ಚಂದ್ರಗುತ್ತಿಗೆ ಮೂಲಸೌಕರ್ಯ: ಅಧಿಕಾರಿಗಳಿಂದ ಸ್ಥಳ ಪರಿಶೀಲನೆ

| Published : Mar 30 2024, 12:59 AM IST / Updated: Mar 30 2024, 12:12 PM IST

ಚಂದ್ರಗುತ್ತಿಗೆ ಮೂಲಸೌಕರ್ಯ: ಅಧಿಕಾರಿಗಳಿಂದ ಸ್ಥಳ ಪರಿಶೀಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಐತಿಹಾಸಿಕ ಪ್ರಸಿದ್ಧ ಚಂದ್ರಗುತ್ತಿ ಶ್ರೀ ರೇಣುಕಾಂಬಾ ದೇವಿ ದೇಗುಲದಲ್ಲಿ ಭಕ್ತರಿಗೆ ಶೌಚಾಲಯ ಸೇರಿ ಮೂಲಭೂತ ಸೌಕರ್ಯಗಳಿಗಾಗಿ ಧಾರ್ಮಿಕ ದತ್ತಿ ಇಲಾಖೆಗೆ ಸಲ್ಲಿಸಿದ್ದ ರು. ೫೨ಲಕ್ಷಗಳ ಪ್ರಸ್ತಾವನೆಗೆ ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು ಶುಕ್ರವಾರ ಸ್ಥಳ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಸೊರಬ

ಐತಿಹಾಸಿಕ ಪ್ರಸಿದ್ಧ ಚಂದ್ರಗುತ್ತಿ ಶ್ರೀ ರೇಣುಕಾಂಬಾ ದೇವಿ ದೇಗುಲದಲ್ಲಿ ಭಕ್ತರಿಗೆ ಶೌಚಾಲಯ ಸೇರಿ ಮೂಲಭೂತ ಸೌಕರ್ಯಗಳಿಗಾಗಿ ಧಾರ್ಮಿಕ ದತ್ತಿ ಇಲಾಖೆಗೆ ಸಲ್ಲಿಸಿದ್ದ ರು. ೫೨ಲಕ್ಷಗಳ ಪ್ರಸ್ತಾವನೆಗೆ ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು ಶುಕ್ರವಾರ ಸ್ಥಳ ಪರಿಶೀಲನೆ ನಡೆಸಿದರು.

ಶೌಚಾಲಯ ಇಲ್ಲದೆ ರೇಣುಕೆ ಭಕ್ತರ ಮಾನ ಹರಾಜು! ಎಂಬ ಶೀರ್ಷಿಕೆಯಲ್ಲಿ ಜ.೨ರಂದು ಕನ್ನಡಪ್ರಭ ವರದಿ ಮಾಡಿತ್ತು. ವರದಿ ಅನ್ವಯ ಫೆಬ್ರವರಿಯಲ್ಲಿ ರಾಜ್ಯ ಲೋಕಾಯುಕ್ತ ಸ್ಥಳೀಯ ಗ್ರಾ.ಪಂ. ಮತ್ತು ನಾಡಕಚೇರಿಗೆ ಸ್ಪಷ್ಟನೆ ಕೇಳಿ ನೋಟಿಸ್ ಜಾರಿಗೊಳಿಸಿತ್ತು. ಇದರ ಬೆನ್ನಲ್ಲೆ ಧಾರ್ಮಿಕ ದತ್ತಿ ಇಲಾಖೆ ಶೌಚಾಲಯ, ಸ್ನಾನದ ಗೃಹ ಸೇರಿ ಮೂಲಭೂತ ಸಮಸ್ಯೆಗಳಿಗೆ ೫೨ ಲಕ್ಷ ರು.ಗಳ ಪ್ರಸ್ತಾವನೆ ಸಲ್ಲಿಸಿತ್ತು. ಇದರ ಅನ್ವಯ ಧಾರ್ಮಿಕ ದತ್ತಿ ಇಲಾಖೆ ಕೇಂದ್ರ ಸ್ಥಾನಿಕ ಸಹಾಯಕಿ ಕೆ. ಪದ್ಮ ಚಂದ್ರಗುತ್ತಿ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಹುಣ್ಣಿಮೆ ಮತ್ತು ವಿಶೇಷ ದಿನಗಳಲ್ಲಿ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಕ್ಷೇತ್ರಕ್ಕೆ ಆಗಮಿಸುತ್ತಾರೆ. ಭಕ್ತರಿಗೆ ಅನುಕೂಲವಾಗುವಂತಹ ವ್ಯವಸ್ಥಿತ ಶೌಚಗೃಹ, ಸ್ನಾನದಗೃಹ, ಕುಡಿಯುವ ನೀರು, ನೆರಳು, ಸೇವಾ ಕೇಂದ್ರಗಳು, ಪಾದರಕ್ಷೆ ಬಿಡುವ ಸ್ಥಳ, ಕೇಶಮುಂಡನೆ, ಮಹಿಳೆಯರಿಗೆ ಬಟ್ಟೆ ಬದಲಿಸಲು ಕೊಠಡಿಗಳು ಸೇರಿ ಇನ್ನು ಅಗತ್ಯ ಮೂಲಭೂತ ಸೌಕರ್ಯಗಳ ಕಲ್ಪಿಸುವ ನಿಟ್ಟಿನಲ್ಲಿ ಧಾರ್ಮಿಕ ದತ್ತಿ ಇಲಾಖಾ ಅಧಿಕಾರಿಗಳು ಅಂಬೆಯ ದೇವಸ್ಥಾನದ ಸುತ್ತುಮುತ್ತ ಸ್ಥಳ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಕೆ.ಎಸ್. ಮಂಗಳಗೌರಿ, ಎಂ.ಎನ್. ಹರಿಶಂಕರ್, ಭೂಮಾಪಕ ಟಿ. ಹರ್ಷವರ್ಧನ್, ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಯ ಮುಜರಾಯಿ ತಹಸೀಲ್ದಾರ್ ಪ್ರದೀಪ್, ತಾಲೂಕು ದಂಡಾಧಿಕಾರಿ ಹುಸೇನ್ ಸರಕಾವಸ್, ಚಂದ್ರಗುತ್ತಿ ನಾಡಕಚೇರಿ ಉಪ ತಹಸೀಲ್ದಾರ್ ವಿ.ಎಲ್. ಶಿವಪ್ರಸಾದ್, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರಮೀಳಾಕುಮಾರಿ, ಪಂಚಾಯತ್ ರಾಜ್ ಇಲಾಖೆ ಕಿರಿಯ ಅಭಿಯಂತರ ಗಣಪತಿ ನಾಯ್ಕ್, ಗ್ರಾಪಂ ಪಿಡಿಒ ನಾರಾಯಣಮೂರ್ತಿ, ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಮಧು ಸೇರಿ ಪುರಾತತ್ವ ಇಲಾಖೆ, ಅರಣ್ಯ ಇಲಾಖೆ ಅಧಿಕಾರಿಗಳು ಹಾಜರಿದ್ದರು.