ಕರಾವಳಿಯಲ್ಲಿ ಶ್ರದ್ಧಾ ಭಕ್ತಿಯ ‘ಪಾಮ್ ಸಂಡೇ’

| Published : Mar 25 2024, 12:52 AM IST

ಸಾರಾಂಶ

ಧರ್ಮಗುರುಗಳು ಚರ್ಚ್‍ಗಳಲ್ಲಿ ಪವಿತ್ರ ಕೃತಜ್ಞತಾ ಪೂಜೆಯ ಮೊದಲು ಗರಿಗಳನ್ನು ಪವಿತ್ರ ನೀರಿನಿಂದ ಶುದ್ಧೀಕರಿಸಿ, ಗರಿಗಳ ಪೂಜೆ ಮಾಡಿ ವಾಳೆಗಳ ಗುರಿಕಾರರ ಮೂಲಕ ಕಥೋಲಿಕ್ ಕುಟುಂಬಗಳಿಗೆ ಗರಿಗಳನ್ನು ಹಂಚಿದರು. ಈ ಗರಿಗಳನ್ನು ಮೆರವಣಿಗೆಯ ಮೂಲಕ ಹಿಡಿದುಕೊಂಡು ಭಕ್ತರು ಚರ್ಚ್‍ಗೆ ಬಂದು ಪೂಜಾವಿಧಿಗಳಲ್ಲಿ ಭಾಗವಹಿಸಿದರು

ಕನ್ನಡಪ್ರಭ ವಾರ್ತೆ ಮಂಗಳೂರು/ಉಡುಪಿ

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ವಿವಿಧ ಚರ್ಚ್‍ಗಳಲ್ಲಿ ಕ್ರಿಶ್ಚಿಯನ್‌ ಬಾಂಧವರು ಪಾಮ್ ಸಂಡೇ (ಗರಿಗಳ ಭಾನುವಾರ)ಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.ಮಂಗಳೂರು ನಗರದ ರೊಸಾರಿಯೋ ಚರ್ಚ್, ಮಿಲಾಗ್ರಿಸ್‌, ಲೇಡಿಹಿಲ್, ಅಶೋಕ ನಗರ, ಬಿಜೈ ಚರ್ಚ್, ಬಿಕರ್ನಕಟ್ಟೆ ಬಾಲಯೇಸು ಮಂದಿರ, ಕೂಳೂರು ಚರ್ಚ್ ಸೇರಿದಂತೆ ಮಂಗಳೂರು, ಉಡುಪಿ ಧರ್ಮಪ್ರಾಂತ್ಯದ ಎಲ್ಲ ಚರ್ಚ್‍ಗಳಲ್ಲಿ ಗರಿಗಳ ಹಬ್ಬದ ಆಚರಿಸುವ ಮೂಲಕ ಮುಂದೆ ಬರುವ ಪವಿತ್ರ ಗುರುವಾರ, ಶುಭ ಶುಕ್ರವಾರ (ಗುಡ್‍ಫ್ರೈಡೇ) ಹಾಗೂ ಈಸ್ಟರ್ ಹಬ್ಬಕ್ಕೆ ಪೂರ್ವ ಸಿದ್ಧತೆ ಮಾಡಿಕೊಂಡರು.

ಧರ್ಮಗುರುಗಳು ಚರ್ಚ್‍ಗಳಲ್ಲಿ ಪವಿತ್ರ ಕೃತಜ್ಞತಾ ಪೂಜೆಯ ಮೊದಲು ಗರಿಗಳನ್ನು ಪವಿತ್ರ ನೀರಿನಿಂದ ಶುದ್ಧೀಕರಿಸಿ, ಗರಿಗಳ ಪೂಜೆ ಮಾಡಿ ವಾಳೆಗಳ ಗುರಿಕಾರರ ಮೂಲಕ ಕಥೋಲಿಕ್ ಕುಟುಂಬಗಳಿಗೆ ಗರಿಗಳನ್ನು ಹಂಚಿದರು. ಈ ಗರಿಗಳನ್ನು ಮೆರವಣಿಗೆಯ ಮೂಲಕ ಹಿಡಿದುಕೊಂಡು ಭಕ್ತರು ಚರ್ಚ್‍ಗೆ ಬಂದು ಪೂಜಾವಿಧಿಗಳಲ್ಲಿ ಭಾಗವಹಿಸಿದರು. ಬಳಿಕ ಈ ಗರಿಗಳನ್ನು ಕ್ರೈಸ್ತ ಸಮುದಾಯದವರು ಶಿಲುಬೆ ಪ್ರತಿರೂಪ ರಚಿಸಿ ಮನೆಯಲ್ಲಿಟ್ಟುಕೊಳ್ಳುತ್ತಾರೆ.

ಪಾಮ್ ಸಂಡೇಯಂದು ಕರಾವಳಿಯ ಚರ್ಚ್‍ಗಳಲ್ಲಿ ವಿಶೇಷ ಕೃತಜ್ಞತಾ ಪೂಜೆ ಹಾಗೂ ಬೈಬಲ್‍ನಲ್ಲಿ ಹೇಳಿದ ಯೇಸುವಿನ ಕೊನೆಯ ದಿನಗಳ ಹಾದಿಯನ್ನು ಪ್ರಾರ್ಥನೆ ಹಾಗೂ ಕೀರ್ತನೆಗಳ ಮೂಲಕ ಭಕ್ತರಿಗೆ ಧರ್ಮಗುರುಗಳು ಪ್ರವಚನದ ಮೂಲಕ ತಿಳಿಯಪಡಿಸಿದರು. ಜತೆಗೆ ಬೈಬಲ್‍ನಲ್ಲಿರುವ ಪ್ರಮುಖ ವಿಚಾರಗಳನ್ನು ಇಂದಿನ ಆಧುನಿಕ ಸಮಾಜಕ್ಕೆ ಆಳವಡಿಸಿಕೊಂಡು ಕೆಲವೊಂದು ಚರ್ಚ್‍ಗಳಲ್ಲಿ ಸಂಜೆ ಹೊತ್ತು ಯೇಸುವಿನ ಜೀವನಧಾರಿತ ನಾಟಕಗಳನ್ನು ಪ್ರದರ್ಶಿಸಲಾಯಿತು.

ಉಡುಪಿ ವರದಿ: ಯೇಸು ಕ್ರಿಸ್ತರು ಜೆರುಸಲೇಂ ನಗರ ಪ್ರವೇಶಿಸಿದ ಸಂಕೇತವಾಗಿ ‘ಗರಿಗಳ ಭಾನುವಾರ ಹಬ್ಬ’ ಎಂದೇ ಪ್ರಸಿದ್ಧಿ ಪಡೆದಿರುವ ‘ಪಾಮ್ ಸಂಡೆ’ಯನ್ನು ಉಡುಪಿ ಜಿಲ್ಲಾದ್ಯಂತ ಕ್ರೈಸ್ತರು ಶ್ರದ್ಧಾಭಕ್ತಿಯಿಂದ ಆಚರಿಸಿದರು.

ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರು ಕೆಮ್ಮಣ್ಣು ಸಂತ ತೆರೆಸಾ ಚರ್ಚಿನಲ್ಲಿ ನಡೆದ ಪಾಮ್ ಸಂಡೆ ಧಾರ್ಮಿಕ ವಿಧಿವಿಧಾನದಲ್ಲಿ ಭಾಗವಹಿಸಿ ಸಂದೇಶ ನೀಡಿದರು. ಚರ್ಚಿನ ಪ್ರಧಾನ ಧರ್ಮಗುರು ಫಿಲಿಪ್ ನೆರಿ ಆರಾನ್ಹಾ, ಪೆರಂಪಳ್ಳಿ ಟ್ರಿನಿಟಿ ಸೆಂಟ್ರಲ್ ಸ್ಕೂಲ್ ಪ್ರಾಂಶುಪಾಲ ಡೊಮಿನಿಕ್ ಲೋಬೊ ಉಪಸ್ಥಿತರಿದ್ದರು.ಜಿಲ್ಲೆಯ ಎಲ್ಲ ಚರ್ಚುಗಳಲ್ಲಿ ಕ್ರೈಸ್ತರು ಬೆಳಗ್ಗಿನ ಪ್ರಾರ್ಥನಾ ವಿಧಿಯಲ್ಲಿ ಪಾಲ್ಗೊಂಡು ತೆಂಗಿನ ಗರಿಗಳನ್ನು ಹಿಡಿದು ಮುಖ್ಯ ರಸ್ತೆಗಳಲ್ಲಿ ಮೆರವಣಿಗೆಯಲ್ಲಿ ಸಾಗುವ ಮೂಲಕ ಯೇಸುವಿನ ಸ್ಮರಣೆ ಮಾಡಿದರು. ಚರ್ಚುಗಳಲ್ಲಿ ಯೇಸುವಿನ ಕಷ್ಟದ ದಿನಗಳನ್ನು ನೆನಪಿಸಿಕೊಂಡು ಬಲಿಪೂಜೆಯನ್ನು ನೆರವೇರಿಸಲಾಯಿತು.ಧರ್ಮಪ್ರಾಂತ್ಯ ಪ್ರಧಾನ ದೇವಾಲಯವಾದ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್‌ನಲ್ಲಿ ದೇವಾಲಯದ ಪ್ರಧಾನ ಧರ್ಮಗುರು ವಲೇರಿಯನ್ ಮೆಂಡೊನ್ಸಾ, ಧಾರ್ಮಿಕ ವಿಧಿ ವಿಧಾನಗಳ ನೇತೃತ್ವ ವಹಿಸಿದ್ದರೆ, ತೊಟ್ಟಂ ಸಂತ ಅನ್ನಮ್ಮ ದೇವಾಲಯಲ್ಲಿ ಧರ್ಮಗುರು ಡೆನಿಸ್ ಡೆಸಾ ಹಾಗೂ ಬೆಂಗಳೂರಿನ ಸಂತ ಪೀಟರ್ ಗುರುಮಠದ ಪ್ರಾಧ್ಯಾಪಕರಾದ ಡಾ.ಸುನೀಲ್ ಡಿಸೋಜ ಮತ್ತು ಡಿಕನ್ ಸ್ಟೀಫನ್ ರೊಡ್ರಿಗಸ್ ಉಪಸ್ಥಿತಿಯಲ್ಲಿ ಪಾಮ್ ಸಂಡೆಯ ಧಾರ್ಮಿಕ ವಿಧಿಗಳು ಜರುಗಿದವು. ಜಿಲ್ಲೆಯ ಎಲ್ಲ ಚರ್ಚ್‌ಗಳಲ್ಲಿ ಶ್ರದ್ಧಾಭಕ್ತಿಯಿಂದ ಆಯಾ ಚರ್ಚಿನ ಧರ್ಮಗುರುಗಳ ನೇತೃತ್ವದಲ್ಲಿ ಪಾಮ್ ಸಂಡೆ ಜರುಗಿತು.ಪಾಮ್ ಸಂಡೆ ಆಚರಣೆಯೊಂದಿಗೆ ‘ಕ್ರೈಸ್ತರ ಪವಿತ್ರ ಸಪ್ತಾಹ’ ಆರಂಭಗೊಳ್ಳುತ್ತದೆ. ಪವಿತ್ರ ಸಪ್ತಾಹವು ಕ್ರೈಸ್ತರಿಗೆ ಮಹತ್ವದಾಗಿದ್ದು, ಈ ಸಪ್ತಾಹದ ಗುರುವಾರ ತನ್ನ ಶಿಷ್ಯರೊಂದಿಗೆ ಯೇಸುವಿನ ಕೊನೆಯ ಭೋಜನ ಹಾಗೂ ಶಿಷ್ಯರ ಪಾದಗಳನ್ನು ತೊಳೆದ ದಿನವನ್ನು ನೆನೆದರೆ, ಶುಕ್ರವಾರ ಯೇಸುಕ್ರಿಸ್ತರ ಮರಣದ ದಿನವಾದ ‘ಗುಡ್ ಫ್ರೈಡೆ’ ಆಚರಿಸಲಾಗುತ್ತದೆ. ಅಂದು ಇಡೀ ದಿನ ಉಪವಾಸ ಮತ್ತು ಧ್ಯಾನದಲ್ಲಿ ಕ್ರೈಸ್ತರು ತಮ್ಮ ದಿನವನ್ನು ಕಳೆಯುತ್ತಾರೆ. ಶನಿವಾರ ಈಸ್ಟರ್ ಜಾಗರಣೆ ಮತ್ತು ಭಾನುವಾರ ಯೇಸುಕ್ರಿಸ್ತರ ಪುನರುತ್ಥಾನದ ಪ್ರಯುಕ್ತ ‘ಈಸ್ಟರ್ ಹಬ್ಬ’ ಆಚರಿಸಲಾಗುತ್ತದೆ.ಏನಿದು ‘ಪಾಮ್ ಸಂಡೇ’?ಯೇಸು ಕ್ರಿಸ್ತರು ಜೆರುಸಲೇಂ ನಗರವನ್ನು ಪ್ರವೇಶಿಸಿದಾಗ ಅಲ್ಲಿನ ಭಕ್ತರು ಒಲಿವ್ ಮರದ ಗರಿಗಳನ್ನು ಹಿಡಿದು ಯೇಸುವಿಗೆ ವೈಭವದಿಂದ ಸ್ವಾಗತಿಸಿದ ಸಂಕೇತವಾಗಿ ಜಗತ್ತಿನಾದ್ಯಂತ ಪಾಮ್ ಸಂಡೆ ಆಚರಿಸಲಾಗುತ್ತದೆ. ಕರಾವಳಿಯಲ್ಲಿ ಧರ್ಮಗುರುಗಳಿಂದ ಆಶೀರ್ವದಿಸಲ್ಪಟ್ಟ ತೆಂಗಿನ ಗರಿಗಳನ್ನು ಹಿಡಿದು ಕ್ರೈಸ್ತರು ಮೆರವಣಿಗೆಯಲ್ಲಿ ತೆರಳಿ ಪವಿತ್ರ ಬಲಿಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ.