ಅಂಜಲಿ ಹತ್ಯೆ ಆರೋಪಿ ಸಿಐಡಿ ಪೊಲೀಸರ ವಶಕ್ಕೆ

| Published : May 23 2024, 01:08 AM IST

ಸಾರಾಂಶ

ಅಂಜಲಿ ಅಂಬಿಗೇರ ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿ ಚುರುಕುಗೊಳಿಸಿದೆ. ಬುಧವಾರ ಸಿಐಡಿಯ ಒಂದು ತಂಡ ಕಿಮ್ಸ್‌ನಲ್ಲಿರುವ ಆರೋಪಿ ವಿಶ್ವನಾಥ ಅಲಿಯಾಸ್‌ ಗಿರೀಶ್‌ ಸಾವಂತ್‌ನನ್ನು ವಶಕ್ಕೆ ಪಡೆದು ಸುದೀರ್ಘ ವಿಚಾರಣೆಗೆ ಒಳಪಡಿಸಿತು.

ಹುಬ್ಬಳ್ಳಿ: ಅಂಜಲಿ ಅಂಬಿಗೇರ ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿ ಚುರುಕುಗೊಳಿಸಿದೆ. ಬುಧವಾರ ಸಿಐಡಿಯ ಒಂದು ತಂಡ ಕಿಮ್ಸ್‌ನಲ್ಲಿರುವ ಆರೋಪಿ ವಿಶ್ವನಾಥ ಅಲಿಯಾಸ್‌ ಗಿರೀಶ್‌ ಸಾವಂತ್‌ನನ್ನು ವಶಕ್ಕೆ ಪಡೆದು ಸುದೀರ್ಘ ವಿಚಾರಣೆಗೆ ಒಳಪಡಿಸಿದರೆ, ಇನ್ನೊಂದು ತಂಡ ವೀರಾಪೂರ ಓಣಿಯಲ್ಲಿರುವ ಅಂಜಲಿ ನಿವಾಸಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿತು. ವಿಚಾರಣೆ ವೇಳೆ ಆರೋಪಿಯು ಅಂಜಲಿ ಮೈಸೂರಿಗೆ ಬರಲು ಹಾಗೂ ಪ್ರೀತಿ ನಿರಾಕರಿಸಿದ ಕಾರಣ ಕೊಲೆ ಮಾಡಿರುವ ಬಗ್ಗೆ ಬಾಯ್ಬಿಟ್ಟಿದ್ದಾನೆ. ಕೊಲೆ ಹಿಂದಿನ ದಿನ ಅಂಜಲಿಗೆ ಫೋನ್‌ ಪೇ ಮೂಲಕ ₹1000 ಕೂಡ ಹಾಕಿದ್ದೆ ಎಂದು ತಿಳಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಸಿಐಡಿಯ ಇನ್ನೊಂದು ತಂಡ ಇಲ್ಲಿಯ ವೀರಾಪೂರ ಓಣಿಯ ಅಂಜಲಿ ಅಂಬಿಗೇರ ಅವರ ಮನೆಗೆ ಭೇಟಿ ನೀಡಿ ಅವಳ ಅಜ್ಜಿ ಗಂಗಮ್ಮ ಹಾಗೂ ಅಂಜಲಿಯ ಸಹೋದರಿಯರ ಹೇಳಿಕೆ ಪಡೆಯಿತು.

ಕಿಮ್ಸ್‌ನಲ್ಲೂ ವಿಶ್ವನಾಥನ ಕಿರಿಕ್‌

ಆರೋಪಿ ವಿಶ್ವನಾಥ ಸಾವಂತ್‌ ನಗರದ ಕಿಮ್ಸ್‌ನ ಬಂಧಿಯ ಕೊಠಡಿಯಲ್ಲಿ ಕಳೆದ ಐದು ದಿನದಿಂದ ಚಿಕಿತ್ಸೆ ಪಡೆಯುತ್ತಿದ್ದ. ಮಂಗಳವಾರ ಈ ಕೊಠಡಿ ಸ್ವಚ್ಛತಾ ಕಾರ್ಯಕ್ಕೆ ಹೋದ ಮಹಿಳಾ ಸಿಬ್ಬಂದಿಯೊಂದಿಗೂ ಅನುಚಿತವಾಗಿ ವರ್ತಿಸಿ ಹುಚ್ಚಾಟ ಮೆರೆದಿದ್ದಾನೆ. ಈ ಹಿನ್ನೆಲೆಯಲ್ಲಿ ಕೊಠಡಿಗೆ ಪೊಲೀಸ್‌ ಇಲಾಖೆ ಹೆಚ್ಚಿನ ಭದ್ರತೆಗೆ 8 ಜನ ಸಿಬ್ಬಂದಿ ಸಹ ನಿಯೋಜಿಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

22ಎಚ್‌ಯುಬಿ1