ಪ್ರೀತಿ, ಶಾಂತಿಯ ಸಂದೇಶ ಸಾರುವ ಕ್ರಿಸ್‌ಮಸ್: ಪೌಲ್ ಡಿಸೋಜಾ

| Published : Dec 26 2024, 01:01 AM IST

ಸಾರಾಂಶ

ಬಾಳೆಹೊನ್ನೂರು, ಜಗತ್ತಿಗೆ ಪ್ರೀತಿ, ಶಾಂತಿ ಸಂದೇಶ ಸಾರುವ ಹಬ್ಬ ಕ್ರಿಸ್‌ಮಸ್ ಆಗಿದೆ ಎಂದು ಪಟ್ಟಣದ ವಿಜಯಮಾತೆ ಚರ್ಚ್ ಧರ್ಮಗುರು ಪೌಲ್ ಡಿಸೋಜಾ ಹೇಳಿದರು. ಪಟ್ಟಣದ ವಿಜಯಮಾತೆ ಚರ್ಚ್ನಲ್ಲಿ ಕ್ರಿಸ್‌ಮಸ್ ಅಂಗವಾಗಿ ಬುಧವಾರ ವಿಶೇಷ ಬಲಿಪೂಜೆ ನೆರವೇರಿಸಿ ಆಶೀರ್ವಚನ ನೀಡಿದ ಅವರು, ಕ್ರಿಸ್ತರ ಜನನ ಕಾಲಘಟ್ಟದಲ್ಲಿ ಅವರ ಜೀವನವೇ ವಿಶೇಷ. ಶೋಷಿತರು, ಬಡವರ ಒಳಿತಿಗಾಗಿ ದೇವರಾಗಿ ಬಂದವರು ಎಂದರು.

ಪಟ್ಟಣದ ವಿಜಯಮಾತೆ ಚರ್ಚ್ನಲ್ಲಿ ಕ್ರಿಸ್‌ಮಸ್ ಅಂಗವಾಗಿ ಬುಧವಾರ ವಿಶೇಷ ಬಲಿಪೂಜೆ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಜಗತ್ತಿಗೆ ಪ್ರೀತಿ, ಶಾಂತಿ ಸಂದೇಶ ಸಾರುವ ಹಬ್ಬ ಕ್ರಿಸ್‌ಮಸ್ ಆಗಿದೆ ಎಂದು ಪಟ್ಟಣದ ವಿಜಯಮಾತೆ ಚರ್ಚ್ ಧರ್ಮಗುರು ಪೌಲ್ ಡಿಸೋಜಾ ಹೇಳಿದರು. ಪಟ್ಟಣದ ವಿಜಯಮಾತೆ ಚರ್ಚ್ನಲ್ಲಿ ಕ್ರಿಸ್‌ಮಸ್ ಅಂಗವಾಗಿ ಬುಧವಾರ ವಿಶೇಷ ಬಲಿಪೂಜೆ ನೆರವೇರಿಸಿ ಆಶೀರ್ವಚನ ನೀಡಿದ ಅವರು, ಕ್ರಿಸ್ತರ ಜನನ ಕಾಲಘಟ್ಟದಲ್ಲಿ ಅವರ ಜೀವನವೇ ವಿಶೇಷ. ಶೋಷಿತರು, ಬಡವರ ಒಳಿತಿಗಾಗಿ ದೇವರಾಗಿ ಬಂದವರು ಎಂದರು.ಜನರಲ್ಲಿ ಪರಸ್ಪರ ಶಾಂತಿ, ಸಮಾಧಾನ, ನೆಮ್ಮದಿ ನೀಡುವ ಮಹಾ ಪುರುಷರಾದ ಅವರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು. ಕ್ರಿಸ್‌ಮಸ್ ಹಬ್ಬ ಎಲ್ಲ ಧರ್ಮಗಳ ಮತ್ತು ಸಮಾಜದ ಎಲ್ಲಾ ಪಂಗಡಗಳಿಗೆ ಒಳಿತು ಬಯಸುವುದಾಗಿದೆ. ದೇಶದಲ್ಲಿ ಸುಖ ಶಾಂತಿ ದೊರಕಲಿ. ಪ್ರೀತಿ ಪ್ರೇಮ, ಹಿರಿಯರು ಗುರುಗಳು ಎಂಬ ಭಾವನೆಯೊಂದಿಗೆ ಮನುಷ್ಯನು ಉತ್ತಮ ಜೀವನದೆಡೆ ಹೋಗುವಂತೆ ಕ್ರಿಸ್ತರು ಆಶೀರ್ವದಿಸಲಿ. ಏಸುಕ್ರಿಸ್ತರು ತ್ಯಾಗ, ಸೇವೆ ಕ್ಷಮೆಯುಳ್ಳವಾಗಿದ್ದರು. ಇವರು ಎಂದಿಗೂ ಅಧಿಕಾರ ವರ್ಗದ ಶ್ರೀಮಂತ ವರ್ಗದವರ ಪರವಾಗಿ ಇರಲಿಲ್ಲ. ಶೋಷಿತರ, ಬಡವರ ಭರವಸೆ ಬೆಳಕಾಗಿದ್ದರು. ಕ್ರಿಸ್ತರ ಬದುಕು ಇನ್ನೊಬ್ಬರ ನೋವು ಕಡಿಮೆ ಮಾಡಿ, ಕಷ್ಟದಲ್ಲಿರುವವರ ಕಣ್ಣೀರನ್ನು ಒರೆಸುವ ಕೆಲಸವಾಗಬೇಕು ಎಂಬುದು ಅವರ ಆಸೆಯಾಗಿತ್ತು ಎಂದರು.

ಕಾರ್ಕಳದ ಧರ್ಮಗುರು ಜಾನ್ ಪ್ರಕಾಶ್ ಪಿರೇರಾ, ವಿಜಯಮಾತೆ ಚರ್ಚ್ ಕಿರಿಯ ಧರ್ಮಗುರು ಕೀರ್ತಿಕಿರಣ್ ಹಾಜರಿದ್ದರು. --ಬಾಕ್ಸ್--ಬಾಳೆಹೊನ್ನೂರಿನಲ್ಲಿ ಕ್ರಿಸ್‌ಮಸ್ ಸಂಭ್ರಮ

ಬಾಳೆಹೊನ್ನೂರು: ಹೋಬಳಿಯಾದ್ಯಂತ ಬುಧವಾರ ಕ್ರಿಶ್ಚಿಯನ್ ಬಾಂಧವರು ಎಲ್ಲೆಡೆ ಸಡಗರ, ಸಂಭ್ರಮದಿಂದ ಕ್ರಿಸ್‌ಮಸ್ ಹಬ್ಬ ಆಚರಿಸಿದರು. ಕ್ರೈಸ್ತಬಾಂಧವರು ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ತಮ್ಮ ಮನೆಗಳ ಮುಂದೆ ಆಕರ್ಷಕ ಏಸುಕ್ರಿಸ್ತ ಜನನದ ವೃತ್ತಾಂತ ತಿಳಿಸುವ ಗೋದಲಿಗಳನ್ನು ನಿರ್ಮಿಸಿ ನಾನಾ ಬಗೆಯ ಅಲಂಕಾರ ಮಾಡಿ ನಕ್ಷತ್ರ, ಕ್ರಿಸ್‌ಮಸ್ ಟ್ರೀ, ಬಗೆಬಗೆ ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದರು. ಬುಧವಾರ ಬೆಳಿಗ್ಗೆ ಪಟ್ಟಣದ ವಿಜಯಮಾತೆ ಚರ್ಚಿನಲ್ಲಿ ಕ್ರೈಸ್ತ ಬಾಂಧವರು ಧರ್ಮಗುರು ಪೌಲ್ ಡಿಸೋಜಾ ನೇತೃತ್ವದಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿ ಮೇಣದಬತ್ತಿಗಳನ್ನು ಹಚ್ಚಿ ಏಸುಕ್ರಿಸ್ತನಿಗೆ ನಮಿಸಿದರು ಮತ್ತು ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡು ಕೇಕ್ ಹಾಗೂ ಸಿಹಿತಿಂಡಿ ಹಂಚಿ ಸಂಭ್ರಮಿಸಿದರು.

ಕ್ರಿಸ್‌ಮಸ್ ಮುನ್ನಾದಿನವಾದ ಮಂಗಳವಾರ ರಾತ್ರಿಯೂ ಕ್ರಿಸ್‌ಮಸ್ ಈವ್ ಅಂಗವಾಗಿ ನೂರಾರು ಸಂಖ್ಯೆಯಲ್ಲಿ ಕ್ರೈಸ್ತರು ಚರ್ಚಿನಲ್ಲಿ ಪ್ರಾರ್ಥನೆ ಸಲ್ಲಿಸಿ, ಕ್ರಿಸ್ತ ಜನನದ ಕುರಿತು ಗೀತೆಗಳನ್ನು ಹಾಡಿದರು, ಏಸುವಿನ ಸಂದೇಶ, ಹಿತವಚನಗಳನ್ನು ವಾಚಿಸಿ ಸಂಭ್ರಮಿಸಿದರು. ವಿಜಯಮಾತೆ ಚರ್ಚ್ ಅನ್ನು ಬಗೆಬಗೆಯ ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದು ಎಲ್ಲರ ಗಮನ ಸೆಳೆಯುತಿತ್ತು. ಸಮೀಪದ ಮಾಗುಂಡಿ, ಕಡಬಗೆರೆ, ಗೋರಿಗಂಡಿ ಮುಂತಾದೆಡೆ ಸಹ ಚರ್ಚ್ಗಳಲ್ಲಿ ಕ್ರಿಸ್‌ಮಸ್ ಸಂಭ್ರಮ ಸಡಗರದಿಂದ ನಡೆಯಿತು.೨೫ಬಿಹೆಚ್‌ಆರ್ ೧:

ಬಾಳೆಹೊನ್ನೂರಿನ ವಿಜಯಮಾತೆ ಚರ್ಚ್ ಆವರಣದಲ್ಲಿ ಕ್ರಿಸ್ಮಸ್ ಹಬ್ಬದ ಅಂಗವಾಗಿ ನಡೆದ ನಿರ್ಮಿಸಿರುವ ಏಸು ಕ್ರಿಸ್ತರ ಜನನ ವೃತ್ತಾಂತದ ಗೋದಲಿ. ೨೫ಬಿಹೆಚ್‌ಆರ್ ೨:

ಬಾಳೆಹೊನ್ನೂರಿನ ವಿಜಯಮಾತೆ ಚರ್ಚ್ ಅನ್ನು ಕ್ರಿಸ್‌ಮಸ್ ಹಬ್ಬದ ಹಿನ್ನೆಲೆಯಲ್ಲಿ ವಿವಿಧ ವಿದ್ಯುತ್ ದೀಪಗಳಿಂದ ಅಲಂಕರಿಸಿರುವುದು.