ಸಾರಾಂಶ
ಕ್ರಿಸ್‌ಮಸ್ ಹಬ್ಬವು ಎಲ್ಲರಿಗೂ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ. ಕ್ರಿಸ್‌ಮಸ್ ಸಂಕೇತಿಸುವ ಸೌಹಾರ್ದತೆ ಮತ್ತು ಸಹಾನುಭೂತಿಯ ಹಬ್ಬವನ್ನು ಆಚರಿಸೋಣ ಮತ್ತು ಎಲ್ಲರೂ ಸಂತೋಷ ಮತ್ತು ಆರೋಗ್ಯಕರವಾಗಿರುವ ಜಗತ್ತಿಗಾಗಿ ಕೆಲಸ ಮಾಡೋಣವೆಂದು ಸಂದೇಶ ನೀಡಿದರು.
ಕನ್ನಡಪ್ರಭ ವಾರ್ತೆ ಕೋಲಾರ
ಶಾಂತಿ, ಪ್ರೀತಿ, ಮಮತೆಯ ಸಂದೇಶ ಸಾರಿದ ಏಸು ಕ್ರಿಸ್ತನ ಜನ್ಮದಿನದ ಪ್ರತೀಕವಾದ ಕ್ರಿಸ್‌ಮಸ್ ಹಬ್ಬವನ್ನು ಚರ್ಚ್‌ಗಳಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸುವ ಮೂಲಕ ಕ್ರೈಸ್ತ ಬಾಂಧವರು ಶ್ರದ್ಧಾ- ಭಕ್ತಿಯಿಂದ ಆಚರಿಸಿದರು.ನಗರದ ಮೆಥೋಡಿಸ್ಟ್ ಚರ್ಚ್‌ನಲ್ಲಿ ವಿಶೇಷ ಸಂದೇಶಕರಾದ ರೆವರೆಂಡ್ ಪಿ.ಶಾಂತಕುಮಾರ್ ಕ್ರಿಸ್ಮಸ್ ಹಬ್ಬದ ಸಂದೇಶದೊಂದಿಗೆ, ಆಶೀರ್ವಚನ ನೀಡಿ, ದೇವರು ನೀಡಿದ ಉದಾತ್ತ ವಿಚಾರಗಳಾದ ಎಲ್ಲರನ್ನೂ ಪ್ರೀತಿಸುವ, ಸಹಕಾರ, ತಾಳ್ಮೆ, ಕುಟುಂಬ ವ್ಯವಸ್ಥೆಯಲ್ಲಿ ಅನ್ಯೋನ್ಯತೆ, ಕ್ಷಮೆ, ವಿನಯತೆಯಂತಹ ವಿಚಾರಗಳನ್ನು ಮೈಗೂಡಿಸಿಕೊಂಡು ದೇವರೊಂದಿಗೆ ಬದುಕು ಸವಿಸಲು ಮುಂದಾಗಬೇಕು. ಶ್ರೀಸಾಮಾನ್ಯರಂತೆ ಹುಟ್ಟಿದ ಏಸು ಜಗತ್ತಿನಲ್ಲಿ ತನ್ನ ಸರಳತೆಯ ಮೂಲಕ ಪ್ರೀತಿ, ಶಾಂತಿ, ನೆಮ್ಮದಿ ಹಾಗೂ ಕ್ಷಮಿಸುವ ಗುಣವನ್ನು ಮೈಗೂಡಿಸಿಕೊಳ್ಳಲು ತಿಳಿಸಿದ್ದರು.
ಕ್ರಿಸ್‌ಮಸ್ ಹಬ್ಬವು ಎಲ್ಲರಿಗೂ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ. ಕ್ರಿಸ್‌ಮಸ್ ಸಂಕೇತಿಸುವ ಸೌಹಾರ್ದತೆ ಮತ್ತು ಸಹಾನುಭೂತಿಯ ಹಬ್ಬವನ್ನು ಆಚರಿಸೋಣ ಮತ್ತು ಎಲ್ಲರೂ ಸಂತೋಷ ಮತ್ತು ಆರೋಗ್ಯಕರವಾಗಿರುವ ಜಗತ್ತಿಗಾಗಿ ಕೆಲಸ ಮಾಡೋಣವೆಂದು ಸಂದೇಶ ನೀಡಿದರು.ಕ್ರಿಸ್‌ಮಸ್ ನಿಮಿತ್ತ ಮೆಥೋಡಿಸ್ಟ್ ಚರ್ಚ್‌ನಲ್ಲಿ ಧರ್ಮ ಗುರುಗಳು ಸಾಮೂಹಿಕ ಪ್ರಾರ್ಥನೆಗೆ ಮಾರ್ಗದರ್ಶನ ನೀಡಿದರು. ಏಸು ಕ್ಷಮೆಯನ್ನು ದೊಡ್ಡದೆಂದು ಹೇಳಿದ್ದಾನೆ. ಆತನ ಮಾರ್ಗದಲ್ಲಿ ನಡೆಯುವ ಮೂಲಕ ಎಲ್ಲರೂ ಸ್ವರ್ಗಸ್ಥರಾಗಬೇಕು ಎಂದು ನೆರೆದ ಭಕ್ತರಿಗೆ ಉಪದೇಶಿಸಿದರು.
ಕ್ರಿಸ್‌ಮಸ್ ಅಂಗವಾಗಿ ಕೋಲಾರದ ಸಂತ ಮೇರಿ ಚರ್ಚ್ ವಿದ್ಯುತ್ ದೀಪಗಳಿಂದ ಸಿಂಗಾರಗೊಂಡಿದ್ದು, ಏಸು ಕ್ರಿಸ್ತನ ಜೀವನ ಚರಿತ್ರೆ ಬಿಂಬಿಸುವ ರೀತಿಯಲ್ಲಿ ಚರ್ಚ್‌ನ ಆವರಣದಲ್ಲಿ ರೂಪಿಸಲಾಗಿದ್ದು, ನೂರಾರು ಮಂದಿ ವೀಕ್ಷಣೆಗೆ ಆಗಮಿಸಿದ್ದರು.ಇಲ್ಲಿಯೂ ವಿಶೇಷ ಪ್ರಾರ್ಥನೆಗೆ ವ್ಯವಸ್ಥೆ ಮಾಡಲಾಗಿತ್ತು.
ಕೋಲಾರ ನಗರ ಸೇರಿದಂತೆ ತಾಲೂಕಿನ ವಿವಿಧ ಚರ್ಚ್‌ಗಳನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು. ಕ್ರಿಸ್‌ಮಸ್ ಟ್ರೀಗಳನ್ನು ನಿರ್ಮಿಸಲಾಗಿತ್ತು. ಆಕರ್ಷಕವಾಗಿ ನಿರ್ಮಿಸಿದ್ದ ದನದ ಗೋದಲಿಗೂ ವಿಶೇಷ ಅಲಂಕಾರ ಮಾಡಲಾಗಿತ್ತು. ಪ್ರಾರ್ಥನೆ ಸಲ್ಲಿಸಿದ ಸಮುದಾಯದವರು ಏಸು ಪ್ರಭುವಿನ ಕೃಪೆಗೆ ಪಾತ್ರರಾದರು.