಲ್ಲಿಸಲಿದೆ ಎಂದು ನೋಡಬೇಕಿದೆ.

ಹಿನ್ನೆಲೆ:

ಕಳೆದ ಅ.19ರಂದೇ ಚಿತ್ತಾಪುರದಲ್ಲಿ ಪಥ ಸಂಚಲನಕ್ಕೆ ಅನುಮತಿ ನಿರಾಕರಿಸಿದ್ದ ತಹಸೀಲ್ದಾರ್‌ ಆದೇಶವನ್ನು ಪ್ರಶ್ನಿಸಿ ಸಂಘ ಹೈಕೋರ್ಟ್‌ ಮೆಟ್ಟಿಲೇರಿತ್ತು. ಅರ್ಜಿ ತುರ್ತು ವಿಚಾರಣೆ ನಡೆಸಿದ್ದ ಹೈಕೋರ್ಟ್‌ ಪಥ ಸಂಚಲನಕ್ಕೆ ಹೊಸದಿನ ನಿಗದಿಪಡಿಸಿ ಅನುಮತಿ ಕೋರುವಂತೆ ಸೂಚಿಸಲಾಗಿತ್ತು. ಬಳಿಕ ಆರೆಸ್ಸೆಸ್‌ ಜಿಲ್ಲಾ ಸಂಚಾಲಕ ಅಶೋಕ ಪಾಟೀಲ್‌, ನ.2ರಂದು ನಿಗದಿಪಡಿಸಿ ಪಥಸಂಚಲನಕ್ಕೆ ಅನುಮತಿ ಕೋರಿದ್ದರು.