ಡಿಜಿಪಿ ರಾಮಚಂದ್ರರಾವ್ ವಿರುದ್ಧ ಕೇಳಿ ಬಂದಿರುವ ಲೈಂಗಿಕ ಹಗರಣದ ಆರೋಪ ಪ್ರಕರಣವನ್ನು ಅಪರಾಧ ತನಿಖಾ ಇಲಾಖೆಯ (ಸಿಐಡಿ) ವಿಚಾರಣೆಗೆ ಒಪ್ಪಿಸುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಡಿಜಿಪಿ ರಾಮಚಂದ್ರರಾವ್ ವಿರುದ್ಧ ಕೇಳಿ ಬಂದಿರುವ ಲೈಂಗಿಕ ಹಗರಣದ ಆರೋಪ ಪ್ರಕರಣವನ್ನು ಅಪರಾಧ ತನಿಖಾ ಇಲಾಖೆಯ (ಸಿಐಡಿ) ವಿಚಾರಣೆಗೆ ಒಪ್ಪಿಸುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.ವಿಧಾನಸಭಾ ಅಧಿವೇಶನದಲ್ಲಿ ಡಿಜಿಪಿ ಲೈಂಗಿಕ ಹಗರಣದಿಂದ ಮುಜುಗರ ತಪ್ಪಿಸಿಕೊಳ್ಳಲು ಸಿಐಡಿ ವಿಚಾರಣೆಗೆ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದ್ದು, ಈ ಸಂಬಂಧ ಗುರುವಾರ ಅಧಿಕೃತ ಆದೇಶ ಹೊರಬೀಳಬಹುದು. ಸಿಐಡಿ ವಿಚಾರಣಾ ವರದಿ ಬಳಿಕ ಮುಂದಿನ ಕಾನೂನು ಕ್ರಮ ಜರುಗಿಸುವ ಬಗ್ಗೆ ಸರ್ಕಾರ ಮಟ್ಟದಲ್ಲಿ ಚರ್ಚೆ ನಡೆದಿದೆ ಎಂದು ಮೂಲಗಳು ಹೇಳಿವೆ.
ಕರ್ತವ್ಯದ ಅವಧಿಯಲ್ಲೇ ಸಮವಸ್ತ್ರ ಧರಿಸಿ ಮಹಿಳೆಯರ ಜತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಆರೋಪ ರಾಮಚಂದ್ರ ರಾವ್ ವಿರುದ್ಧ ಕೇಳಿ ಬಂದಿದೆ. ಈ ಬಗ್ಗೆ ಕೆಲ ವಿಡಿಯೋಗಳು ಬಹಿರಂಗವಾಗಿ ಸಾರ್ವಜನಿಕ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರವು, ರಾಮಚಂದ್ರ ರಾವ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಿತು.ಈಗ ರಾವ್ ವಿರುದ್ಧ ಸಿಐಡಿ ವಿಚಾರಣೆ ನಡೆಸುವ ಬಗ್ಗೆ ಸರ್ಕಾರ ಮಹತ್ವದ ಹೆಜ್ಜೆ ಇಡಲು ಮುಂದಾಗಿದೆ. ಇನ್ನು ನಿವೃತ್ತಿಗೆ ಕೆಲವೇ ತಿಂಗಳಿರುವ ಕಾರಣ ರಾಮಚಂದ್ರರಾವ್ ವಿರುದ್ಧ ಸರ್ಕಾರ ಯಾವ ಕ್ರಮ ತೆಗೆದುಕೊಳ್ಳಲಿದೆ ಎಂದು ಇಲಾಖೆಯಲ್ಲಿ ಕುತೂಹಲ ಮೂಡಿದೆ.
-ಬಾಕ್ಸ್-ಡಿಸಿಆರ್‌ಇಗೆ ಉಮೇಶ್ ಕುಮಾರ್
ರಾಜ್ಯ ನಾಗರಿಕ ಹಕ್ಕು ಜಾರಿನಿರ್ದೇಶನಾಲಯದ ಡಿಜಿಪಿ ಹುದ್ದೆಗೆ ಪ್ರಭಾರಿಯಾಗಿ ನೇಮಕಾತಿ ವಿಭಾಗದ ಮುಖ್ಯಸ್ಥ ಉಮೇಶ್ ಕುಮಾರ್ ಅವರನ್ನು ಸರ್ಕಾರ ಬುಧವಾರ ನೇಮಿಸಿದೆ. ಲೈಂಗಿಕ ಹಗರಣ ಆರೋಪ ಹಿನ್ನಲೆಯಲ್ಲಿ ಡಿಸಿಆರ್‌ಇ ಡಿಜಿಪಿ ರಾಮಚಂದ್ರರಾವ್ ಅಮಾನತುಗೊಂಡಿದ್ದರಿಂದ ಹುದ್ದೆ ಖಾಲಿ ಇತ್ತು. ಸರ್ಕಾರದ ಆದೇಶದ ಬೆನ್ನಲ್ಲೇ ಡಿಸಿಇಆರ್ ಮುಖ್ಯಸ್ಥ ಹುದ್ದೆಯನ್ನು ಗುರುವಾರ ಉಮೇಶ್ ಕುಮಾರ್ ಅಲಂಕರಿಸಲಿದ್ದಾರೆ ಎಂದು ತಿಳಿದು ಬಂದಿದೆ.