ಅರಸೀಕೆರೆಯಲ್ಲಿ ವಿಜೃಂಭಣೆಯಿಂದ ಜರುಗಿದ ಚೌಡೇಶ್ವರಿಯ ಸಿಡಿ ಮಹೋತ್ಸವ

| Published : May 20 2024, 01:34 AM IST

ಅರಸೀಕೆರೆಯಲ್ಲಿ ವಿಜೃಂಭಣೆಯಿಂದ ಜರುಗಿದ ಚೌಡೇಶ್ವರಿಯ ಸಿಡಿ ಮಹೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಅರಸೀಕೆರೆ ತಾಲೂಕಿನ ಕಾಮಸಮುದ್ರ ಗ್ರಾಮದ ಶ್ರೀ ಉಡಿಸಲಮ್ಮದೇವಿ ರಥೋತ್ಸವ ಹಾಗೂ ಶ್ರೀ ಚೌಡೇಶ್ವರಿ ದೇವಿ ಸಿಡಿ ಮಹೋತ್ಸವವು ಭಾನುವಾರ ತಂಪಾದ ವಾತಾವರಣದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

ಜಾತ್ರಾ ಉತ್ಸವ । ಕಾಮಸಮುದ್ರ ಗ್ರಾಮದಲ್ಲಿ ಆಯೋಜನೆ । ಸಹಸ್ರಾರು ಭಕ್ತರು ಭಾಗಿ । ಉಡಿಸಲಮ್ಮ ರಥೋತ್ಸವ

ಕನ್ನಡಪ್ರಭ ವಾರ್ತೆ ಅರಸೀಕೆರೆ

ತಾಲೂಕಿನ ಕಾಮಸಮುದ್ರ ಗ್ರಾಮದ ಶ್ರೀ ಉಡಿಸಲಮ್ಮದೇವಿ ರಥೋತ್ಸವ ಹಾಗೂ ಶ್ರೀ ಚೌಡೇಶ್ವರಿ ದೇವಿ ಸಿಡಿ ಮಹೋತ್ಸವವು ಭಾನುವಾರ ತಂಪಾದ ವಾತಾವರಣದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

ಕಾಮಸಮುದ್ರ ಹಾಗೂ ಸುತ್ತಮುತ್ತಲಿನ ಅಧಿದೇವತೆ ಉಡಿಸಲಮ್ಮ, ಚೌಡಮ್ಮದೇವಿಯರ ಜಾತ್ರೆ ಮಹೋತ್ಸವದ ಹಿನ್ನೆಲೆ ಧಾರ್ಮಿಕ ಕಾರ್ಯಕ್ರಮಗಳಾದ ಧ್ವಜಾರೋಹಣ, ಮಧುವಣಗಿತ್ತಿ ಶಾಸ್ತ್ರ, ಆರತಿ ಬಾನ, ಗಂಗಾಸ್ನಾನ ಮೇ ೧೬ ರಿಂದ ೧೮ ರವರೆಗೆ ಶಾಸ್ತ್ರೋಕ್ತವಾಗಿ ಜರುಗಿತು.

ಭಾನುವಾರ ನಸುಕಿನಿಂದಲೇ ದೇವಾಲಯದಲ್ಲಿ ವಿವಿಧ ಪೂಜಾ ವಿಧಾನಗಳು ನಡೆದು ೧೦ ಗಂಟೆಗೆ ಚೌಡಮ್ಮ ದೇವಿಯ ಬಂಗಾರದ ವಡವೆಯ ಜೊತೆಯಲ್ಲಿ ವಿಶೇಷ ಪಟೇಲ್ ಹೂವಿನಲ್ಲಿ ಅಲಂಕಾರ ಮಾಡಿರುವುದು ಭಕ್ತರ ಆಕರ್ಷಣೆಯಾಗಿತ್ತು. ನಂತರ ಸಿಡಿ ಮಹೋತ್ಸವ ಅದ್ಧೂರಿಯಾಗಿ ನಡೆಯಿತು.

ಸಿಡಿ ಮಹೋತ್ಸವದಲ್ಲಿ ಹರಕೆ ಹೊತ್ತ ಮಹಿಳೆಯರು ತಮ್ಮ ಮಕ್ಕಳನ್ನು ಸಿಡಿಯಲ್ಲಿ ಕೂರಿಸಿ ಹರಕೆ ತೀರಿಸಿದರು. ನಂತರ ಚೌಡೇಶ್ವರಿದೇವಿ ಗೆಳೆಯರ ಬಳಗದಿಂದ ಪಾನಕ, ಫಲಹಾರ ಸೇವೆ ನಡೆಯಿತು. ನೆರೆದಿದ್ದ ಭಕ್ತ ಸಮೂಹಕ್ಕೆ ಅನ್ನದಾಸೋಹ ಏರ್ಪಡಿಸಲಾಗಿತ್ತು.

ಮಧ್ಯಾಹ್ನ ೩.೩೦ಕ್ಕೆ ಶ್ರೀ ಉಡಿಸಲಮ್ಮ ದೇವಿಯನ್ನು ವಿಶೇಷ ಹೂವಿನ ಅಲಂಕಾರದೊಂದಿಗೆ ಮಂಗಳ ವಾದ್ಯದೊಂದಿಗೆ ಅಲಂಕೃತ ರಥದಲ್ಲಿ ಕೂರಿಸಿ ಚೌಡಮ್ಮದೇವಿಯ ಪೂಜೆ ಸಲ್ಲಿಸಿ ರಥದ ಗಾಲಿಗೆ ತೆಂಗಿನಕಾಯಿಯನ್ನು ಒಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ನೆರೆದಿದ್ದ ಭಕ್ತರುದೇವಿ ನಾಮ ಸ್ಮರಣೆ ಮಾಡುತ್ತ ರಥೋತ್ಸವಕ್ಕೆ ಬಾಳೆ ಹಣ್ಣು, ದವನ ಎಸೆದು ಸಡಗರ ಸಂಭ್ರಮದಿಂದ ರಥವನ್ನು ಎಳೆದರು. ಶ್ರೀ ಚೌಡೇಶ್ವರಿ ದೇವಿಯ ನವಿಲಿನ ಕುಣಿತ ನೋಡುಗರ ಮನಸೂರೆಗೊಳ್ಳುವಂತಿತ್ತು. ಕಾಮಸಮುದ್ರ ಮಲ್ಲೇನಹಳ್ಳಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಈಷ್ಟಾರ್ಥಗಳನ್ನು ಈಡೇರಿಸುವಂತೆ ಪ್ರಾರ್ಥಿಸಿದರು.