ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ಸೇಕ್ರೆಡ್ ಹಾರ್ಟ್ ಚರ್ಚ್ ಆವರಣದಲ್ಲಿ ನಿರ್ಮಿಸಲಾಗಿರುವ ವಿಶಿಷ್ಟ ಶೈಲಿಯ ಶಿಲುಬೆ ಹಾದಿಯ 14 ಸ್ಥಳಗಳ ನಿರ್ಮಾಣ ಏಷ್ಯಾದ ಎತ್ತರದ ಚರ್ಚ್ ಎಂಬ ಖ್ಯಾತಿಗೆ ಮತ್ತೊಂದು ಮರೆಗು ತಂದಿದೆ.ಕ್ರೈಸ್ತ ಧರ್ಮದ ಪವಿತ್ರ ತಾಣವಾಗಿರುವ ಸೇಕ್ರೆಡ್ ಹಾರ್ಟ್ ಚರ್ಚ್ ಸರ್ವಧರ್ಮ, ಸಮನ್ವಯತೆ, ಧಾರ್ಮಿಕ ಭಕ್ತಿ ಭಾವಗಳ ಸಂಗಮಕ್ಕೆ ಸಾಕ್ಷಿಯಾಗಿದೆ. ಮೂರು ವರ್ಷಗಳ ಹಿಂದೆ ಚರ್ಚ್ ಮಹಾದ್ವಾರದಲ್ಲಿ ಯೇಸು ಕಿಸ್ತನ ಬೃಹತ್ ಶಿಲ್ಪವನ್ನು ಅನಾವರಣಗೊಳಿಸಿದ್ದು, ಚರ್ಚ್ ಸೌಂದರ್ಯವನ್ನು ಹೆಚ್ಚಿಸಿದೆ. ಶಿವಮೊಗ್ಗದ ಪ್ರವಾಸಿ ತಾಣವಾಗಿ ಸೇಕ್ರೆಡ್ ಹಾರ್ಟ್ ಚರ್ಚ್ ಗುರುತಿಸಿಕೊಂಡಿದೆ. 2000 ವರ್ಷಗಳ ಹಿಂದೆ ಯೇಸುಕ್ರಿಸ್ತನ ಜೀವನದ ಅಂತಿಮ ಪ್ರಯಣವು ಜೆರುಸಲೇಂನ ಅಂದಿನ ಅರಸ ಪಿಲಾತನು ಯೇಸುಕ್ರಿಸ್ತನಿಗೆ ಮರಣ ದಂಡನೆ ವಿಧಿಸುವುದರ ಮೂಲಕ ಆರಂಭವಾಗುತ್ತದೆ. ಪಿಲಾತನ ಅರಮನೆಯಿಂದ ಕಲ್ವಾರಿ ಬೆಟ್ಟದವರೆಗೆ ಸಾಗಿದ ವಿವಿಧ ಹಂತದ ಘಟನೆಗಳು ಶಿಲಬೆ ಹಾದಿಯಲ್ಲಿ ನಿರ್ಮಿಸಲಾಗಿದೆ.
ಪ್ರೀತಿ, ಸಾಮರಸ್ಯದ ದ್ಯೋತಕ ಕ್ರಿಸ್‌ಮಸ್:ಹೊಸ ವರ್ಷಾಚರಣೆಗೆ ಮುಂಚಿತವಾಗಿ ಬರುವ ಕ್ರಿಸ್‌ಮಸ್ ಹಬ್ಬ ಏಸುಕ್ರಿಸ್ತನ ಜನ್ಮದಿನದ ದ್ಯೋತಕ. ಜನರು ತಮ್ಮೆಲ್ಲಾ ನೋವು, ನಿರಾಸೆಗಳನ್ನು ಮರೆತು ಹಬ್ಬದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಕ್ರಿಸ್‌ಮಸ್ ಹಬ್ಬಕ್ಕೆ ನಾಲ್ಕು ವಾರಗಳು ಮುಂಚಿತವಾಗಿಯೇ ಕ್ರೈಸ್ತರು ಅಧ್ಯಾತ್ಮಿಕ ಸಿದ್ಧತೆಯಲ್ಲಿ ತೊಡಗುತ್ತಾರೆ. ಈ ಕಾಲವನ್ನು ಆದ್ವೆಂತ್ ಎಂದು ಕರೆಯುತ್ತಾರೆ. ಆದ್ವೆಂತ್ ಎಂದರೆ ಪ್ರಭು ಯೇಸು ಕ್ರಿಸ್ತರ ಆಗಮನವನ್ನು ಎದುರು ನೋಡುವುದು. ಆದ್ವೆಂತ್ ಕಾಲದ ನಾಲ್ಕು ವಾರಗಳು ಪ್ರಾರ್ಥನೆಯಲ್ಲಿ ಪಾಲ್ಗೊಂಡು ಸಿದ್ಧತೆ ಮಾಡುತ್ತಾರೆ.
ಪಂಗಡ ಬೇರೆ, ಆಚರಣೆ ಒಂದೇ:ಹಬ್ಬದ ಆಚರಣೆ ಎಲ್ಲ ಪ್ರದೇಶಗಳಲ್ಲೂ ಒಂದೇ ರೀತಿ ಇರುವುದು ವಿಶೇಷ. ಭಕ್ತಿ ಸಮರ್ಪಣೆಗಾಗಿ ಪ್ರತಿ ಚರ್ಚ್‌ನಲ್ಲೂ ವಿಶೇಷ ಪ್ರಾರ್ಥನೆ ನಡೆಸಲಾಗುತ್ತದೆ. ಕ್ರೈಸ್ತ ಧರ್ಮೀಯರಲ್ಲಿ ಕ್ಯಾಥೋಲಿಕ್, ಪ್ರೊಟೆಸ್ಟೆಂಟ್ ಎಂಬ ಪಂಗಡಗಳಿದ್ದು, ಈ ಎರಡೂ ಪಂಗಡದವರಿಗೂ ಕ್ರಿಸ್‌ಮಸ್ ಆಚರಣೆ, ಸಂಭ್ರಮದಲ್ಲಿ ವ್ಯತ್ಯಾಸ ಇಲ್ಲ. ಎರಡೂ ಪಂಗಡದವರೂ ಒಂದೇ ರೀತಿಯ ಸಂಪ್ರದಾಯ ಪಾಲಿಸುತ್ತಾರೆ. ಧರ್ಮ ಗುರುಗಳ ಮೇಲೆ ನಂಬಿಕೆ ಇಟ್ಟಿದ್ದಾರೆ.
ಕ್ರಿಸ್‌ಮಸ್ ಹಿಂದಿನ ದಿನ ಎಲ್ಲ ಚರ್ಚ್‌ಗಳೂ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತವೆ. ಆವರಣದಲ್ಲಿ ಗೋದಲಿ ಅನಾವರಣಗೊಳುತ್ತದೆ. ಮೇರಿ ಮಾತೆ, ಯೇಸು ದೇವರ ಜೀವನ ಪಥ ತೆರೆದುಕೊಳ್ಳುತ್ತದೆ.ವಿಶೇಷ ಪ್ರಾರ್ಥನೆ:ಪಾಪ ನಿವೇದನೆ ಮಾಡಿಕೊಳ್ಳುವ ಸಲುವಾಗಿ ಹಬ್ಬಕ್ಕೆ ಮುನ್ನ ಚರ್ಚ್‌ನಲ್ಲಿ ವಿಶೇಷ ಪ್ರಾರ್ಥನೆಗೆ ಆವಕಾಶ ಕಲ್ಪಿಸಲಾಗುತ್ತದೆ. ಮಧ್ಯರಾತ್ರಿ ಚರ್ಚ್‌ಗಳಲ್ಲಿ ಯೇಸುವಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಈ ಸಂದರ್ಭದಲ್ಲಿ ಭಾಗವಹಿಸಿದ ಎಲ್ಲರಿಗೂ ಕೇಕ್ ವಿತರಿಸಲಾಗುತ್ತದೆ. ಹಬ್ಬಕ್ಕೂ ಮುನ್ನ ಮನೆ ಮನೆಗೆ ಕೇಕ್ ಹಾಗೂ ಸಿಹಿ ತಿಂಡಿಯನ್ನು ಹಂಚಲಾಗಿದೆ. 24ರಂದು ರಾತ್ರಿ 12 ಗಂಟೆಗೆ ಚರ್ಚ್‌ನಲ್ಲಿ ವಿಶೇಷ ಪೂಜೆ ಬಳಿಕ ಸಂಭ್ರಮ ಇಮ್ಮಡಿಗೊಳ್ಳುತ್ತದೆ. ಬೆಳಗಿನ ಜಾವದಿಂದಲೇ ಸಂಭ್ರಮಾಚರಣೆ ಗರಿಗೆದರುತ್ತದೆ. ಮನೆಮನೆಯಲ್ಲಿ ಬಗೆಬಗೆಯ ಕೇಕ್‌ಗಳು, ತಿಂಡಿ ತಿನಿಸು ಸಿದ್ಧಪಡಿಸಲಾಗುತ್ತದೆ. ಹೊಸ ಉಡುಪು ಧರಿಸಿ ಸಂಭ್ರಮ ಪಡುತ್ತಾರೆ. ಮಕ್ಕಳು ಬಣ್ಣ ಬಣ್ಣದ ಉಡುಪಿನಲ್ಲಿ ಕಂಗೊಳಿಸುತ್ತಾರೆ. ಪ್ರತಿ ಚರ್ಚ್‌ಗಳಲ್ಲೂ ವಿಶೇಷ ಪ್ರಾರ್ಥನೆ ನಡೆಯುತ್ತದೆ. ಇಂತಹ ಪ್ರಾರ್ಥನೆಯಲ್ಲಿ ಕ್ರೈಸ್ತರಲ್ಲದೇ ಇತರೆ ಸಮುದಾಯಗಳ ಜನರೂ ಭಾಗವಹಿಸುವುದು ವಿಶೇಷ.
ಬಿ.ಎಚ್. ರಸ್ತೆಯ ಪ್ರಸಿದ್ಧ ಪವಿತ್ರ ಹೃದಯ ಪ್ರಧಾನಾಲಯ, ಶಿವಪ್ಪ ನಾಯಕ ಹೂವಿನ ಮಾರುಕಟ್ಟೆಯ ಬಳಿ ಇರುವ ಸಂತ ಥಾಮಸ್ ದೇವಾಲಯ, ಶರಾವತಿ ನಗರದ ಏಸು ಬಾಲರ ಪುಣ್ಯ ಕ್ಷೇತ್ರ, ಗೋಪಾಳದಲ್ಲಿ ಗುಡ್ ಶಫರ್ಡ್, ಭದ್ರಾವತಿಯ ನ್ಯೂಟೌನ್‌ನ ಅಮಲೋದ್ಭವಿ ಮಾತೆಯ ದೇವಾಲಯ, ಶತಮಾನದ ಇತಿಹಾಸವುಳ್ಳ ಸಾಗರದ ಸಂತ ಜೋಸೆಫರ ದೇವಾಲಯ, ತೀರ್ಥಹಳ್ಳಿಯ ಸೇಂಟ್ ಫಿಲೊಮಿನಾ ಚರ್ಚ್, ಲೂರ್ದು ಮಾತೆಯ ಚರ್ಚ್, ಹೊಸನಗರದ ಸೇಂಟ್ ಅಂಥೋನಿ ಚರ್ಚ್, ಶಿಕಾರಿಪುರದ ಪುಷ್ಪ ದೇವಾಲಯ, ಸೊರಬದ ಸಂತ ಸೆಬಾಸ್ಟಿಯನ್ ಚರ್ಚ್ ಸೇರಿ ಜಿಲ್ಲೆಯ ಎಲ್ಲ ಚರ್ಚ್‌ಗಳೂ ಸಂಭ್ರಮಾಚರಣೆಗೆ ಸಿದ್ಧಗೊಂಡಿವೆ.ಕ್ರಿಸ್‌ಮಸ್ ಆಚರಣೆ ಹಿನ್ನೆಲೆ ಕ್ರೈಸ್ತರ ಮನೆಗಳಲ್ಲಿ, ಚರ್ಚ್‌ಗಳಲ್ಲಿ ಕ್ರಿಸ್ತನ ಜನ್ಮಸ್ಥಳವಾದ ಗೋದಲಿಯನ್ನು ನಿರ್ಮಿಸಲಾಗಿದೆ. ಆಕರ್ಷಕವಾಗಿ ಗೋದಲಿ ನಿರ್ಮಿಸಿದವರಿಗೆ ಬಹುಮಾನ ಕೂಡ ಇಡಲಾಗಿದೆ. ಜೊತೆಗೆ ಮನೆ ಮನೆಯಲ್ಲಿ ಹಾಕುವ ವಿಭಿನ್ನ ರೀತಿಯ ಕೈಯಿಂದ ನಿರ್ಮಿಸಿದ ಅತ್ಯತ್ತಮ ನಕ್ಷತ್ರಗಳಿಗೂ ಬಹುಮಾನ ನಿಗದಿಪಡಿಸಲಾಗಿದೆ. ಒಟ್ಟಾರೆಯಾಗಿ ಮಲೆನಾಡು ಜಿಲ್ಲೆ ಶಿವಮೊಗ್ಗದಲ್ಲೀಗ ಕ್ರಿಸ್‌ಮಸ್ ಸಂಭ್ರಮ ಝಗಮಗಿಸುತ್ತಿದೆ.
- - - -25ಎಸ್‌ಎಂಜಿಕೆಪಿ06: ಶಿವಮೊಗ್ಗದ ಬಿ.ಎಚ್.ರಸ್ತೆಯಲ್ಲಿರುವ ಸೇಕ್ರೆಡ್ ಹಾರ್ಟ್ ಚರ್ಚ್ ಕ್ರಿಸ್‌ಮಸ್ ಹಬ್ಬ ಆಚರಣೆ ಅಂಗವಾಗಿ ದೀಪಾಲಂಕಾರದಿಂದ ಕಂಗೊಳಿಸುತ್ತಿರುವುದು.