ಸಾರಾಂಶ
ಕನಕಗಿರಿ: ನ. ೯ರಂದು ನಡೆಯುವ ಜಿಲ್ಲಾ ಮಟ್ಟದ ಚುಟುಕು ಸಾಹಿತ್ಯ ಪರಿಷತ್ತಿನ ೧೧ನೇ ಸಮ್ಮೇಳನದಲ್ಲಿ ನೂರು ಕವಿಗಳಿಗೆ ಕವಿತೆ ವಾಚಿಸಲು ಅವಕಾಶ ನೀಡಲಾಗುವುದು ಎಂದು ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ರುದ್ರಪ್ಪ ಭಂಡಾರಿ ಹೇಳಿದರು.
ಅವರು ಪಟ್ಟಣದ ಪ್ರವಾಸಿ ಮಂದಿರಲ್ಲಿ ಹಮ್ಮಿಕೊಂಡಿದ್ದ ಚುಟುಕು ಸಾಹಿತ್ಯ ಪರಿಷತ್ತಿನ ೧೧ನೇ ಜಿಲ್ಲಾ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಭಾನುವಾರ ಮಾತನಾಡಿ, ಯಲಬುರ್ಗಾ ತಾಲೂಕಿನ ಕರಮುಡಿ ಗ್ರಾಮದ ವೀರಣ್ಣ ವಾಲಿ ಅವರು ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದು, ಸ್ನಾತಕೋತ್ತರ ಪದವಿ ಮುಗಿಸಿರುವ ಇವರು, ಶಿಕ್ಷಕರಾಗಿ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ್ದಾರೆ.ಇನ್ನೂ ಆಷಾಢ ಭೂತಿಗಳು, ಮೌನ ನಿನಾದ, ನಮ್ಮ ನೆಲ-ನಮ್ಮ ಜನ, ಲೇಖನ ಮಾಲೆ ಸೇರಿದಂತೆ ಅನೇಕ ಕೃತಿ ರಚಿಸಿದ್ದಾರೆ. ಹೀಗೆ ಅನೇಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಾಲಿ ಅವರನ್ನು ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಚುಟುಕು ಸಾಹಿತ್ಯ ಅರ್ಥಗರ್ಭಿತವಾಗಿರುವುದರಿಂದ ಯುವ ಮನಸ್ಸುಗಳು ಚುಟುಕ ಸಾಹಿತ್ಯ ಇಷ್ಟಪಡುತ್ತಾರೆ. ಕವಿ, ಸಾಹಿತಿ, ಸಂಶೋಧಕರಾಗಲು ಚುಟುಕು ಸಾಹಿತ್ಯ ಅನುಕೂಲವಾಗಿದೆ. ಈ ಅರ್ಥಪೂರ್ಣ ಕಾರ್ಯಕ್ರಮಕ್ಕೆ ನ. ೯ರಂದು ನಡೆಯುವ ಸಮ್ಮೇಳನದಲ್ಲಿ ಕನ್ನಡಾಭಿಮಾನಿಗಳು, ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.ಪರಿಷತ್ತಿನ ತಾಲೂಕು ಘಟಕದ ಗೌರವಾಧ್ಯಕ್ಷ ದುರ್ಗಾದಾಸ ಯಾದವ ಮಾತನಾಡಿ, ಮೊಬೈಲ್ ಬಳಕೆಯಿಂದ ಸಾಹಿತ್ಯ ಕಣ್ಮರೆಯಾಗುವ ಕಾಲಘಟ್ಟದಲ್ಲಿ ನಾವಿದ್ದೇವೆ. ಕನ್ನಡ ನಾಡು, ನುಡಿ, ಸಂಸ್ಕೃತಿ, ಪರಂಪರೆ ಎತ್ತಿ ಹಿಡಿಯುವ ನಿಟ್ಟಿನಲ್ಲಿ ಇಂದಿನ ಯುವ ಸಮೂಹ ಸಾಹಿತ್ಯ ಬೆಳೆಸಬೇಕಾಗಿದೆ. ಸಾಹಿತ್ಯದಿಂದ ಬೇಕಾದ್ದನ್ನು ಸಾಧಿಸಬಹುದಾಗಿದ್ದು, ಕನ್ನಡಕ್ಕೆ ತನ್ನದೆ ಆದ ಶಕ್ತಿ ಇದೆ. ಹೀಗಾಗಿ ಕನ್ನಡದ ಕವಿಗಳಿಗೆ ಹೆಚ್ಚು ಜ್ಞಾನಪೀಠ ದೊರಕಿವೆ ಎಂದು ಸ್ಮರೀಸಿದರು.
ಪದಾಧಿಕಾರಿಗಳ ಆಯ್ಕೆ:ಚುಟುಕು ಸಾಹಿತ್ಯ ಪರಿಷತ್ತಿಗೆ ತಾಲೂಕು ಮಟ್ಟದ ಪದಾಧಿಕಾರಿ ಆಯ್ಕೆಯಾಗಿದ್ದು, ಗೌರವಾಧ್ಯಕ್ಷರಾಗಿ ದುರ್ಗಾದಾಸ ಯಾದವ, ಅಧ್ಯಕ್ಷರಾಗಿ ಶರಣಪ್ಪ ಮಹಿಪತಿ, ಉಪಾಧ್ಯಕ್ಷರಾಗಿ ಕೊಟ್ರಬಸಯ್ಯ ಎಂ, ಗೀತಾ ಪಾಟೀಲ್, ಗೌಸಪಾಷ, ಕೋಶಾಧ್ಯಕ್ಷರಾಗಿ ಹನುಮೇಶ ಜನಾದ್ರಿ, ಪ್ರಧಾನ ಕಾರ್ಯದರ್ಶಿಯಾಗಿ ದೀಪಾ ಉಲ್ಲಾಸ, ಸಹ ಕಾರ್ಯದರ್ಶಿಗಳಾಗಿ ಆನಂದ್ ರಾವಣಕಿ ತಿಪ್ಪನಾಳ, ಲಕ್ಷ್ಮಿಕಾಂತ್ ವಡಿಕಿ, ಶ್ರೀನಿವಾಸ ಪೂಜಾರ್, ಸಂಘಟನಾ ಕಾರ್ಯದರ್ಶಿ ವೆಂಕಟೇಶರೆಡ್ಡಿ, ವೀರೇಶಯ್ಯಸ್ವಾಮಿ, ವಿನಯ ಪತ್ತಾರ್, ವಡಿಕಿಗೌಡ, ಬಸವರಾಜ ಕಲ್ಲೂರ ನವಲಿ, ಸಾಂಸ್ಕೃತಿಕ ಮಹಿಳಾ ಪ್ರತಿನಿಧಿಗಳಾಗಿ ಪರ್ವಿನ್, ಮುಮ್ತಾಜ್, ಮಾಧ್ಯಮ ಪ್ರತಿನಿಧಿಗಳಾಗಿ ಪ್ರಹ್ಲಾದರೆಡ್ಡಿ, ಹೊನ್ನೂರ ಹುಸೇನ್, ಹುಲಿಗೇಶ ಉಪ್ಪಾರ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ವೆಂಕೋಬ ಪೂಜಾರ್, ಪಂಪನಗೌಡ ಬನ್ನಿಮರದ, ಮೆಹಬೂಬ ಗಂಗಾವತಿ, ಕಿರಣ್ ಬೊಂದಾಡೆ, ವಿರೇಶ್ ತಳವಾರ, ಗೌರವ ಸಲಹೆಗಾರರಾಗಿ ಶಿವಾನಂದ ಬೆಲ್ಲದ, ಮಲ್ಕೇಶ ಕೋಟೆ, ಹನುಮೇಶ ಮಹಿಪತಿ, ಸೋಮಶೇಖರಯ್ಯಸ್ವಾಮಿ, ಮಧುಸೂದನರೆಡ್ಡಿ, ಮಂಜುನಾಥ ಬೈಲ್ ಪತ್ತಾರ್, ಶೇಖರಸಿಂಗ ರಜಪೂತ್ ನೇಮಕ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ರುದ್ರಪ್ಪ ಭಂಡಾರಿ ತಿಳಿಸಿದ್ದಾರೆ.