ಸಾರಾಂಶ
ಉಡುಪಿ ಕೃಷ್ಣಮಠದಲ್ಲಿ ಮಕರ ಸಂಕ್ರಾತಿಯ ಪ್ರಯುಕ್ತ ಭಾನುವಾರ ಮೂರು ತೇರು ಉತ್ಸವ ನಡೆಯಿತು. ಸೋಮವಾರ ರಥಬೀದಿಯಲ್ಲಿ ಚೂರ್ಣೋತ್ಸವ ನಡೆಯಲಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ಮಕರ ಸಂಕ್ರಾಂತಿಯ ಪ್ರಯುಕ್ತ ಉಡುಪಿ ಕೃಷ್ಣಮಠದಲ್ಲಿ ಭಾನುವಾರ ರಾತ್ರಿ ವೈಭವದ ಮೂರು ತೇರು ಉತ್ಸವ ನಡೆಯಿತು. ಸಾವಿರಾರು ಮಂದಿ ಭಕ್ತರು ಈ ಉತ್ಸವದಲ್ಲಿ ಸಂಭ್ರಮದಿಂದ ಭಾಗವಹಿಸಿದ್ದರು.
ಜ.18ರಂದು ತಮ್ಮ ಪರ್ಯಾಯ ಸಂಪನ್ನಗೊಳಿಸಲಿರುವ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ನಡೆದ ಈ ರಥೋತ್ಸವದಲ್ಲಿ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಕೃಷ್ಣನ ಉತ್ಸವ ಮೂರ್ತಿಯನ್ನು ರಥಾರೋಹಣಗೊಳಿಸಿದರು.
ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು, ಪಲಿಮಾರು ಕಿರಿಯ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು, ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.
ಸಾಲಂಕೃತ ಮಧ್ವಸರೋವರದಲ್ಲಿ ಕೃಷ್ಣನಿಗೆ ತೆಪ್ಪೋತ್ಸವವೂ ನಡೆಸಲಾಯಿತು. ಸೋಮವಾರ ಮಧ್ಯಾಹ್ನ ರಥಬೀದಿಯಲ್ಲಿ ಹಗಲು ರಥೋತ್ಸವ ಅಥವಾ ಚೂರ್ಣೋತ್ಸವ ನಡೆಯಲಿದೆ.